ರಾಜಧಾನಿಯ ವಿವಿಧೆಡೆ 15 ಲಕ್ಷ ಸಸಿಗಳ ನೆಟ್ಟು ‘ಇತಿಹಾಸ ನಿರ್ಮಿಸಿದ ಬಿಡಿಎ’

ಬೆಂಗಳೂರು : ಬೆಂಗಳೂರಿನಾದ್ಯಂತ ಒಂದೇ ದಿನದಲ್ಲಿ 15 ಲಕ್ಷ ದೇಸಿ ಜಾತಿಯ ಸಸಿಗಳನ್ನು ಯಶಸ್ವಿಯಾಗಿ ನೆಡುವ ಮೂಲಕ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ವು ಇತಿಹಾಸ ನಿರ್ಮಿಸಿದೆ. ಇದು ಭಾರತದ ಅತಿದೊಡ್ಡ ಹಸಿರು ಆವರಣ ಅಭಿಯಾನಗಳಲ್ಲಿ ಒಂದಾಗಿ ಕರ್ನಾಟಕದ ಸುಸ್ಥಿರ ಭವಿಷ್ಯದ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ ಮಹತ್ವದ ಹೆಜ್ಜೆಯಾಗಿದೆ. ಜೊತೆಗೆ, ಈ ಅಭಿಯಾನವು ‘ಗಿನ್ನೀಸ್ ಬುಕ್ ಆಫ್ ರೆಕಾರ್ಡ್’ನ ದಾಖಲೆ ಪುಟವನ್ನು ಸೇರಿದೆ.
ಶನಿವಾರ ಈ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ‘ಕೆಂಪೇಗೌಡ ರನ್-2026’ ಭವ್ಯವಾಗಿ ನಡೆಯಿತು. 5 ಕಿ.ಮೀ. ಮತ್ತು 10 ಕಿ.ಮೀ. ಓಟಗಳಲ್ಲಿ ಸಾವಿರಾರು ಓಟಗಾರರು ಉತ್ಸಾಹದಿಂದ ಭಾಗವಹಿಸಿದರು. ಓಟವು ನಗರದ ಎಸ್.ಎಂ.ಕೃಷ್ಣ ರಸ್ತೆ, ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಿಂದ ಆರಂಭಗೊಂಡು, ಅದೇ ಸ್ಥಳದಲ್ಲಿ ಸಮಾಪ್ತಿಗೊಂಡಿತು.
ನಾಡಪ್ರಭು ಕೆಂಪೇಗೌಡ ಜಯಂತಿಯ ಅಂಗವಾಗಿ ಆಯೋಜಿಸಲಾದ ಈ ಬೃಹತ್ ಸಸಿ ನೆಡುವ ಅಭಿಯಾನದಲ್ಲಿ ಸಾವಿರಾರು ನಾಗರಿಕರು, ವಿದ್ಯಾರ್ಥಿಗಳು, ಸರಕಾರಿ ಅಧಿಕಾರಿಗಳು, ನಿವಾಸಿಗಳ ಕಲ್ಯಾಣ ಸಂಘಗಳು, ಸ್ವಯಂಸೇವಾ ಸಂಸ್ಥೆಗಳು, ಕಾರ್ಪೊರೇ ಟ್ ಸ್ವಯಂಸೇವಕರು ಹಾಗೂ ಪರಿಸರ ಸಂಘಟನೆಗಳು ಉತ್ಸಾಹದಿಂದ ಪಾಲ್ಗೊಂಡು ಹಸಿರು ಹಾಗೂ ಸುಸ್ಥಿರ ಬೆಂಗಳೂರಿನ ನಿರ್ಮಾಣಕ್ಕೆ ಕೈಜೋಡಿಸಿದರು.
ಈ ಕಾರ್ಯಕ್ರಮವನ್ನು ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಶಿವರಾಮ ಕಾರಂತ ಬಡಾವಣೆ, ಆಕ್ಸಿಜನ್ ಟ್ರೀ ಪಾರ್ಕ್‍ಗಳು, ಮಿಯಾವಾಕಿ ಅರಣ್ಯಗಳು ಸೇರಿದಂತೆ ಬಿಡಿಎ ಅಭಿವೃದ್ಧಿಪಡಿಸಿರುವ ವಿವಿಧ ಹಸಿರು ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು.
ಈ ಅಭಿಯಾನದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಒಂದೇ ದಿನದಲ್ಲಿ 15 ಲಕ್ಷ ದೇಸಿ ಸಸಿಗಳ ನೆಡುವ ಕಾರ್ಯಕ್ರಮವು ಕರ್ನಾಟಕದ ಸುಸ್ಥಿರ ಅಭಿವೃದ್ಧಿಯ ಪಯಣದಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ. ಬೆಂಗಳೂರು ಬೆಳೆಯುತ್ತಿರುವಂತೆ ಅದರ ಹಸಿರು ಆವರಣವನ್ನು ಸಂರಕ್ಷಿಸುವುದು ಮತ್ತು ವಿಸ್ತರಿಸುವುದು. ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು, ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸುವುದು, ವಾಯು ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಸರಕಾರದ ಪ್ರಮುಖ ಆದ್ಯತೆಯಾಗಿದೆ’ ಎಂದರು.
