ಜ್ಯೂರಿಚ್ ಡೈಮಂಡ್ ಲೀಗ್: ನೀರಜ್ ಚೋಪ್ರಾ ಎರಡನೇ ಸ್ಥಾನಕ್ಕೆ

ಜ್ಯೂರಿಜ್: ಜಾವೆಲಿನ್ ಎಸೆತದಲ್ಲಿ ಹೊಸದಾಗಿ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ತಾರೆ ನೀರಜ್ ಚೋಪ್ರಾ ತಮ್ಮ ಅತ್ಯುತ್ತಮ ಸಾಧನೆ ಮರುಕಳಿಸುವಲ್ಲಿ ವಿಫಲರಾಗಿ ಡೈಮಂಡ್ ಲೀಗ್ ನ ಜಾವೆಲಿನ್ ಎಸೆತ ವಿಭಾಗದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಗುರುವಾರ ನಡೆದ ಸ್ಪರ್ಧೆಯಲ್ಲಿ 25 ವರ್ಷ ವಯಸ್ಸಿನ ಚೋಪ್ರಾ 85.71 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಮೂರು ಪ್ರಯತ್ನಗಳಲ್ಲಿ ಚೋಪ್ರಾ 80.79 ಮೀಟರ್, 85.22 ಮೀಟರ್ ಹಾಗೂ 85.71 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರೆ ಉಳಿದ ಮೂರು ಪ್ರಯತ್ನಗಳು ದೋಷಯುಕ್ತವಾಗಿದ್ದವು. ವಿಶ್ವಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಝೆಕ್ ಗಣರಾಜ್ಯದ ಯಾಕುಬ್ ವದ್ಲೇಚ್ (85.86) ಸಾಧನೆ ಮಾಡಿದರು.
ಪ್ರಸಕ್ತ ಸೀಸನ್ ನಲ್ಲಿ ಇದುವರೆಗೆ ಅಜೇಯ ಎನಿಸಿದ್ದ ಭಾರತದ ಸೂಪರ್ ಸ್ಟಾರ್ ಡೈಮಂಡ್ ಲೀಗ್ ಫೈನಲ್ಸ್ ಗೆ ಅರ್ಹತೆ ಪಡೆದಿದ್ದು, ಸೆಪ್ಟೆಂಬರ್ 17ರಂದು ಅಮೆರಿಕದ ಯೂಜೆನ್ ನಲ್ಲಿ ಫೈನಲ್ಸ್ ನಡೆಯಲಿದೆ. ಮೂರು ಕೂಟಗಳಿಂದ 23 ಅಂಕ ಸಂಪಾದಿಸಿರುವ ಚೋಪ್ರಾ ಕಳೆದ ವರ್ಷ ಡೈಮಂಡ್ ಲೀಗ್ ಟ್ರೋಫಿ ಗೆದ್ದಿದ್ದರು.
ಮೇ 5ರಂದು ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಕೂಟ ಮತ್ತು ಜೂನ್ 30ರಂದು ನಡೆದ ಲಾಸನ್ ಕೂಟಗಳಲ್ಲಿ ಜಯ ಸಾಧಿಸಿದ್ದ ಚೋಪ್ರಾ ಇತ್ತೀಚೆಗೆ ಬುಡಾಪೆಸ್ಟ್ ನಲ್ಲಿ ನಡೆದ ವಿಶ್ವಚಾಂಪಿಯನ್ ಶಿಪ್ ನಲ್ಲಿ 88.17 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನ ಗೆದ್ದಿದ್ದರು.







