‘ಬಿಡದಿ ಟೌನ್‍ಶಿಪ್’ ಕಾಂಗ್ರೆಸ್-ಜೆಡಿಎಸ್ ಮುಖಂಡರ ನಡುವೆ ಜಟಾಪಟಿ

ಬೆಂಗಳೂರು, ಸೆ. 29: ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯ ‘ಬಿಡದಿ ಟೌನ್‍ಶಿಪ್’ ವಿಚಾರ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ(ಜೆಡಿಎಸ್) ನಡುವೆ ಆರೋಪ-ಪ್ರತ್ಯಾರೋಪ, ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಸೋಮವಾರ ಇಲ್ಲಿನ ಸದಾಶಿವನಗರದಲ್ಲಿ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ‘ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಿಡದಿ ಟೌನ್‍ಶಿಪ್ ಮಾಡಬೇಕೆಂದು ಹೊರಟಿದ್ದರು. ಈ ಕಾರಣಕ್ಕೆ ಯಾವುದೇ ರೈತರಿಗೆ ಭೂ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದು 18 ವರ್ಷಗಳಿಂದ ನಡೆಯುತ್ತಿದೆ. ಆದ ಕಾರಣಕ್ಕೆ ನಾವು ಈ ಕೆಲಸವನ್ನು ಮುಂದುವರೆಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
‘ಭೂಮಿ ಕಳೆದುಕೊಳ್ಳುವ ರೈತರಿಗೆ ಕೇಂದ್ರದ 2013ರ ಪರಿಹಾರ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ. ಒಂದು ಎಕರೆ ಜಮೀನಿಗೆ ಒಂದುವರೆ ಕೋಟಿ ರೂ.ಗಳಷ್ಟು ಪರಿಹಾರ ದೊರೆಯುವಂತೆ ಮಾಡುವುದು ಸರಕಾರದ ಉದ್ದೇಶ. ಹಣ ಕೊಡುವುದೇ ಮುಖ್ಯವಲ್ಲ, ರೈತರನ್ನೂ ಪಾಲುದಾರರನ್ನಾಗಿ ಮಾಡಿಕೊಳ್ಳಲಾಗುವುದು. ಜೊತೆಗೆ ಪುರ್ನವಸತಿ ಬಗ್ಗೆಯೂ ಆಲೋಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ಯೋಜನೆಗೆ ಬಹುತೇಕ ಜನರು ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿ-ಜೆಡಿಎಸ್‍ನವರು ರಾಜಕೀಯ ಮಾಡುತ್ತಿದ್ದಾರೆ. ರಾಜಕಾರಣಕ್ಕೆ ರಾಜಕೀಯವಾಗಿ ಉತ್ತರ ನೀಡುತ್ತೇವೆ. ನಾವು ಕುಮಾರಸ್ವಾಮಿ ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇವೆ ಹೊರತು. ಇಲ್ಲಿ ನಮ್ಮದೇನೂ ಇಲ್ಲ ಎಂದು ಡಿ.ಕೆ.ಸುರೇಶ್ ತಿಳಿಸಿದರು.
ಅನಿತಾ ಕುಮಾರಸ್ವಾಮಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಸಂಬಂಧಪಟ್ಟವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಅವರು ಅದರಲ್ಲಿ ಏನು ಕೇಳಿಕೊಂಡಿದ್ದಾರೆ ಎಂಬುದನ್ನೂ ತಿಳಿಸಲಾಗಿದೆ ಎಂದ ಡಿ.ಕೆ.ಸುರೇಶ್, ‘ಕೆಲವರು ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಬಳಿ ಇನ್ನೂ ಏನೇನು ಮಾಹಿತಿ ಇದೆಯೆಂದು ನನಗೆ ಗೊತ್ತಿಲ್ಲ. ಕಾದು ನೋಡೋಣ’ ಎಂದು ಹೇಳಿದರು.
ಸುಳ್ಳು ಹೇಳುವ ಚಾಳಿ ಏಕೆ: ಡಿ.ಕೆ.ಸುರೇಶ್ ಅವರೇ, ಪದೇಪದೆ ಸುಳ್ಳು ಹೇಳುವ ಚಾಳಿ ಏಕೆ ನಿಮಗೆ? ಬಡ ರೈತರ ಜಮೀನು ಕೊಳ್ಳೆ ಹೊಡೆದು ಕೋಟೆ ಕಟ್ಟಿಕೊಳ್ಳಲು ಇಷ್ಟೆಲ್ಲಾ ಸುಳ್ಳಿನ ಕಥೆ ಕಟ್ಟಬೇಕೆ?. ನಿಮಗೆ ಮಾಹಿತಿ ಕೊರತೆ ಇದ್ದರೆ ಇನ್ನೊಬ್ಬರನ್ನು ಕೇಳಿ ತಿಳಿದುಕೊಳ್ಳಿ. ಬಿಡದಿ ಟೌನ್‍ಶಿಪ್ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಯಾವುದೇ ವಿಷಯವನ್ನೂ ಮುಚ್ಚಿಟ್ಟಿಲ್ಲ ಎಂಬುದನ್ನು ಮೊದಲು ತಿಳಿಯಿರಿ ಎಂದು ಜೆಡಿಎಸ್ ತಿರುಗೇಟು ನೀಡಿದೆ.
