ಬಿಜೆಪಿ-ಜೆಡಿಎಸ್ನ 25 ಮಂದಿ ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್ಗೆ: ಸಚಿವ ಎಂ.ಬಿ.ಪಾಟೀಲ್

ಎಂ.ಬಿ.ಪಾಟೀಲ್
ಬೆಂಗಳೂರು: ‘ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಡವಳಿಕೆಗಳಿಂದ ಬೇಸತ್ತಿರುವ 25 ಮಂದಿ ಶಾಸಕರು ಶೀಘ್ರದಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ರವಿವಾರ ನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇದೀಗ ಕಾಂಗ್ರೆಸ್ಸಿನಲ್ಲಿ 139 ಮಂದಿ ಶಾಸಕರಿದ್ದು, ನಮ್ಮಲ್ಲಿ ಒಗ್ಗಟ್ಟಿದೆ. ನಮ್ಮ ಪಕ್ಷದ ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಹೀಗಿರುವಾಗ ಎಂ.ಬಿ.ಪಾಟೀಲ್, ಡಾ.ಪರಮೇಶ್ವರ್ ಮತ್ತು ಸತೀಶ ಜಾರಕಿಹೊಳಿ ಅವರದೇನೂ ನಡೆಯುವುದಿಲ್ಲ. ಇನ್ನೊಂದೆಡೆಯಲ್ಲಿ, ಬಿಜೆಪಿಯಲ್ಲಿ ಯತ್ನಾಳ್, ರಮೇಶ ಜಾರಕಿಹೊಳಿ, ವಿಜಯೇಂದ್ರ ಅವರೆಲ್ಲ ಪರಸ್ಪರ ಏಕವಚನದಲ್ಲಿ ಜಗಳವಾಡುತ್ತಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಆರೋಪ ನಿರಾಧಾರ: ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ನಾನು ನಮ್ಮ ಅಧಿಕಾರಿಗಳೊಂದಿಗೆ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಿ, ಸೆಮಿಕಂಡಕ್ಟರ್ ಸೇರಿದಂತೆ ಕೈಗಾರಿಕಾ ವಲಯದ ಹಲವು ಬೇಡಿಕೆಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಆ ಸಂದರ್ಭದಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ರನ್ನೂ ಭೇಟಿಯಾಗಿದ್ದೆ. ಹೀಗಾಗಿ ರಾಜ್ಯ ಸರಕಾರ ಅಸಹಕಾರ ತೋರಿಸುತ್ತಿದೆ ಎನ್ನುವುದು ಸರಿಯಿಲ್ಲ ಎಂದು ಪಾಟೀಲ್ ಆಕ್ಷೇಪಿಸಿದರು.
‘ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಇವರನ್ನೆಲ್ಲ ಆಹ್ವಾನಿಸಲು ಸದ್ಯದಲ್ಲೇ ನಾನು ದಿಲ್ಲಿಗೆ ಹೋಗುತ್ತಿದ್ದೇನೆ. ಆಗಲೂ ಇದನ್ನೆಲ್ಲ ದಾಖಲೆಗಳ ಸಮೇತ ಕುಮಾರಸ್ವಾಮಿಗೆ ನೆನಪಿಸಲಾಗುವುದು. ನಿರ್ಮಲಾ ಸೀತಾರಾಮನ್ ಮತ್ತು ರಾಜನಾಥ್ ಸಿಂಗ್ ಬಳಿ ನಾನು ಹಿಂದೆ ಭೇಟಿಯಾಗಿದ್ದಾಗ ರಾಜ್ಯದ ಬೇಡಿಕೆಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದೆ’ ಎಂದರು.
‘ಕುಮಾರಸ್ವಾಮಿ ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಒಂದು ಹೆಜ್ಜೆ ಮುಂದೆ ಬಂದು ನಮ್ಮ ಮುಖ್ಯಮಂತ್ರಿ ಭೇಟಿ ಮಾಡಬೇಕು. ರಾಜ್ಯಕ್ಕೆ ಉದ್ದಿಮೆಗಳನ್ನು ತಂದರೆ ಅವರಿಗೂ ಒಳ್ಳೆಯ ಹೆಸರು ಬರುತ್ತದೆ. ಹಿಂದೆ ಭೇಟಿಯಾಗಿದ್ದಾಗ ಸೆಮಿಕಂಡಕ್ಟರ್ ಉದ್ದಿಮೆಗಳು ಮೊದಲು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದರೂ ಕೊನೆಗೆ ಗುಜರಾತಿಗೆ ಹೋಗುತ್ತಿರುವ ವಿದ್ಯಮಾನದ ಬಗ್ಗೆ ಚರ್ಚಿಸಿದ್ದೆ. ಇದರಲ್ಲಿ ವೈಯಕ್ತಿಕ ಪ್ರತಿಷ್ಠೆ ಇರಬಾರದು ಎಂದು ಅವರು ನುಡಿದಿದರು.
ನಾವು ಹಿಂದೆ ಏನೇನು ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೆವು ಎನ್ನುವ ವಿವರ ನಮ್ಮ ಬಳಿ ಇದೆ. ಆಗಿನ ಭೇಟಿಯಲ್ಲಿ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರು ಇದ್ದರು. ಕೈಗಾರಿಕಾ ಸಚಿವನಾಗಿ ನಾನು ಅವರ ಬಳಿ ಹೋಗಿದ್ದೆ. ಇದರಲ್ಲಿ ನನ್ನದು ಅನ್ನುವ ಸ್ವಾರ್ಥವೇನೂ ಇಲ್ಲ ಎಂದು ಅವರು ಪ್ರತಿಪಾದಿಸಿದರು.
ಪಕ್ಷದಲ್ಲಿ ಶಿಸ್ತು ಇರಬೇಕು: ಕಾಂಗ್ರೆಸ್ ಸಚಿವರು, ಶಾಸಕರು ಪಕ್ಷದ ಸಮಸ್ಯೆಗಳನ್ನು ಸಾರ್ವಜನಿಕವಾಗಿ ಮಾತನಾಡಬಾರದು ಎನ್ನುವ ಅರ್ಥದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಅವರು ನಮ್ಮ ವಯಸ್ಸಿಗಿಂತ ಹೆಚ್ಚು ಕಾಲ ರಾಜಕಾರಣ ಮಾಡಿರುವವರು. ಪಕ್ಷದಲ್ಲಿ ಶಿಸ್ತು ಇರಬೇಕು ಎಂದು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಯಾರಿಗಾದರೂ ಸಮಸ್ಯೆ ಇದ್ದರೆ ಪಕ್ಷದ ವ್ಯವಸ್ಥೆಯೊಳಗೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮುಂತಾದವರ ಜತೆ ಚರ್ಚಿಸಬಹುದು ಎಂದು ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎರಡನೇ ವಿಮಾನ ನಿಲ್ದಾಣ: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಸ್ಥಳಗಳ ಆಯ್ಕೆ ನಡೆದಿದ್ದು, ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಪಾಟೀಲ್ ಇದೇ ವೇಳೆ ಸ್ಪಷ್ಟಣೆ ನೀಡಿದರು.







