ಕೊಪ್ಪಳದಲ್ಲಿ ಗವಿಸಿದ್ದಪ್ಪ ಹತ್ಯೆ ಪ್ರಕರಣ: ಎನ್‍ಐಎಗೆ ವಹಿಸಲು ಬಿಜೆಪಿ ಮನವಿ

ಬೆಂಗಳೂರು, ಆ. 13: ‘ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಗವಿಸಿದ್ದಪ್ಪ ನಾಯಕ ಎಂಬವರ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ(ಎನ್‍ಐಎ)ಕ್ಕೆ ವಹಿಸಬೇಕು’ ಎಂದು ಪ್ರತಿಪಕ್ಷ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಜೆಡಿಎಸ್-ಬಿಜೆಪಿ ಮುಖಂಡರ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ.
ಆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವಿಜಯೇಂದ್ರ, ‘ಮತ್ತೊಂದು ಸಮುದಾಯದ ಯುವತಿಯನ್ನು ಪ್ರೇಮಿಸಿದ ಕಾರಣಕ್ಕೆ ಗವಿಸಿದ್ದಪ್ಪ ನಾಯಕ ಎಂಬವರನ್ನು ಕೊಲೆ ಮಾಡಲಾಗಿದೆ. ಹೀಗಾಗಿ ಆತನ ಕುಟುಂಬಕ್ಕೆ ಕನಿಷ್ಠ 50ಲಕ್ಷ ರೂ.ಪರಿಹಾರ ನೀಡಬೇಕು. 2 ಎಕರೆ ಜಮೀನು ಹಾಗೂ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಕೊಡಬೇಕು’ ಎಂದು ಆಗ್ರಹಿಸಿದರು.
ವಿಧಾನಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಮಾಜಿ ಸಚಿವರಾದ ಶ್ರೀರಾಮುಲು, ರಾಜುಗೌಡ, ಶಿವನಗೌಡ ನಾಯಕ, ಜನಾರ್ದನ ರೆಡ್ಡಿ ಸಂತ್ರಸ್ತನ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಇಂತಹ ಕೊಲೆಗಡುಕರಿಗೆ ಈ ಕಾಂಗ್ರೆಸ್ ಸರಕಾರದ ಬಗ್ಗೆ ವಿಪರೀತ ವಿಶ್ವಾಸ ಇದೆ. ಇದರಿಂದ ಮಂಗಳೂರು ಸೇರಿ ವಿವಿಧೆಡೆ ಸರಣಿ ಕೊಲೆಗಳು ನಡೆಯುತ್ತಿವೆ ಎಂದು ಅವರು ಟೀಕಿಸಿದರು.
ಅನುಮತಿಗೆ ಮನವಿ: ಸ್ಮಾರ್ಟ್ ಮೀಟರ್ ವಿಚಾರದ ಬಗ್ಗೆಯೂ ಇಂಧನ ಸಚಿವರ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ಕೋರಿದ್ದರು. ಆ ವಿಷಯದಲ್ಲೂ ಮತ್ತೊಮ್ಮೆ ಮನವಿ ಮಾಡಿದ್ದೇವೆ ಎಂದು ವಿಜಯೇಂದ್ರ ತಿಳಿಸಿದರು. ಈ ವೇಳೆ ಮಾಜಿ ಸಚಿವರಾದ ಬಿ.ಶ್ರೀರಾಮುಲು, ರಾಜುಗೌಡ, ಹತ್ಯೆಗೀಡಾದ ಗವಿಸಿದ್ದಪ್ಪ ನಾಯಕ ಕುಟುಂಬದ ಸದಸ್ಯರು ಸೇರಿದಂತೆ ಬಿಜೆಪಿ-ಜೆಡಿಎಸ್ ಶಾಸಕರು ಹಾಜರಿದ್ದರು.
ವಿಧಾನಸಭೆಯಲ್ಲೂ ಪ್ರತಿಧ್ವನಿ: ‘ಕೊಪ್ಪಳದ ಗವಿಸಿದ್ದಪ್ಪ ನಾಯಕ ಅವರ ಕೊಲೆ ಪ್ರಕರಣವನ್ನು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ವಿಜಯೇಂದ್ರ ವಿಷಯ ಪ್ರಸ್ತಾಪಿಸಿ, ‘ಮತ್ತೊಂದು ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದನೆಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಆರೋಪಿ ಎನ್ನಲಾದ ಸೈಯದ್ ಹಿಂದಿನ ದಿನವೇ ಮಾರಕಾಸ್ತ್ರವನ್ನಿಡಿದುಕೊಂಡ ರೀಲ್ಸ್ ಮಾಡಿ ಜಾಲತಾಣದಲ್ಲಿ ಹಾಕಿದ್ದರೂ, ಪೊಲೀಸರು ಕ್ರಮ ಕೈಗೊಂಡಿಲ್ಲʼ ಎಂದು ದೂರಿದರು.
ಇದಕ್ಕೆ ಆಕ್ಷೇಪಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ಪಷ್ಟನೆ ನೀಡಲು ಮುಂದಾದರು. ‘ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಸದಸ್ಯರು ಕೊಲೆ ಪ್ರಕರಣವನ್ನು ಕಲಾಪದಲ್ಲಿ ಪ್ರಸ್ತಾಪಿಸುತ್ತಿದ್ದಾರೆ’ ಎಂದು ದೂರಿದರು. ಆರೋಪಿಗಳನ್ನು ಬಂಧಿಸಲು ಸರಕಾರ ವಿಳಂಬ ಮಾಡಿದೆ ಎಂದು ಬಿಜೆಪಿ ಸದಸ್ಯರು ಟೀಕಿಸಿದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು.
ಈ ಹಂತದಲ್ಲಿ ಮಧ್ಯಪ್ರವೇಶಿಸಿ ಸ್ಪೀಕರ್ ಖಾದರ್, ‘ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪ ಆಗಿದೆ, ಚರ್ಚೆಗೆ ಇಲ್ಲಿ ಅವಕಾಶವಿಲ್ಲ. ಹೀಗಾಗಿ ಇಂದು ಅಥವಾ ನಾಳೆ ಗೃಹ ಸಚಿವರಿಂದ ಈ ಬಗ್ಗೆ ಉತ್ತರ ಕೊಡಿಸಲಾಗುವುದು’ ಎಂದು ವಿಷಯಕ್ಕೆ ತೆರೆಯೆಳೆದರು.







