ಶೃಂಗೇರಿ | ಕಾಡಾನೆ ದಾಳಿಗೆ ಇಬ್ಬರು ಬಲಿ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಕಾಡಾನೆ ದಾಳಿಗೆ ಸಿಲುಕಿ ಇಬ್ಬರು ಮೃತಪಟ್ಟಿರುವ ಘಟನೆ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬ ಗ್ರಾಮದ ಎಲ್ಸಾರ್ ಬಳಿ ಶುಕ್ರವಾರ ನಡೆದಿದೆ.
ಮೃತರನ್ನು ಕೆರೆಗದ್ದೆಯ ಉಮೇಶ್ (54) ಮತ್ತು ಹರೀಶ್ ಶೆಟ್ಟಿ (43) ಎಂದು ಗುರುತಿಸಲಾಗಿದೆ.
ಘಟನೆ ವಿವರ: ಹರೀಶ್ ಶೆಟ್ಟಿ ಬೆಳಗ್ಗೆ ದನದ ಕೊಟ್ಟಿಗೆಗೆ ಹಾಕಲು ಮನೆಯ ಸಮೀಪದಿಂದ ಕಾಡಿನಿಂದ ಸೊಪ್ಪು ತರಲು ತೆರಳಿದ್ದು, ಸೊಪ್ಪು ಕಡಿದು ಹೊರೆ ಕಟ್ಟಿ ಮನೆ ಕಡೆ ಹೊರಟ್ಟಿದ್ದಂತೆ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು. ಪರಿಣಾಮ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಆನೆ ದಾಳಿ, ನಾಯಿ ಬೊಗಳಿದ್ದನ್ನು ಕೇಳಿ ಉಮೇಶ್ ಅವರು ಕಾಡು ದಾರಿಯಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆನೆ ಉಮೇಶ್ ಮೇಲೂ ದಾಳಿ ನಡೆಸಿದ್ದು, ತೀವ್ರ ದಾಳಿಯಿಂದ ಅವರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಖಂಡಿಸಿ ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು, ರಾಷ್ಟ್ರೀಯ ಹೆದ್ದಾರಿ 169 ರ ಶೃಂಗೇರಿ-ಕಾರ್ಕಳ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಬರಬೇಕು. ಮೃತರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ, ಕುಟುಂಬದ ಸದಸ್ಯರಿಗೆ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಸೇರಿದಂತೆ ಮತ್ತಿತರ ಬೇಡಿಕೆ ಇಟ್ಟು, ಮೃತದೇಹವನ್ನು ಮುಟ್ಟಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ವಾಹನಗಳನ್ನು ಅಡ್ಡಗಟ್ಟಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ 538 ಕುಟುಂಬಗಳಿಗೆ ಪುನರ್ವಸತಿ ಪ್ಯಾಕೇಜ್ ನೀಡಬೇಕು. ಗ್ರಾಮಸ್ಥರ ಸಭೆಯನ್ನು ಶೀಘ್ರವಾಗಿ ನಡೆಸಬೇಕೆಂದು ಒತ್ತಾಯಿಸಿದರಲ್ಲದೆ, ಸರಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದರು.
ಮಧ್ಯಾಹ್ನ ನಂತರ ಪ್ರತಿಭಟನಾಕಾರರ ಮನವೊಲಿಸಿದ ಅಧಿಕಾರಿಗಳು ಹಾಗೂ ಶೃಂಗೇರಿ ಶಾಸಕರು, ಹೆದ್ದಾರಿ ತಡೆಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾದರು. ಬಳಿಕ ಮೃತಪಟ್ಟ ಇಬ್ಬರು ರೈತರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು.
ಸ್ಥಳಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮಟೆ, ಡಿವೈಎಸ್ಪಿ ಬಾಲಾಜಿ ಸಿಂಗ್, ತಹಶೀಲ್ದಾರ್ ಅನೂಪ್ ಸಂಜೋಗ್ ಭೇಟಿ ನೀಡಿ ಮಾತುಕತೆ ನಡೆಸಿದರು.
ಉದ್ಯಾನವನ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಉಪಟಳ ತೀವ್ರವಾಗಿದ್ದು, ತಾಲೂಕಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಘಟನೆ ಎರಡನೆಯದ್ದಾಗಿದೆ. ಎರಡು ವರ್ಷದ ಹಿಂದೆ ಕಲ್ಚಾರ್ ಕೃಷ್ಣಪ್ಪ ಆನೆ ದಾಳಿಯಿಂದ ಮೃತಪಟ್ಟಿದ್ದು, ಇದೀಗ ಮತ್ತೆ ಅದೇ ರೀತಿ ಘಟನೆ ಮರುಕಳಿಸಿದೆ. ಉದ್ಯಾನವನ ವ್ಯಾಪ್ತಿಯಲ್ಲಿ 538 ಕುಟುಂಬಗಳಿದ್ದು, ಸರಕಾರ ಸಮರ್ಪಕ ಪರಿಹಾರ ನೀಡುವ ಮೂಲಕ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಮೃತಪಟ್ಟ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು.
ರಾಜೇಶ್ ದ್ಯಾವಂಟ, ಕೆರೆಕಟ್ಟೆ ಗ್ರಾಮ ಪಂಚಾಯಿತಿ, ಶೃಂಗೇರಿ.
ಘಟನೆ ಮರುಕಳಿಸದಂತೆ ಆನೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಸಚಿವರ ಬಳಿ ಸಮಸ್ಯೆ ಗಂಭೀರತೆ ಬಗ್ಗೆ ಚರ್ಚಿಸಲಾಗುವುದು. ನ.17ರಂದು ಜನ ಸಂಪರ್ಕ ಸಭೆಯನ್ನು ಏರ್ಪಡಿಸಿ, ಉದ್ಯಾನವನ ವ್ಯಾಪ್ತಿಯ ಜನರ ಸಮಸ್ಯೆ ಬಗ್ಗೆ ಚರ್ಚಿಸಲಾಗುತ್ತದೆ. ಮೃತಪಟ್ಟ ರೈತರ ಕುಟುಂಬಕ್ಕೆ ಸರಕಾರ ನಿಗದಿ ಪಡಿಸಿದ ತಲಾ 20 ಲಕ್ಷ ರೂ., ಅರಣ್ಯ ಇಲಾಖೆಯಿಂದ ತಲಾ 3 ಲಕ್ಷ ರೂ., ವೈಯಕ್ತಿಕವಾಗಿ ತಲಾ 2 ಲಕ್ಷ ರೂ. ನೀಡಲಾಗುವುದು.
ಟಿ.ಡಿ.ರಾಜೇಗೌಡ, ಶೃಂಗೇರಿ ಶಾಸಕ







