ಸಾರಿಗೆ ದರ ನಿಯಂತ್ರಣ ಸಮಿತಿ ರಚಿಸಿ ರಾಜ್ಯಪತ್ರ ಹೊರಡಿಸಿದ ಸರಕಾರ

ಬೆಂಗಳೂರು : ರಾಜ್ಯ ಸರಕಾರವು ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಕಾಲಕಾಲಕ್ಕೆ ಪರಿಷ್ಕರಣೆ ಮಾಡುವ ನಿಟ್ಟಿನಲ್ಲಿ ‘ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ಯನ್ನು(ಪಿಟಿಎಫ್‍ಆರ್‍ಸಿ) ರಚನೆ ಮಾಡಿ, ರಾಜ್ಯಪತ್ರ ಹೊರಡಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ‘ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ ರಚಿಸಲು ಕರಡು ಅಧಿಸೂಚನೆಯನ್ನು ಹೊರಡಿಸಿ, ಸಾರ್ವಜನಿಕರಿಗೆ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಸಾರ್ವಜನಿಕರಿಂದ ಬಂದಂತ ಆಕ್ಷೇಪಗಳನ್ನು ಪರಿಶೀಲನೆ ಮಾಡಿ, ಇದೀಗ ರಾಜ್ಯಪತ್ರವನ್ನು ಹೊರಡಿಸಿದೆ.
ಕರ್ನಾಟಕ ಮೋಟಾರು ವಾಹನ ನಿಯಮಗಳು-1989ಕ್ಕೆ ತಿದ್ದಪಡಿ ತಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮಾದರಿಯಲ್ಲಿಯೇ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ರಚನೆ ಮಾಡಲಾಗಿದೆ. ಸಮಿತಿಯು ಒಬ್ಬ ಅಧ್ಯಕ್ಷ ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡಿರುತ್ತದೆ.
ಸಮಿತಿಯ ಅಧ್ಯಕ್ಷರು, ಸರಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾಗಿರಬೇಕು. ಇಬ್ಬರು ಸದಸ್ಯರಲ್ಲಿ, ಒಬ್ಬರು ಕಾನೂನಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ನಿವೃತ್ತ ಪ್ರಧಾನ ಕಾರ್ಯದರ್ಶಿ ಅಥವಾ ಸರಕಾರದ ಕಾರ್ಯದರ್ಶಿಯಾಗಿರಬೇಕು. ಇನ್ನೊಬ್ಬ ಸದಸ್ಯರು ಕೈಗಾರಿಕಾ ತಜ್ಞರು ಅಥವಾ ಹಣಕಾಸು ತಜ್ಞರಾಗಿರಬಹುದು. ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಸಮಿತಿಯು ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡುತ್ತದೆ. ಕಾಲಕಾಲಕ್ಕೆ ವಿವಿಧ ದರಗಳ ಪರಿಷ್ಕರಣೆಯನ್ನು ಆಯಾ ರಸ್ತೆ ಸಾರಿಗೆ ನಿಗಮಕ್ಕೆ ಸೂಚಿಸುತ್ತದೆ. ಹಣಕಾಸು ಮತ್ತು ಕಾರ್ಯಾಚರಣೆಯನ್ನು ಸುಧಾರಿಸಲು ದರಗಳ ಮೇಲೆ ವಿವಿಧ ಶುಲ್ಕಗಳನ್ನು ವಿಧಿಸುವ ಬಗ್ಗೆ ಸಮಿತಿಯು ಸೂಚನೆ ನೀಡುತ್ತದೆ.
ಸಾರಿಗೆ ಸಂಸ್ಥೆಗಳು ಒಮ್ಮೆಲೇ ಹೆಚ್ಚು ದರ ಪರಿಷ್ಕರಣೆ ಮಾಡುವುದರಿಂದ ಸಾರ್ವಜನಿಕ ಪ್ರಯಾಣಿಕರಿಗೂ ಹೊರೆಯಾಗುತ್ತದೆ. ಕಾಲಕಾಲಕ್ಕೆ ಅತ್ಯಲ್ಪ ಪ್ರಯಾಣ ದರ ಏರಿಕೆಯು ವೈಜ್ಞಾನಿಕವಾಗಿ ಸಮಂಜಸವಾಗಿರುತ್ತದೆ. ಹೀಗಾಗಿ ರಾಜಕೀಯ ಇಚ್ಛಾಶಕ್ತಿಗಳಿಂದ ದೂರವಿರಿಸಿ, ಪ್ರಯಾಣ ದರ ನಿರ್ವಹಣಾ ಸಮಿತಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದ್ದು, ಸಾರಿಗೆ ಸಂಸ್ಥೆಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ ಎಂದು ಸರಕಾರವು ತಿಳಿಸಿದೆ.







