ನವೆಂಬರ್ ಒಳಗೆ ಸಾಮಾಜಿಕ, ಶೈಕ್ಷಣಿಕ ವರದಿ ಸರಕಾರಕ್ಕೆ ಸಲ್ಲಿಕೆ: ಜಯಪ್ರಕಾಶ್ ಹೆಗ್ಡೆ

ಜಯಪ್ರಕಾಶ್ ಹೆಗ್ಡೆ
ಚಿಕ್ಕಮಗಳೂರು, ಆ.19: ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು 2023ರ ನವೆಂಬರ್ ಒಳಗೆ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಸಣ್ಣ ತೊಡಕುಗಳಿದ್ದ ಕಾರಣದಿಂದ ವರದಿಯನ್ನು ಸರಕಾರಕ್ಕೆ ಸಲ್ಲಿಸಿರಲಿಲ್ಲ. ತಮ್ಮ ಅಧಿಕಾರಾವಧಿ 2023 ನವೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಶಾಲಾ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ವಿತರಣೆ ಮಾಡುವಾಗ ತೊಡಕುಗಳು ಉಂಟಾಗುತ್ತಿದ್ದು, ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಪ್ರಮಾಣಪತ್ರವನ್ನು ಪಡೆದು ಶಾಲೆಗಳಿಗೆ ದಾಖಲಾತಿ ಮಾಡುವುದರಿಂದ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಉಂಟಾಗುವ ಗೊಂದಲಗಳನ್ನು ತಡೆಯಬಹುದೆಂದು ಪೋಷಕರಿಗೆ ಸಲಹೆ ನೀಡಿದ ಅವರು, ಶೈಕ್ಷಣಿಕ ಮತ್ತು ಇತರ ಉದ್ದೇಶಗಳಿಗೆ ಪ್ರಮಾಣಪತ್ರ ಪಡೆಯುವ ವೇಳೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದರಿಂದ ಅಧಿಕಾರಿಗಳು ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಗೊಂದಲಗಳು ಉಂಟಾದಲ್ಲಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಲು ಅನುಕೂಲವಾಗುತ್ತದೆ. ಸಕಾಲದಲ್ಲಿ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ. ತಡವಾಗಿ ಅರ್ಜಿ ಸಲ್ಲಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಎಚ್ಚರವಹಿಸಬೇಕು ಎಂದು ಹೇಳಿದರು.
ಮೀಸಲಾತಿ ಪಟ್ಟಿಯಲ್ಲಿ ಬದಲಾವಣೆಯನ್ನು ಕೋರಿ ಆಯೋಗಕ್ಕೆ 3ರಿಂದ 4 ಅರ್ಜಿಗಳು ಬಂದಿವೆ. ಅವುಗಳನ್ನು ಸರಕಾರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದ ಅವರು, ಇದುವರೆಗೂ ಆಯೋಗ ನೀಡಿರುವ ಅನೇಕ ವರದಿಗಳು ಸರಕಾರದ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲು ವಿಳಂಬವಾಗಿದ್ದು, ಆಯೋಗದಿಂದ ಎಷ್ಟು ವರದಿಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂಬುದರ ಪಟ್ಟಿ ಮಾಡಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಗೌಂಡರ್ ಮತ್ತು ಬಲಿಜ ಸಮುದಾಯದ ಮೀಸಲಾತಿ ಪಟ್ಟಿಯಲ್ಲಿ ಬದಲಾವಣೆ ಕೋರಿ ಅರ್ಜಿಗಳು ಆಯೋಗಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿ ಈ ಸಂಬಂಧ ಚರ್ಚೆ ನಡೆಸಿದ್ದೇವೆ. ಈ ವಿಚಾರ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ಬಳಿಕ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದ ಅವರು, ವೆನ್ನಿಗೌಂಡರ್ ಮತ್ತು ಗೌಂಡರ್ ಸಮುದಾಯದ ಜನತೆ ನೀಡಿರುವ ಮನವಿಯನ್ನು ಆಯೋಗದ ಸಭೆಯಲ್ಲಿ ಚರ್ಚೆ ಮಾಡಿದ್ದು, ಸಮಾಜದ ಆಗು ಹೋಗುಗಳ ಬಗ್ಗೆ ಸಮೀಕ್ಷೆ ನಡೆಸಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಪ್ರಮಾಣಪತ್ರಗಳನ್ನು ನೀಡುವ ಸಂದರ್ಭದಲ್ಲಿ ತಂದೆ ಯಾವ ಜಾತಿಗೆ ಸೇರಿರುತ್ತಾನೆಯೋ ಆ ಜಾತಿಯನ್ನೇ ಪರಿಗಣಿಸಲಾಗುವುದು. ಗೊಂದಲಗಳಿದ್ದಲ್ಲಿ ಅಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಿ ಪ್ರಮಾಣಪತ್ರ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಕಲ್ಯಾಣ ಕುಮಾರ್, ಬಿ.ಎಸ್.ರಾಜಶೇಖರ್, ಅರುಣ್ಕುಮಾರ್, ಶಾರದಾನಾಯ್ಕ್ ಉಪಸ್ಥಿತರಿದ್ದರು.







