ಟಿ-20 ವಿಶ್ವಕಪ್| ಐರ್ಲ್ಯಾಂಡ್ ನಾಯಕ ಪೌಲ್ ಸ್ಟಿರ್ಲಿಂಗ್ ಪಂದ್ಯಾವಳಿಯಿಂದ ಔಟ್

ಪೌಲ್ ಸ್ಟಿರ್ಲಿಂಗ್ | Photo Credit ; PTI
ಚೆನ್ನೈ, ಫೆ.13: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಐರ್ಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಪೌಲ್ ಸ್ಟಿರ್ಲಿಂಗ್ ಈಗ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಐರ್ಲ್ಯಾಂಡ್ ತಂಡಕ್ಕೆ ಸ್ಟಿರ್ಲಿಂಗ್ ಬದಲಿಗೆ ಸ್ಯಾಮ್ ಟೋಪ್ಪಿಂಗ್ರನ್ನು ಸೇರ್ಪಡೆಗೊಳಿಸಲು 2026ರ ಅವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯ ಈವೆಂಟ್ ಟೆಕ್ನಿಕಲ್ ಕಮಿಟಿ ಶುಕ್ರವಾರ ಅನುಮೋದನೆ ನೀಡಿದೆ.
ಆಸ್ಟ್ರೇಲಿಯ ತಂಡದ ವಿರುದ್ಧ ಬುಧವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಸ್ಟಿರ್ಲಿಂಗ್ ಮೊಣಕಾಲು ನೋವಿಗೆ ಒಳಗಾಗಿದ್ದರು. ಅದೇ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಕ್ಷಿಪ್ರವಾಗಿ ಒಂದು ರನ್ ಗಳಿಸುವ ಧಾವಂತದಲ್ಲಿದ್ದಾಗ ನೋವು ಉಲ್ಬಣಗೊಂಡಿತ್ತು.
ಹೊಸ ಆಟಗಾರ ಟೋಪ್ಪಿಂಗ್ 15 ಸದಸ್ಯರನ್ನು ಒಳಗೊಂಡ ಐರ್ಲ್ಯಾಂಡ್ ತಂಡವನ್ನು ಶೀಘ್ರವೇ ಸೇರಲಿದ್ದಾರೆ. 20ರ ವಯಸ್ಸಿನ ಎಡಗೈ ಆರಂಭಿಕ ಬ್ಯಾಟರ್ ಕಳೆದ ವರ್ಷ ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ‘ಎ’ ವಿರುದ್ಧ ಚತುರ್ದಿನ ಪಂದ್ಯದಲ್ಲಿ ಐರ್ಲ್ಯಾಂಡ್ ‘ಎ’ ಪರವಾಗಿ ಆಡಿದ್ದರು.
ಐರ್ಲ್ಯಾಂಡ್ ತಂಡವು ಶನಿವಾರ ಕೊಲಂಬೊದಲ್ಲಿ ಒಮಾನ್ ತಂಡದ ವಿರುದ್ಧ ಸೆಣಸಾಡಲಿದೆ.




