ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಅ.18ರ ವರೆಗೆ ಸರಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕಾರ್ಯ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಅ.18ರ ವರೆಗೆ ರಜೆಯನ್ನು ವಿಸ್ತರಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸೆ.22ರಿಂದ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯುವ ಉದ್ದೇಶದಿಂದ ಸಮೀಕ್ಷೆ ಮಾಡಿಸುತ್ತಿದ್ದೇವೆ. ಅ.7ರ ವರೆಗೆ ಸಮೀಕ್ಷೆ ಮುಗಿಸಲು ತೀರ್ಮಾನ ಮಾಡಲಾಗಿತ್ತು. ಆದರೆ, ಕೆಲವು ಜಿಲ್ಲೆಗಳಲ್ಲಿ ಸಮೀಕ್ಷೆ ಕೆಲಸ ಪೂರ್ಣವಾಗಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಶೇ.97ರಷ್ಟು ಸಮೀಕ್ಷೆ ಆಗಿದೆ. ಅದೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.60 ರಿಂದ 63ರಷ್ಟು ಆಗಿದೆ ಎಂದು ಅವರು ತಿಳಿಸಿದರು.
ಇಡೀ ರಾಜ್ಯದಲ್ಲಿ ನಮ್ಮ ನಿರೀಕ್ಷೆಯ ರೀತಿಯಲ್ಲಿ ಸಮೀಕ್ಷೆ ಕಾರ್ಯ ನಡೆದಿಲ್ಲ. ಆದುದರಿಂದ, ಶಿಕ್ಷಣ ಇಲಾಖೆಯವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಚರ್ಚೆ ಮಾಡಿ ಶಾಲೆಯ ತರಗತಿಯ ಸಮಯ ವ್ಯತ್ಯಯದ ಕುರಿತು ಒಂದು ಆದೇಶ ಮಾಡಿದ್ದಾರೆ. ಈ ಸಮೀಕ್ಷೆ ಕಾರ್ಯದಲ್ಲಿ 1.20 ಲಕ್ಷ ಶಿಕ್ಷಕರು ಸೇರಿದಂತೆ ಒಟ್ಟು 1.60 ಲಕ್ಷ ಜನ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲು ಇನ್ನೂ 10 ದಿನ ಅವಕಾಶ ನೀಡುವಂತೆ ಶಿಕ್ಷಕರ ಸಂಘದವರು ಹಾಗೂ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಮನವಿ ಮಾಡಿದ್ದಾರೆ. ಆದುದರಿಂದ, ಅ.8 ರಿಂದ 18ರವರೆಗೆ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆ ನೀಡುತ್ತಿದ್ದೇವೆ. ಆದರೆ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಮಧ್ಯವಾರ್ಷಿಕ ಪರೀಕ್ಷೆಗಳು ಇರುವ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಕೊಂಡಿದ್ದ ಉಪನ್ಯಾಸಕರಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಅ.4 ರಿಂದ ಸಮೀಕ್ಷೆ ಆರಂಭವಾಗಿದ್ದು, ಶೇ.36ರಷ್ಟು ಪ್ರಗತಿಯಾಗಿದೆ. ಬೆಂಗಳೂರಿನಲ್ಲಿ 46 ಲಕ್ಷ ಮನೆಗಳಿದ್ದು, 6700 ಜನ ಶಿಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದಾರೆ. ಒಬ್ಬ ಸಮೀಕ್ಷೆದಾರರ ಒಂದು ದಿನಕ್ಕೆ ಕನಿಷ್ಠ 10-15 ಮನೆಗಳ ಸಮೀಕ್ಷೆ ಮಾಡಲು ಹೇಳಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು, ಅಪರ ಆಯುಕ್ತರು, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಜೊತೆಯೂ ಸಮೀಕ್ಷೆಯ ಪ್ರಗತಿ ಕುರಿತು ಮಾತನಾಡಿದ್ದೇನೆ. ಅ.19ಕ್ಕಿಂತ ಮುಂಚಿತವಾಗಿ ಬೆಂಗಳೂರಿನಲ್ಲಿ ಸಮೀಕ್ಷೆ ಮುಗಿಸುವುದಾಗಿ ಅಧಿಕಾರಿಗಳು ಹಾಗೂ ಶಿಕ್ಷಕರ ಸಂಘದವರು ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಈಗ ವಿಸ್ತರಣೆ ಮಾಡಿರುವ ರಜೆಯಲ್ಲಿ ಎಂಟು ಕೆಲಸದ ದಿನಗಳು ಹಾಗೂ ಉಳಿದವು ಸರಕಾರಿ ರಜೆ ಇರುತ್ತವೆ. ಒಟ್ಟು 12 ದಿನ ಸಮೀಕ್ಷೆಗೆ ಸಿಗುತ್ತದೆ. ಈ ಅವಧಿಯಲ್ಲಿ ಸಂಪೂರ್ಣ ಸಮೀಕ್ಷೆ ಕಾರ್ಯ ಮುಗಿಸುವಂತೆ ಸೂಚನೆ ನೀಡಲಾಗಿದೆ. ಯಾರು ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಹಿಂದೇಟು ಹಾಕುತ್ತಾರೆ ಅಂತಹವರ ವಿರುದ್ಧ ಸರಕಾರ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಶಾಲಾ ಶಿಕ್ಷಕರ ಸಂಘದವರು ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಈ ಅವಧಿಯಲ್ಲಿನ ಪಠ್ಯವನ್ನು ಪೂರ್ಣಗೊಳಿಸುವುದಾಗಿ ಬರವಣಿಗೆ ಮೂಲಕ ಸರಕಾರಕ್ಕೆ ತಿಳಿಸಿದ್ದಾರೆ. ಆದುದರಿಂದ, ವಿದ್ಯಾರ್ಥಿಗಳಿಗೆ ಯಾವುದೆ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಶಾಸಕರಾದ ಎ.ಎಸ್. ಪೊನ್ನಣ್ಣ, ಅಶೋಕ್ ರೈ, ಪರಿಷತ್ ಸದಸ್ಯ ಪುಟ್ಟಣ್ಣ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದಿನೇನಿ, ಆಯುಕ್ತ ಎಸ್.ಎ.ದಯಾನಂದ್, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಡಾ.ಮಹೇಶ್ವರ ರಾವ್, ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
‘ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮೂವರು ಮೃತಪಟ್ಟಿದ್ದಾರೆ. ಅವರಿಗೆ ತಲಾ 20 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು. ನ್ಯಾ.ನಾಗಮೋಹನ್ ದಾಸ್ ಒಳ ಮೀಸಲಾತಿ ಕುರಿತು ನಡೆಸಿದ ಸಮೀಕ್ಷೆ ಕಾರ್ಯದಲ್ಲಿ ತೊಡಗಿಕೊಂಡಿದ್ದ ವೇಳೆ ಮೃತಪಟ್ಟವರಿಗೆ 15 ಲಕ್ಷ ರೂ.ಗಳ ಪರಿಹಾರ ನೀಡಲಾಗಿತ್ತು’
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿ:
‘ರಾಜ್ಯ ಸರಕಾರ ನಿಗದಿಗೊಳಿಸಿದಂತೆ ಸೆ.22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು, ಬೆಂಗಳೂರಿನಲ್ಲಿ ಅ.4 ರಿಂದ ಸಮೀಕ್ಷೆಯನ್ನು ಆರಂಭಿಸಲಾಗಿದೆ. ಅ.7ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ, ಇನ್ನೂ ಸಮೀಕ್ಷೆಯ ಕಾರ್ಯವನ್ನು ಪೂರ್ಣಗೊಳಿಸಲು ಕನಿಷ್ಠ 10 ದಿನಗಳ ಅವಶ್ಯಕತೆ ಇದೆ. ಆ 10 ದಿನಗಳನ್ನು ದಸರಾ ರಜೆ ಎಂದು ಪರಿಗಣಿಸಿ ರಜೆ ನೀಡಬೇಕು’ ಎಂದು ಕೋರಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದರು.