‘ನಿಮ್ಮ ಹಾಗೆ ದುಂಡಾವರ್ತನೆ ತೋರುವ ಜಾಯಮಾನ ಅವರದಲ್ಲ. ನಿಮ್ಮ ಯೋಗ್ಯತೆಗೆ ಈವರೆಗೆ ರೈತರನ್ನು ಕರೆದು ಒಂದು ಸಭೆಯನ್ನಾದರೂ ಮಾಡಿದ್ದೀರಾ? ಅದೇ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ರೈತರನ್ನು 3-4 ಬಾರಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರೆಸಿ ಸಭೆ ನಡೆಸಿದ್ದರು ಎಂಬುದು ನಿಮಗೆ ಗೊತ್ತೇ?’ ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಯೋಜನೆ ವಿರುದ್ಧ ನಿಮ್ಮದೇ ಪಕ್ಷದ ಎಚ್.ಕೆ.ಪಾಟೀಲ್, ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ರಚನೆ ಮಾಡಿದ್ದ ಸಮಿತಿ ಅಗೆದು ಬಗೆದೂ ಹೊರತೆಗೆದ ಸತ್ಯಶೋಧನಾ ವರದಿ ಏನಾಯಿತು?. ಅಂದು ರಾಮನಗರ ಜಿಲ್ಲೆಯ ಕಾಂಗ್ರೆಸ್ ನಾಯಕರೇ ವಿರೋಧ ಮಾಡಿದರಲ್ಲಾ. ಅವರೆಲ್ಲ ಈಗ ಎಲ್ಲಿ ಹೋಗಿ ಅವಿತಿದ್ದಾರೆ’ ಎಂದು ಜೆಡಿಎಸ್ ಕೇಳಿದೆ.
ಕುಮಾರಸ್ವಾಮಿ, ಯೋಜನೆಯ ಸ್ವರೂಪ ಜನಪಾಲುದಾರಿಕೆಯಲ್ಲಿತ್ತು. ನಿಮ್ಮದು ರಿಯಲ್ ಎಸ್ಟೇಟ್ ಪಾಲುದಾರಿಕೆ ಮತ್ತು ನಿಮ್ಮ ಸಂಪತ್ತು ಹೆಚ್ಚಿಸಿಕೊಳ್ಳುವ ಹಪಾಹಪಿ. ನಿಮ್ಮ ಪ್ರತೀ ಹೆಜ್ಜೆಯೂ ಅನುಮಾನಾಸ್ಪದ. ಬೆಂಗಳೂರಿನಲ್ಲಿ ಗುಂಡಿ ಮುಚ್ಚಲಿಕ್ಕೆ ಬಿಡಿಗಾಸಿಲ್ಲ, ಆದರೆ ಬಿಡದಿಯಲ್ಲಿ ಸ್ಮಾರ್ಟ್‍ಸಿಟಿ, ಮೊದಲು ರಸ್ತೆಗುಂಡಿಗೆ ಒಂದು ಸನಿಕೆ ಮಣ್ಣು ಹಾಕಿ, ಆಮೇಲೆ ಮಿಕ್ಕಿದ್ದು. ಮೊದಲು ಹೊಟ್ಟೆಗೆ ಹಿಟ್ಟು, ಆಮೇಲೆ ಜುಟ್ಟಿಗೆ ಮಲ್ಲಿಗೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ನಿಮ್ಮ ಸ್ಮಾರ್ಟ್‍ಸಿಟಿ ಗೋಲ್‍ಮಾಲ್ ಏನೆಂದು ಗೊತ್ತಿದೆ. ಹೊಸಕೆರೆಹಳ್ಳಿ ಬಳಿ ನೈಸ್ ಯೋಜನೆ ಭೂಮಿಯನ್ನು ನೈಸಾಗಿ ಡಿನೋಟಿಫೈ ಮಾಡಿಸಿಕೊಂಡು ಕಬ್ಜಾ ಮಾಡಿ ಗಗನಚುಂಬಿ ಕಟ್ಟಡ ಕಟ್ಟುತ್ತಿರುವಿಲ್ಲ. ಅದೇ ರೀತಿ ಬಿಡದಿಯಲ್ಲಿಯೂ ಗಗನಚುಂಬಿ ಕಟ್ಟಡಗಳನ್ನು ಎಬ್ಬಿಸಲು ಹೊರಟಿದ್ದೀರಿ. ಅಷ್ಟೇ ಅಲ್ಲವೇ? ಎಂದು ಜೆಡಿಎಸ್ ಲೇವಡಿ ಮಾಡಿದೆ.
‘ಬಿಡದಿ ಟೌನ್‍ಶಿಪ್'ಗೆ ಜೆಡಿಎಸ್ ವಿರೋಧ, ಕುಮಾರಸ್ವಾಮಿ ವಿರೋಧ, ನಿಖಿಲ್ ಕುಮಾರಸ್ವಾಮಿ ವಿರೋಧ ಎಂದು ಸುಳ್ಳಿನ ಮೇಲೆ ಸುಳ್ಳಿನ ಕಥೆ ಸೃಷ್ಟಿ ಮಾಡುತ್ತಿದ್ದೀರಿ. ಆದರೆ, ಜೆಡಿಎಸ್ ಸತ್ಯದ ಪರ ಇದೆ. ರೈತರ ಪರ ನಿಂತಿದೆ. ನೀವು ಹೋಗಬೇಕಿರುವುದು ಆ ಮಾರ್ಗದಲ್ಲಿ’ ಎಂದು ಜೆಡಿಎಸ್ ಸಲಹೆ ನೀಡಿದೆ.







