ಕಾಂಗ್ರೆಸ್ನಲ್ಲಿ ಯಾವುದೇ ಗುಂಪು ಇಲ್ಲ, ಪಕ್ಷದ ವರಿಷ್ಠರು ಹೇಳಿದಂತೆ ನಡೆಯುತ್ತೇವೆ : ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು : "ನಾಯಕತ್ವ ವಿಚಾರದಲ್ಲಿ ನನ್ನದು ಹಾಗೂ ಸಿಎಂ ಸಿದ್ದರಾಮಯ್ಯ ಅವರದ್ದು ಒಂದೇ ರಾಜಕೀಯ ನಿಲುವಾಗಿದ್ದು, ಪಕ್ಷದ ವರಿಷ್ಠರು ಹೇಳಿದಂತೆ ನಾವಿಬ್ಬರೂ ನಡೆಯುತ್ತೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಶನಿವಾರ ಉಪಾಹಾರ ಸಭೆ ನಡೆಸಿದ ನಂತರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
"ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪ್ರಸ್ತುತ ಪರಿಸ್ಥಿತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪಕ್ಷ ಕಷ್ಟದ ಸಮಯದಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮಹತ್ತರ ಪಾತ್ರ ನಿರ್ವಹಿಸಲಿದೆ. 2028ರ ಚುನಾವಣೆ ನಂತರ 2029ರ ಲೋಕಸಭೆ ಚುನಾವಣೆಯನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಎದುರಿಸುತ್ತೇವೆ. ರಾಜ್ಯದಲ್ಲಿ 2028ಕ್ಕೆ ಹಾಗೂ 2029ರಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಇಷ್ಟು ದಿನ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದು, ಮುಂದೆಯೂ ಅದೇ ರೀತಿ ಕೆಲಸ ಮಾಡಲು ಅಚಲ ನಿರ್ಧಾರ ಕೈಗೊಂಡಿದ್ದೇವೆ" ಎಂದು ತಿಳಿಸಿದರು.
"ಇಂದು ನಾನು ಹಾಗೂ ಸಿಎಂ ಅವರು ಉಪಹಾರ ಕೂಟದಲ್ಲಿ ಭಾಗವಹಿಸಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಭೋಜನಕೂಟಕ್ಕೆ ಬರಲಿದ್ದಾರೆ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕಾರ್ಯಕರ್ತರ ಪರಿಶ್ರಮ, ಜನರ ಆಶೀರ್ವಾದ, ನಿಮ್ಮೆಲ್ಲರ ಸಹಕಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ನಾವು ಕೊಟ್ಟ ಮಾತಿನಂತೆ ಜನರ ಸೇವೆ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಸಹಕಾರ ನೀಡುತ್ತಿದ್ದಾರೆ. ಜನರ ನಿರೀಕ್ಷೆ, ಆಕಾಂಕ್ಷೆ, ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರಕಾರ ರಚನೆಯಾಗಿದ್ದು, ಹೈಕಮಾಂಡ್ ತೀರ್ಮಾನದಂತೆ ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು.
ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರದ ಚರ್ಚೆ:
ಡಿ.8ರಿಂದ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಇದಕ್ಕೆ ನಮ್ಮದೇ ಆದ ಸ್ವರೂಪ ನೀಡುತ್ತೇವೆ. ಅವರು ಸದನದಲ್ಲಿ ಏನೇ ಪ್ರಶ್ನೆ ಕೇಳಿದರೂ ಅದಕ್ಕೆ ಉತ್ತರಿಸಲು ನಾವು ಸಮರ್ಥರಿದ್ದೇವೆ ಎಂದರು.
ನಮ್ಮಲ್ಲಿ ಯಾವುದೇ ಗುಂಪಿಲ್ಲ, ಇಡೀ ಕಾಂಗ್ರೆಸ್ ಒಂದೇ ಗುಂಪು :
"ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ಕೃಷ್ಣ ಅವರ ಕಾಲದಲ್ಲೂ ಗುಂಪುಗಾರಿಕೆ ಮಾಡಿಲ್ಲ. ಇವತ್ತಿಗೂ ಅವಕಾಶ ಕೊಟ್ಟಿಲ್ಲ. ನನಗೆ ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮೊದಲ ಆರು ತಿಂಗಳು ನನ್ನನ್ನು ಮಂತ್ರಿ ಮಾಡದೇ ಇದ್ದಾಗಲೂ ನಾನು ಒಂದೇ ಒಂದು ಮಾತನ್ನೂ ಆಡಿರಲಿಲ್ಲ. ಒಟ್ಟಾಗಿ ಕೆಲಸ ಮಾಡುವ ನನ್ನ ನಿರ್ಧಾರ ಅಚಲ. ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೆಲಸ ಮಾಡಿಕೊಂಡು ಹೋಗುತ್ತೇವೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು, ಪ್ರತಿಯೊಬ್ಬ ಶಾಸಕರಿಗೆ ಶಕ್ತಿ ತುಂಬಿ, ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವುದು ನಮ್ಮಿಬ್ಬರ ಕರ್ತವ್ಯ. 2028ಕ್ಕೆ ಮತ್ತೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರಲು ಅನೇಕ ಕಾರ್ಯಕ್ರಮ ರೂಪಿಸಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ನೀಡಿರುವ ಸಂದೇಶಕ್ಕೆ ನನ್ನ ಸಹಮತವಿದೆ" ಎಂದರು.
