ʼಕೋಟ್ಪಾʼ ದಂಡವನ್ನು ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಬಳಸುವಂತೆ ಮಾರ್ಗಸೂಚಿ ಪ್ರಕಟ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಸಿಗರೇಟ್ಸ್ ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ-2003ರ (ಕೋಟ್ಪಾ) ಅಡಿಯಲ್ಲಿ ಸಂಗ್ರಹವಾಗುವ ದಂಡವನ್ನು ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕಾಗಿಯೇ ಬಳಸಬೇಕು ಎಂದು ರಾಜ್ಯ ಸರಕಾರವು ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಕೋಟ್ಪಾ ಅಡಿಯಲ್ಲಿ ಸಂಗ್ರಹಿಸಲಾದ ದಂಡದ ಮೊತ್ತದಲ್ಲಿ ಶೇ.70ವರೆಗೆ ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಚಟುವಟಿಕೆಗಳಿಗೆ ಪ್ರಮುಖವಾಗಿ ತಂಬಾಕು ವ್ಯಸನ ಮುಕ್ತ ಸೇವೆಗಳಿಗೆ ಬಳಸಬೇಕು. ಜಿಲ್ಲಾ ತಂಬಾಕು ನಿಯಂತ್ರಣ ಘಟಕಗಳು ಹಿಂದಿನ ಆರ್ಥಿಕ ವರ್ಷದಲ್ಲಿ ಸಂಗ್ರಹಿಸಿದ ದಂಡದ ಮೊತ್ತದ ಬಳಕೆಗಾಗಿ ವಾರ್ಷಿಕ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದೆ.
ಜಿಲ್ಲಾ ಮಟ್ಟದಲ್ಲಿ ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ತರಬೇತಿ ಮತ್ತು ಕಾರ್ಯಾಗಾರಗಳನ್ನು ಆಯೋಜಿಸಬೇಕು. ಪ್ರತಿ ಕಾರ್ಯಗಾರ, ತರಬೇತಿಗೆ 16 ಸಾವಿರ ರೂ.ವರೆಗೆ ಬಳಸಬಹುದಾಗಿದೆ. ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಮಾರ್ಗಸೂಚಿಗಳ ಅನುಸರಣೆಗಾಗಿ ಶಾಲಾ ಆರೋಗ್ಯ ಕಾರ್ಯಕ್ರಮಕ್ಕೆ ವಾರ್ಷಿಕ 10 ಸಾವಿರ ರೂ.ವರೆಗೆ ಬಳಸಬಹುದಾಗಿದೆ.
ತಂಬಾಕು ಮುಕ್ತ ಗ್ರಾಮ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಗ್ರಾಮ ಮತ್ತು ಪಂಚಾಯತ್ ಮಟ್ಟದ ಜಾಗೃತಿ ಕಾರ್ಯಕ್ರಮಗಳ ಆಯೋಜನೆಗೆ ವಾರ್ಷಿಕ 10 ಸಾವಿರ ರೂ.ವರೆಗೆ, ತಂಬಾಕು ನಿಯಂತ್ರಣ ಕಾರ್ಯಕ್ರಮದ ಐಇಸಿ ಚಟುವಟಿಕೆಗಳಿಗೆ ವಾರ್ಷಿಕ 15 ಸಾವಿರ ರೂ.ವರೆಗೆ ಬಳಸಬಹುದಾಗಿದೆ. ಒಟ್ಟಾರೆ ವಾರ್ಷಿಕವಾಗಿ ದಂಡ ಮೊತ್ತದ ಬಳಕೆ 1 ಲಕ್ಷ ರೂ.ಗಳಿದ್ದರೆ, ಆರೋಗ್ಯ ಇಲಾಖೆಯ ಆಯುಕ್ತರ ಅನುಹಮತಿ ಪಡೆಯಬೇಕಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.







