ಪ್ರತಿಪಕ್ಷಗಳ ಸಭೆಗೆ ಬೆಂಗಳೂರು ಸಜ್ಜು: ಪ್ರಮುಖ ಬೀದಿಗಳಲ್ಲಿ ರಾರಾಜಿಸುತ್ತಿರುವ ಮುಖಂಡರ ಫ್ಲೆಕ್ಸ್, ಕಟೌಟ್‍ಗಳು

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ನಾಳೆ(ಜು.18) ವಿರೋಧ ಪಕ್ಷಗಳ ಸಭೆ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಭರ್ಜರಿ ಸಿದ್ದತೆ ನಡೆದಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ನೇತೃತ್ವದಲ್ಲಿ ನಗರದ ಖಾಸಗಿ ಹೊಟೇಲ್‍ನಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ 24 ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಬಿಜೆಪಿಯ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸುವ ವಿಪಕ್ಷಗಳ ಸಭೆಗೆ ವಿವಿಧ ಪಕ್ಷಗಳು ತಮ್ಮ ಬೆಂಬಲವನ್ನು ಸೂಚಿಸಿವೆ.
ಸಭೆಯ ಹಿನ್ನೆಲೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್, ಹೊಸದಿಲ್ಲಿ ಮುಖ್ಯಮಂತ್ರಿ ಅರವೀಂದ್ರ ಕೇಜ್ರಿವಾಲ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಹಲವು ಮುಖಂಡರ ಪೋಸ್ಟರ್‍ಗಳು ನಗರದ ಪ್ರಮುಖ ಬೀದಿಗಳಲ್ಲಿ ರಾರಾಜಿಸುತ್ತಿವೆ.
ಜೂನ್ 23ಕ್ಕೆ ಬಿಹಾರ ರಾಜ್ಯದ ರಾಜಧಾನಿ ಪಾಟ್ನಾದಲ್ಲಿ ಜೆಡಿಯು ಮುಖಂಡ ನಿತೀಶ್ ಕುಮಾರ್ ಆಯೋಜಿಸಿದ್ದ ಪ್ರತಿಪಕ್ಷಗಳ ಮೊದಲ ಸಭೆಯಲ್ಲಿ 20 ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಮುಂದಿನ ಕಾರ್ಯತಂತ್ರ ರೂಪಿಸಲು ಶಿಮ್ಲಾದಲ್ಲಿ ಸಭೆ ಸೇರಲು ತೀರ್ಮಾನಿಸಲಾಗಿತ್ತು. ಆದರೆ, ಶಿಮ್ಲಾದಲ್ಲಿ ನ ಆ ಸಭೆ ರದ್ದುಗೊಂಡಿದ್ದು, ಇದೀಗ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
‘ತಾಜ್ ವೆಸ್ಟ್ ಎಂಡ್ ಹೊಟೇಲ್‍ನಲ್ಲಿ ಜು.17ರ ಸೋಮವಾರದಿಂದ ನಡೆಯಲಿರುವ ಕೇಂದ್ರದ ವಿರೋಧ ಪಕ್ಷಗಳ ನಾಯಕರ ಸಭೆಯ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದೆ. ಈ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಇನ್ನಿತರ ನಾಯಕರು ನನ್ನೊಂದಿಗೆ ಇದ್ದರು’
-ಸಿದ್ಧರಾಮಯ್ಯ ಮುಖ್ಯಮಂತ್ರಿ
ಸಂಚಾರ ಮಾರ್ಗ ಬದಲಾವಣೆ
ವಿವಿಧ ರಾಜ್ಯಗಳ ವಿರೋಧ ಪಕ್ಷಗಳ ಹಲವು ನಾಯಕರು ಜು.17 ಮತ್ತು 18ರಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಸಭೆಯನ್ನು ಆಯೋಜಿಸಿರುವುದರಿಂದ ನಗರದ ಹಲವೆಡೆ ಸಂಚಾರ ಪೊಲೀಸರು ರಸ್ತೆ ಮಾರ್ಗಗಳನ್ನು ಬದಲಾವಣೆ ಸೂಚನೆ ನೀಡಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಕಬ್ಬನ್‍ರಸ್ತೆ, ರಾಜಭವನ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್‍ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಸಾರ್ವಜನಿಕರು ಈ ಮಾರ್ಗಗಳ ಬದಲಿಗೆ ಬೇರೆ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ. ಇನ್ನು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ, ರೇಸ್‍ಕೋರ್ಸ್ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.







