ಕರಾವಳಿಯಲ್ಲಿ ಶಾಂತಿ ನೆಲೆಸಿದರೆ ವಿಶೇಷ ಕಾರ್ಯಪಡೆ ರದ್ದು : ಡಾ.ಜಿ.ಪರಮೇಶ್ವರ್

ಬೆಂಗಳೂರು, ಆ.12: ಕೋಮು ಹಿಂಸಾಚಾರ ತಡೆಗಾಗಿ ಕರಾವಳಿಯಲ್ಲಿ ವಿಶೇಷ ಕಾರ್ಯ ಪಡೆಯನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಶಾಂತಿ ನೆಲೆಸಿದರೆ ಈ ಕಾರ್ಯಪಡೆಯನ್ನು ರದ್ದು ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸದಸ್ಯ ವೇದವ್ಯಾಸ್ ಕಾಮತ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ಮಂಗಳೂರು ಬುದ್ಧಿವಂತರ ಜಿಲ್ಲೆ ಎಂದು ಖ್ಯಾತಿ ಪಡೆದಿತ್ತು. ಅನಂತರ ಕೋಮು ಗಲಭೆಗಳಿಂದಾಗಿ ಇಲ್ಲಿ ಕಾನೂನು, ಶಾಂತಿ ಸುವವಸ್ಥೆ ಹಾಳಾಗಿದ್ದು, ಸ್ಥಳೀಯರೇ ತಮ್ಮ ಮಕ್ಕಳನ್ನು ಬೇರೆ ಜಿಲ್ಲೆಗಳಿಗೆ ಕಳುಹಿಸಿ ಓದಿಸುವ ಸ್ಥಿತಿಗೆ ತಲುಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಾವು ಮಂಗಳೂರಿಗೆ ಭೇಟಿ ನೀಡಿದಾಗ ಉದ್ಯಮಿಗಳು, ಶಿಕ್ಷಣ ಸಂಸ್ಥೆಯವರು, ಸಂಘ-ಸಂಸ್ಥೆಗಳ ಜೊತೆ ಚರ್ಚೆ ನಡೆಸಿದ್ದೇನೆ. ಈ ವೇಳೆ ಶಾಂತಿ ಸುವ್ಯವಸ್ಥೆ ಬಗ್ಗೆ ಆತಂಕಗಳು ಕೇಳಿಬಂದಿವೆ. ಅದರಂತೆ ಪರಿಸ್ಥಿತಿ ನೋಡಿಯೇ ಸರಕಾರ ವಿಶೇಷ ಕಾರ್ಯಪಡೆ ರಚನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಶಾಂತಿ ಸ್ಥಾಪನೆಯಾದರೆ ಈ ಕಾರ್ಯಪಡೆಯನ್ನು ರದ್ದುಗೊಳಿಸಲು ಸರಕಾರ ಸಿದ್ಧವಿದೆ ಎಂದು ಅವರು ತಿಳಿಸಿದರು.
ಕರಾವಳಿಯಲ್ಲಿ ಕಾರ್ಯ ಪಡೆಯ ಅಧಿಕಾರಿಗಳು ಅನಗತ್ಯವಾಗಿ ಯಾರಿಗೂ ಕಿರುಕುಳ ನೀಡುವುದಿಲ್ಲ. ದ್ವೇಷ ಭಾಷಣ ಘಟನೆಗಳಿಗೆ ಸಂಬಂಧಪಟ್ಟಂತೆ ನಿಗಾ ಇಡುತ್ತಾರೆ. ಶಾಂತಿ ಭಂಗಕ್ಕೆ ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಸಂಭಾವ್ಯ ಕೋಮು ಹಿಂಸಾಚಾರದ ಮೇಲೆ ಕಣ್ಗಾವಲು ಇಡುತ್ತಾರೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023ರಲ್ಲಿ 11 ಕೋಮು ಪ್ರೇರಿತ ಕೊಲೆ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 10 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಒಂದು ಪ್ರಕರಣ ತನಿಖೆ ಹಂತದಲ್ಲಿದೆ. 2024ರಲ್ಲಿ 13 ಪ್ರಕರಣಗಳು ದಾಖಲಾಗಿದ್ದು, 12ಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 2025ನೇ ಸಾಲಿನಲ್ಲಿ ಆರು ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.
ಇದಕ್ಕೂ ಮೊದಲು ವೇದವ್ಯಾಸ ಕಾಮತ್ ಪ್ರಸ್ತಾಪಿಸಿ, ಕೋಮು ನಿಗ್ರಹ ಪಡೆಗೆ ಜಾನುವಾರುಗಳ ಕಳ್ಳ ಸಾಗಣೆ ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನೂ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಸ್ಪೀಕರ್ ಯು.ಟಿ.ಖಾದರ್, ಮಂಗಳೂರಿನ ಪರಿಸ್ಥಿತಿ ಹಾಗೂ ವಿಶೇಷ ಕಾರ್ಯ ಪಡೆಯ ಕುರಿತಂತೆ ಚರ್ಚೆ ನಡೆಸಲು ವಿಶೇಷ ಸಭೆ ಕರೆಯುವಂತೆ ಸಲಹೆ ನೀಡಿದರು.







