ಬಂಡೀಪುರ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ಕಾಮಗಾರಿ; ಅರಣ್ಯ ಇಲಾಖೆಯಿಂದ ನಟ ಗಣೇಶ್ಗೆ ನೋಟೀಸ್

ಫೋಟೊ - twitter@GaneshFans
ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ನಿಯಮ ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಚಿತ್ರನಟ ಗಣೇಶ್ ಅವರಿಗೆ ಕರ್ನಾಟಕ ಅರಣ್ಯ ಇಲಾಖೆ ನೋಟೀಸ್ ಜಾರಿ ಮಾಡಿದ್ದು, ಕಟ್ಟಡ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ.
ʻʻಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿಯ ಸರ್ವೆ ನಂಬರ್ 105ರಲ್ಲಿ 1 ಎಕರೆ 24 ಗುಂಟೆ ಜಮೀನಿದ್ದು, ವಾಸಕ್ಕೆ ಮನೆ ಮತ್ತು ತೋಟಗಾರಿಕೆ ಉದ್ದೇಶದಿಂದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಅನುಮತಿ ನೀಡಬೇಕು ಎಂದು ಗಣೇಶ್ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು.ಆದರೆ, ಅವರು ಬೃಹತ್ ಕಟ್ಟಡ ನಿರ್ಮಿಸುತ್ತಿದ್ದಾರೆ. ಅದಕ್ಕೆ ಪೂರಕವೆಂಬಂತೆ, ಕಟ್ಟಡದ ಅಡಿಪಾಯಕ್ಕಾಗಿ ದೊಡ್ಡ ಕಾಂಕ್ರೀಟ್ ಪಿಲ್ಲರ್ಗಳನ್ನು ಹಾಕಲಾಗಿದೆ. ಕಟ್ಟಡ ನಿರ್ಮಾಣ ಬಿರುಸಿನಿಂದ ಸಾಗಿದ್ದು, ಜೆಸಿಬಿಯನ್ನೂ ಬಳಸಲಾಗುತ್ತಿದೆʻʻ ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ನೋಟಿಸ್ನಲ್ಲಿ ಏನಿದೆ?:
ʼʼಬಂಡೀಪುರ ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ನೀಡಿರುವ ನಿಬಂಧನೆಗಳನ್ನು ಹಾಗೂ ನೀವು ಮುಚ್ಚಳಿಕೆ ಪತ್ರದಲ್ಲಿ ಬರೆದುಕೊಟ್ಟಿರುವ ಷರತ್ತುಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕಟ್ಟಡಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು (ಕಟ್ಟಡದ ಅನುಮೋದಿತ ನೀಲ ನಕ್ಷೆ, ಕಂದಾಯ ಇಲಾಖೆ ಹಾಗೂ ಇತರೆ ಸಂಬಂಧಿತ ಇಲಾಖೆಗಳಿಂದ ತಾತ್ಕಾಲಿಕ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ) ಪಡೆದುಕೊಂಡಿರುವ ಅನುಮೋದಿತ ದಾಖಲಾತಿಗಳನ್ನು ಈ ಪತ್ರ ತಲುಪಿದ 07 ದಿನಗಳ ಒಳಗಾಗಿ ಅಧ್ಯಕ್ಷರು, ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರ ಮುಂದೆ ಹಾಜರು ಪಡಿಸಲು ಮು೦ದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿದೆʼʼ ಎಂದು ಪತ್ರದಲ್ಲಿ ತಿಳಿಸಿದೆ.
ʼʼಪರಿಸರ ಸೂಕ್ಷ್ಮ ವಲಯ ಮಾರ್ಗಸೂಚಿಗೆ ವಿರುದ್ಧʼʼ
ʼʼಜಮೀನಿನಲ್ಲಿ ದೊಡ್ಡ ಕಾಂಕ್ರೀಟ್ ಪಿಲ್ಲರ್ಗಳನ್ನು ನಿರ್ಮಿಸಲಾಗಿದೆ. ಅದನ್ನು ತಾತ್ಕಾಲಿಕ ಕಟ್ಟಡ ಎನ್ನಲು ಸಾಧ್ಯವಿಲ್ಲ. ಜಮೀನಿಗೆ ಸೋಲಾರ್ ಬೇಲಿಯನ್ನೂ ಹಾಕಲಾಗಿದೆ. ಇದು ಪರಿಸರ ಸೂಕ್ಷ್ಮ ವಲಯ ಮಾರ್ಗಸೂಚಿಗೆ ವಿರುದ್ಧ’ ಎಂದು ಪರಿಸರವಾದಿ ಜೋಸೆಫ್ ಹೂವರ್ ತಿಳಿಸಿದ್ದಾರೆ.
‘ಬಂಡೀಪುರ ವ್ಯಾಪ್ತಿಯಲ್ಲಿ ಬೆಂಗಳೂರು ಸೇರಿದಂತೆ ದೂರದ ಊರುಗಳ ಸಿರಿವಂತರು, ಜಮೀನು ಖರೀದಿಸಿ ಮನೆ ನಿರ್ಮಿಸಿ ಜಮೀನು ಪೂರ್ತಿ ಬೇಲಿ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಅದರಿಂದ ಪ್ರಾಣಿಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ಮಾನವ –ವನ್ಯಜೀವಿ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ. ಅರಣ್ಯ ಇಲಾಖೆ ಕಡಿವಾಣ ಹಾಕಬೇಕು' ಎಂದು ಹೂವರ್ ಆಗ್ರಹಿಸಿದ್ದಾರೆ.







