ಗುತ್ತಿಗೆದಾರರಿಗೆ 33 ಸಾವಿರ ಕೋಟಿ ರೂ. ಬಾಕಿ; ಕೂಡಲೇ ಬಿಡುಗಡೆಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆಗ್ರಹ

ಬೆಂಗಳೂರು, ಅ.17: ರಾಜ್ಯ ಸರಕಾರದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಮೊತ್ತ ಸುಮಾರು 33 ಸಾವಿರ ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂವರೆ ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳನ್ನು ಭೇಟಿ ಮಾಡಿ ಗಮನಕ್ಕೆ ತಂದಿದ್ದೇವೆ. ಆದರೆ ಇದುವರೆಗೂ ಲೋಕೋಪಯೋಗಿ ಇಲಾಖೆ ಹೊರತು ಪಡಿಸಿ, ಬೇರೆ ಇಲಾಖೆಗಳಲ್ಲಿ ಹಣವನ್ನು ಬಿಡುಗಡೆ ಮಾಡಿಲ್ಲ ಎಂದರು.
ಈ ಮೊತ್ತವನ್ನು ಒಂದೇ ಬಾರಿಯಲ್ಲದಿದ್ದರೂ ಹಂತ ಹಂತವಾಗಿಯಾದರೂ ಬಿಡುಗಡೆ ಮಾಡುವ ಪ್ರಾಮಾಣಿಕತೆಯನ್ನು ಸರಕಾರ ತೋರಬೇಕಾಗಿತ್ತು. ಆದರೆ ಸರಕಾರ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡುತ್ತಿದೆ ಮತ್ತು ಸಭೆಯನ್ನು ಕರೆದು ಚರ್ಚೆ ನಡೆಸಲು ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ. ಗೌರಿ ಗಣೇಶ, ದಸರಾ ಮತ್ತು ದೀಪಾವಳಿ ಸಮಯದಲ್ಲಿ ಗುತ್ತಿಗೆದಾರರಿಗೆ ಯಾವುದೇ ಸರಕಾರವಾದರು ಬಾಕಿ ಹಣವನ್ನು ಬಿಡುಗಡೆ ಮಾಡುವ ಪರಿಪಾಠವನ್ನು ಬೆಳಸಿಕೊಂಡು ಬಂದಿರುತ್ತದೆ. ಆದರೆ ಇದುವರೆಗೂ ಕಾಂಗ್ರೆಸ್ ಸರಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಮಂಜುನಾಥ್ ದೂರಿದರು.
ಜಿಎಸ್‍ಟಿ ಶೇ.12 ರಿಂದ 18ರ ವರೆಗೆ ವ್ಯತ್ಯಾಸದ ಮೊತ್ತವನ್ನು ಸರಕಾರವೇ ಭರಿಸಲು ತೀರ್ಮಾನ ಕೈಗೊಂಡಿರುತ್ತದೆ. ಮುಂದುವರೆದು ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಕರೆದು ಚರ್ಚಿಸಿದರೂ ಆದೇಶವಾಗಿಲ್ಲ. ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ಮತ್ತು ಮಹಾರಾಷ್ಟ್ರಗಳಲ್ಲಿ 5 ವರ್ಷಗಳ ಹಿಂದೆಯೇ ಜಾರಿಗೆ ಬಂದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಎಂಡಿಪಿ ಮತ್ತು ಇತರೇ ಸಮಸ್ಯೆಗಳನ್ನು ಬಗೆಹರಿಸಲು ಸಚಿವರು ಮತ್ತು ಸರಕಾರದ ಕಾರ್ಯದರ್ಶಿ ಮಟ್ಟದಲ್ಲಿ ಹಲವಾರು ಸಭೆಗಳು ನಡೆದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಗಾರಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಗಳು 10 ಮಹಾನಗರ ಪಾಲಿಕೆಗಳಲ್ಲಿ ಪ್ಯಾಕೇಜ್ ಟೆಂಡರ್‍ಗಳನ್ನು ಕರೆದಿರುವುದರಿಂದ, ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ತುಂಬಾ ಅನ್ಯಾಯವಾಗಿದೆ. ಈ ವಿಚಾರವಾಗಿ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಮಿಕ ಇಲಾಖೆಗಳಲ್ಲಿ ಅಧಿಕಾರಿಗಳು 784 ಕೋಟಿ ರೂ. ಮೊತ್ತದ, ಬಲಾಡ್ಯ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ 8-9 ಜಿಲ್ಲೆಗಳನ್ನು ಒಟ್ಟಿಗೆ ಸೇರಿಸಿ ಕ್ರಮವಾಗಿ 229 ಕೋಟಿ ರೂ, 210 ಕೋಟಿ ರೂ., 174 ಕೋಟಿ ರೂ., 171 ಕೋಟಿ ರೂ.ಗಳ 4 ಪ್ಯಾಕೇಜ್ ಟೆಂಡರ್‍ಗಳನ್ನು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಸದರಿ ಪ್ಯಾಕೇಜ್ ಟೆಂಡರ್ ರಾಜ್ಯದ ಬಹುತೇಕ ಗುತ್ತಿಗೆದಾರರಿಗೆ ಅನುಕೂಲವಾಗುವುದಿಲ್ಲ. ಅಧಿಕಾರಿಗಳನ್ನು ಭೇಟಿ ಮಾಡಿದರೆ ಹಾರಿಕೆ ಉತ್ತರ ನೀಡುತ್ತಾರೆ. ಸಿದ್ದರಾಮಯ್ಯ ಕೂಡಲೇ ಸದರಿ ಪ್ಯಾಕೇಜ್‍ನ್ನು ರದ್ದುಪಡಿಸಬೇಕು ಎಂದು ಮಂಜುನಾಥ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಜಗನ್ನಾಥ್ ಬಿ.ಶೇಗಜಿ, ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಉಪಸ್ಥಿತರಿದ್ದರು.
ʼಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲೂ ಕಮೀಷನ್ ಪ್ರಮಾಣ ಹೆಚ್ಚಳವಾಗಿದೆ. ಗುತ್ತಿಗೆದಾರರ ಹಣ ಬಿಡುಗಡೆ ವಿಚಾರದಲ್ಲಿ ಹಿಂದಿನ ಬಿಜೆಪಿ ಸರಕಾರಕ್ಕಿಂತಲೂ ಈಗ ಕಮೀಷನ್ ಪರ್ಸಂಟ್ ಹೆಚ್ಚಳವಾಗಿದೆ. ಬಾಕಿ ಹಣ ಬಿಡುಗಡೆಗೆ ಡಿಸೆಂಬರ್ ಮೊದಲ ವಾರದವರೆಗೂ ಗಡುವು ನೀಡುತ್ತೇವೆ. ಅಷ್ಟರೊಳಗೆ ಸ್ಪಂದಿಸದಿದ್ದರೆ ರಾಜ್ಯಪಾಲರಿಗೆ, ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ಸಲ್ಲಿಸುತ್ತೇವೆ ಮತ್ತು ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿಸುತ್ತೇವೆʼ
- ಆರ್. ಮಂಜುನಾಥ್, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ







