ಸರಕಾರದಲ್ಲಿ ಕಮಿಷನ್ ದುಪ್ಪಟ್ಟು ಆರೋಪ : ಸಿಎಂಗೆ ಗುತ್ತಿಗೆದಾರರ ಸಂಘ ಪತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಸೆ.29: ‘ಹಿಂದಿನ ಬಿಜೆಪಿ ಸರಕಾರಕ್ಕಿಂತ ನಿಮ್ಮ ನೇತೃತ್ವದ ಸರಕಾರದಲ್ಲಿ ಬಿಲ್ ಪಾವತಿಗೆ ಕಮಿಷನ್ ದುಪ್ಪಟ್ಟಾಗಿದೆ’ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ.
‘ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೀರಿ. ಆದರೆ, ಹಿಂದಿನ ಸರಕಾರಕ್ಕಿಂತ ಎಲ್ಲ ಇಲಾಖೆಗಳಲ್ಲೂ ಈಗ ಕಮಿಷನ್ ದುಪ್ಪಟ್ಟು ಆಗಿದೆ ಎಂದು ನಿಮ್ಮ ಗಮನಕ್ಕೆ ತರಲು ಸಂಘ ವಿಷಾದ ವ್ಯಕ್ತಪಡಿಸುತ್ತದೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ರಾಜ್ಯದಲ್ಲಿ ಹಿಂದಿದ್ದ ಬಿಜೆಪಿ ನೇತೃತ್ವದ ಸರಕಾರಕ್ಕಿಂತ ಈಗಿನ ಕಾಂಗ್ರೆಸ್ ಸರಕಾರದಲ್ಲಿ, ಅಧಿಕಾರಿಗಳು ಹೆಚ್ಚು ಕಮಿಷನ್ ಪಡೆಯುತ್ತಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘ 2025ರ ಮಾರ್ಚ್ನಲ್ಲಿ ಆರೋಪಿಸಿತ್ತು. ಆಗ ಮುಖ್ಯಮಂತ್ರಿಯವರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಎಪ್ರಿಲ್ನಲ್ಲಿ ಶೇ.50ರಷ್ಟು ಬಾಕಿ ಬಿಲ್ ಬಿಡುಗಡೆ ಮಾಡುವ ಭರವಸೆ ನೀಡಿದ್ದರು.
‘ಸುಮಾರು ಎರಡು ವರ್ಷಗಳಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಬಿಡುಗಡೆ ವಿಚಾರ ಮತ್ತು ಹಲವು ಸಮಸ್ಯೆಗಳ ಬಗ್ಗೆ ನಿಮ್ಮ ಜೊತೆ ಹಲವು ಬಾರಿ ಸಂಘದ ಪದಾಧಿಕಾರಿಗಳು ಚರ್ಚೆ ಮಾಡಿದ್ದೇವೆ. ನಮ್ಮ ಸಂಘವು ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಫಲವಾಗಿ, ತಮ್ಮ ಸರಕಾರ ಬರುವುದಕ್ಕೆ ಸ್ವಲ್ಪವಾದರೂ ನಾವು ಕಾರಣಕರ್ತರಾಗಿದ್ದೇವೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ' ಎಂದು ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಪತ್ರದಲ್ಲಿ ತಿಳಿಸಿದ್ದಾರೆ.
‘ನಮ್ಮನ್ನು ಪ್ರತಿ ಬಾರಿ ಸಮಾಧಾನ ಮಾಡಿ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೀರಿ. ನಿಮಗೆ ಗೌರವ ಕೊಟ್ಟು, ಅಪಾರ ನಂಬಿಕೆಯಿಂದ ಜಿಲ್ಲೆಗಳ ಎಲ್ಲ ಗುತ್ತಿಗೆದಾರರೂ ಸಮಾಧಾನದಿಂದ ಇದ್ದಾರೆ. ಆದರೆ, ಇದುವರೆಗೆ ನಿಮ್ಮ ಸರಕಾರದಿಂದ ನಮಗೆ ಪ್ರಯೋಜನವಾಗಿಲ್ಲ. ಇಲಾಖೆಗಳ ಸಚಿವರು, ಕಾರ್ಯದರ್ಶಿಗಳನ್ನು ಭೇಟಿ ಮಾಡಿದರೂ ಹಣ ಬಿಡುಗಡೆಯಾಗಿಲ್ಲ’ ಎಂದು ಆರ್.ಮಂಜುನಾಥ್ ದೂರಿದ್ದಾರೆ.
‘ಜೇಷ್ಠತೆ ಮತ್ತು ಪಾರದರ್ಶಕ ಕಾಯ್ದೆ ಅನುಸರಿಸದೆ, ಅವರದೇ ‘ಫಾರ್ಮುಲಾ’ಗಳನ್ನು ತಯಾರಿಸಿಕೊಂಡು, ಸ್ಪೆಷಲ್ ಎಲ್ಸಿ ರೂಪದಲ್ಲಿ ಗುತ್ತಿಗೆದಾರರ ಬಾಕಿ ಹಣದಲ್ಲಿ ಮೂರು ತಿಂಗಳಿಗೊಮ್ಮೆ ಶೇ.15ರಿಂದ ಶೇ.20ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದಾರೆ’ ಪತ್ರದಲ್ಲಿ ಎಂದು ಆರ್.ಮಂಜುನಾಥ್ ಆರೋಪಿಸಿದ್ದಾರೆ.







