ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ: ರಾಜ್ಯದ 10 ಕಡೆಗಳಲ್ಲಿ ಲೋಕಾಯುಕ್ತ ದಾಳಿ

ಬೆಂಗಳೂರು : ಆದಾಯಕ್ಕಿಂತ ಹೆಚ್ಚುವರಿ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆ ರಾಜ್ಯದ 10 ಕಡೆಗಳಲ್ಲಿ ಹಲವು ಸರಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಮಂಗಳವಾರ(ನ.25) ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬೆಂಗಳೂರು, ಮೈಸೂರು, ಕೊಡಗು, ಮಂಡ್ಯ, ಶಿವಮೊಗ್ಗ, ಧಾರವಾಡ, ಹಾವೇರಿ, ಬೀದರ್, ದಾವಣಗೆರೆ, ಯಾದಗಿರಿ ಜಿಲ್ಲೆಗಳಲ್ಲಿ 10 ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಆಯಾ ಜಿಲ್ಲೆಯ ಲೋಕಾಯುಕ್ತ ಎಸ್ಪಿಗಳ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ಕೈಗೊಂಡು ತೀವ್ರ ಪರಿಶೀಲನೆ ನಡೆಸಲಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆರ್‍ಟಿಒ ಕಚೇರಿಯ ಮೇಲ್ವಿಚಾರಕ ಕುಮಾರಸ್ವಾಮಿ, ಮಂಡ್ಯ ನಗರ ಪಾಲಿಕೆಯ ಸಿಎಒ ಪುಟ್ಟಸ್ವಾಮಿ, ಬೀದರ್‍ನ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರೇಮ್‍ಸಿಂಗ್, ಮೈಸೂರು ಜಿಲ್ಲೆಯ ಹೂಟಗಳ್ಳಿ ನಗರ ಪಾಲಿಕೆಯ ರೆವಿನ್ಯೂ ಇನ್‍ಸ್ಪೆಕ್ಟರ್ ರಾಮಸ್ವಾಮಿ ಸಿ., ಧಾರವಾಡದ ಕರ್ನಾಟಕ ವಿ.ವಿ.ಯ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ, ಧಾರವಾಡದ ಪಶು ಕ್ಲಿನಿಕ್‍ನ ಹಿರಿಯ ಪರೀಕ್ಷಕ ಸತೀಶ್, ಶಿವಮೊಗ್ಗದ ಎಸ್‍ಐಎಂಎಸ್ ಮೆಡಿಕಲ್ ಕಾಲೇಜಿನ ಎಫ್‍ಡಿಎ ಲಕ್ಷ್ಮೀಪತಿ ಸಿ.ಎನ್., ದಾವಣಗೆರೆಯ ಎಪಿಎಂಸಿ ಸಹ ನಿರ್ದೇಶಕ ಪ್ರಭು ಜೆ., ಮೈಸೂರು-ಕೊಡಗು ಪಿಡಬ್ಲ್ಯೂಡಿ ಇಂಜಿನಿಯರ್ ಗಿರೀಶ್ ಡಿ.ಎಂ., ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜನಿಯರ್ ಶೇಖಪ್ಪ ಸಣ್ಣಪ್ಪ ಮತ್ತಿಕಟ್ಟಿ ಎಂಬುವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ಕೈಗೊಳ್ಳಲಾಗಿದೆ.