ಮೆಕ್ಕೆಜೋಳ, ಕಬ್ಬು, ನೀರಾವರಿ ಯೋಜನೆ ಬಗ್ಗೆ ಸಂಸದರ ಜೊತೆ ಚರ್ಚಿಸಲು ದೆಹಲಿಗೆ ಹೋಗಬೇಕು :
ದೆಹಲಿಗೆ ಭೇಟಿ ನೀಡುತ್ತೀರಾ ಎಂದು ಕೇಳಿದಾಗ, "ಪಕ್ಷದ ವರಿಷ್ಠರು ನಮ್ಮನ್ನು ಕರೆದರೆ, ನಾವು ಖಂಡಿತವಾಗಿಯೂ ಹೋಗುತ್ತೇವೆ. ಅದರ ಹೊರತಾಗಿ ಮೆಕ್ಕೆಜೋಳ, ಕಬ್ಬು ದರ ನಿಗದಿ ಹಾಗೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಸತ್ ಅಧಿವೇಶನದಲ್ಲಿ ಸಂಸದರು ಧ್ವನಿ ಎತ್ತಬೇಕಿದೆ. ಈ ವಿಚಾರವಾಗಿ ಸಂಸದರ ಜೊತೆ ನಾವು ಚರ್ಚೆ ಮಾಡಬೇಕಿದೆ. ಮೆಕ್ಕೆಜೋಳ ವಿಚಾರದಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಾದ ಸಹಕಾರ ನೀಡುತ್ತಿಲ್ಲ. ಈ ವಿಚಾರಗಳಲ್ಲಿ ಕೇಂದ್ರದ ನೆರವು ಪಡೆಯುವುದು ರಾಜ್ಯದ ಹಕ್ಕು ಎಂದರು.
ಇತ್ತೀಚಿಗೆ ಸಿಎಂ ಅವರು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಸಂಸದರ ಜೊತೆ ಚರ್ಚೆ ಮಾಡಿ ಈ ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ಹಾಕುವಂತೆ ತಿಳಿಸುತ್ತೇವೆ. ನಾವೆಲ್ಲರೂ ಒಟ್ಟಾಗಿ ರಾಜ್ಯದ ಹಿತ ಕಾಪಾಡಬೇಕಿದೆ. ಕೇಂದ್ರ ಸಚಿವರು ನಿಯೋಗದಲ್ಲಿ ನೀವು ಬನ್ನಿ ಎಂದು ತಿಳಿಸಿದ್ದು, ನಾವು ಹೋಗುತ್ತೇವೆ. ಮೇಕೆದಾಟು ಯೋಜನೆ ವಿಚಾರದಲ್ಲಿ ನ್ಯಾಯಾಲಯದಿಂದ ರಾಜ್ಯದ ಪರವಾದ ತೀರ್ಪು ಬಂದಿದೆ, ಈಗ ಚೆಂಡು ಕೇಂದ್ರ ಸರಕಾರದ ಜಲ ಆಯೋಗದ ಅಂಗಳದಲ್ಲಿದೆ. ನಾವು ಇದಕ್ಕೆ ಪರಿಷ್ಕೃತ ಡಿಪಿಆರ್ ಸಲ್ಲಿಸುತ್ತೇವೆ. ಇದರ ಜೊತೆಗೆ ಇತರೆ ನೀರಾವರಿ ಯೋಜನೆಗಳ ಬಗ್ಗೆಯೂ ಚರ್ಚೆ ಮಾಡಬೇಕು. ದೇಶದಲ್ಲಿ ಕರ್ನಾಟಕ ಪ್ರಮುಖ ರಾಜ್ಯವಾಗಿದ್ದು, ಇಡೀ ವಿಶ್ವ ಭಾರತವನ್ನು ಕರ್ನಾಟಕ ಹಾಗೂ ಬೆಂಗಳೂರು ಮೂಲಕ ನೋಡುತ್ತಿದೆ. ಇನ್ನು ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆ ವಿಚಾರವಾಗಿ ಅವರು ಏನಾದರೂ ಮಾಡಲಿ, ವಿರೋಧ ಪಕ್ಷವಾಗಿ ಅವರಿಗೆ ಆ ಹಕ್ಕಿದೆ. ಆಡಳಿತ ಪಕ್ಷವಾಗಿ ಅದನ್ನು ಎದುರಿಸಲು ನಾವು ಸಮರ್ಥರಿದ್ದೇವೆ" ಎಂದು ತಿಳಿಸಿದರು.