‘ನಗರಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಸರಕಾರದ ಬದ್ಧತೆಯನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ. ನಗರದಲ್ಲಿ ನೆಡಲಾದ ಪ್ರತಿಯೊಂದು ಸಸಿಯೂ ಶುದ್ಧ ಗಾಳಿ, ಉತ್ತಮ ಪರಿಸರ ಸಮತೋಲನ ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯಕ್ಕಾಗಿ ಮಾಡಿದ ಅಮೂಲ್ಯ ಹೂಡಿಕೆಯಾಗಿದೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ‘ಇದು ಕೇವಲ ವೃಕ್ಷಾರೋಪಣ ಕಾರ್ಯಕ್ರಮವಲ್ಲ; ಇದು ಬೆಂಗಳೂರಿನ ಭವಿಷ್ಯಕ್ಕಾಗಿ ಜನಾಂದೋಲನವಾಗಿದೆ. ಸಾವಿರಾರು ನಾಗರಿಕರ ಭಾಗವಹಿಸುವಿಕೆ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸ್ಥಳೀಯ ಜಾತಿಯ ಮರಗಳು ಸದೃಢ ಪರಿಸರ ವ್ಯವಸ್ಥೆಯ ಅಡಿಪಾಯವಾಗಿದ್ದು, ಈ ಕಾರ್ಯಕ್ರಮವು ನಮ್ಮ ನಗರದ ಪರಿಸರ ಇತಿಹಾಸದಲ್ಲಿ ಶಾಶ್ವತವಾದ ಪರಂಪರೆಯನ್ನು ನಿರ್ಮಿಸಲಿದೆ’ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರಿಸ್ ಮಾತನಾಡಿ, ‘15 ಲಕ್ಷ ಸ್ಥಳೀಯ ಸಸಿಗಳ ಯಶಸ್ವಿ ನೆಡುವಿಕೆ ಬಿಡಿಎ ಕೈಗೊಂಡ ಅತ್ಯಂತ ಮಹತ್ವದ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೋಡಿಸಿದ ಪ್ರತಿಯೊಬ್ಬ ಸ್ವಯಂಸೇವಕ, ಸಹಭಾಗಿ ಸಂಸ್ಥೆ ಹಾಗೂ ನಾಗರಿಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದರು.
ಇದೇ ವೇಳೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಜೆ.ಜಾರ್ಜ್, ಕೆ.ಎಚ್. ಮುನಿಯಪ್ಪ, ಭೈರತಿ ಸುರೇಶ್, ಸರಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಶಾಸಕರಾದ ಎಸ್.ಟಿ.ಸೋಮಶೇಖರ್, ಬಿ.ಶಿವಣ್ಣ, ಬಾಲಕೃಷ್ಣ, ಬಿಡಿಎ ಆಯುಕ್ತ ಮೇಜರ್ ಪಿ.ಮಣಿವಣ್ಣನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗಿನ್ನೀಸ್ ದಾಖಲೆ ಪುಟ ಸೇರಿದ ಅಭಿಯಾನ: ‘ಒಂದೇ ದಿನದಲ್ಲಿ ಬರೋಬ್ಬರಿ 15 ಲಕ್ಷ ಗಿಡಗಳನ್ನು ನೆಡುವ ಮೂಲಕ ಈ ಅಭಿಯಾನವು ‘ಗಿನ್ನೀಸ್ ಬುಕ್ ಆಫ್ ರೇಕಾರ್ಡ್’ನ ಪಟ್ಟಿಗೆ ಸೇರಿಕೊಂಡಿತು. ನಗರದ ನೂರಾರು ಸಂಘ-ಸಂಸ್ಥೆಗಳು, ಸ್ವಯಂಸೇವಕರು ಹಾಗೂ ವಿವಿಧ ಇಲಾಖೆಗಳು ಸೇರಿ ಸಾವಿರಾರು ಜನರು ತಂಡೋಪತಂಡವಾಗಿ ಗಿಡಗಳನ್ನು ನೆಟ್ಟು ನೀರೆರೆದರು.
‘ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲೂ ಸುಸ್ಥಿರತೆಯನ್ನು ಅಳವಡಿಸಿಕೊಂಡು ಬೆಂಗಳೂರು ನಗರ ಯೋಜನೆಗೆ ಹೊಸ ದಿಕ್ಕು ನೀಡುತ್ತಿದ್ದೇವೆ. ಸುಸಜ್ಜಿತ ಹಾಗೂ ಪರಿಸರ ಸ್ನೇಹಿ ಬಡಾವಣೆಗಳ ನಿರ್ಮಾಣವೇ ನಮ್ಮ ಧ್ಯೇಯ.’
-ಎನ್.ಎ.ಹಾರಿಸ್, ಬಿಡಿಎ ಅಧ್ಯಕ್ಷ.






