‘ಎಕರೆಗೆ 3.50 ಕೋಟಿ ಕೊಟ್ಟರೆ ಭೂಮಿ ಕೊಡಲು ಸಿದ್ಧʼ : ಸಿಎಂಗೆ ಮನವಿ ಸಲ್ಲಿಸಿದ ಚನ್ನರಾಯಪಟ್ಟಣದ ಮತ್ತೊಂದು ರೈತರ ಗುಂಪು

ಬೆಂಗಳೂರು : ‘ಪ್ರತಿ ಎಕರೆಗೆ 3.50 ಕೋಟಿ ರೂ. ಹಾಗೂ ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ಕೊಟ್ಟರೆ 449 ಎಕರೆ ಭೂಮಿಯನ್ನು ನೀಡಲು ಸಿದ್ಧವಿರುವುದಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಿಂದ ಆಗಮಿಸಿದ್ದ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಒಂದೆಡೆ ನೂರಾರು ರೈತರು ಬಲವಂತದ ಭೂಸ್ವಾಧೀನ ವಿರೋಧಿಸಿ 1195 ದಿನಗಳಿಂದ ಹೋರಾಟ ನಡೆಸುತ್ತಿದ್ದರೆ ಮತ್ತೊಂದೆಡೆ ಭೂಸ್ವಾಧೀನ ಪರ ಚನ್ನರಾಯಪಟ್ಟಣದ ಮತ್ತೊಂದು ರೈತರ ಗುಂಪು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಈ ಮನವಿ ಪತ್ರದಲ್ಲಿ ಭೂಸ್ವಾಧೀನಕ್ಕಾಗಿ ನಾಲ್ಕು ಷರತ್ತುಗಳನ್ನು ವಿಧಿಸಿದ್ದು, ಪ್ರತಿ ಎಕರೆಗೆ 3.50 ಕೋಟಿ ರೂ.ಗಳ ದರ ನಿಗದಿ ಪಡಿಸಬೇಕು. ಜಮೀನು ಕಳೆದುಕೊಂಡ ರೈತ ಮಕ್ಕಳಿಗೆ ಅವರ ಶಿಕ್ಷಣಕ್ಕೆ ಅನುಗುಣವಾಗಿ ಉದ್ಯೋಗ ನೀಡಬೇಕು. ಯಾವುದೇ ಕಾರಣಕ್ಕೂ ಹಸಿರು ವಲಯವಾಗಿ ಪರಿವರ್ತಿಸಬಾರದು ಮತ್ತು ಗ್ರಾಮದ ಅಕ್ಕಪಕ್ಕ ಉಳಿದ ಜಮೀನುಗಳನ್ನು ಹಳದಿ ವಲಯವನ್ನಾಗಿ ಪರಿವರ್ತಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ, ಬಿ.ಎಸ್.ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಉಪಸ್ಥಿತರಿದ್ದರು.
ಪ್ರತಿಭಟನೆ: ಚನ್ನರಾಯಪಟ್ಟಣ ಹೋಬಳಿ ರೈತ ಹೋರಾಟ ಸಮಿತಿ ವತಿಯಿಂದ ರೈತರು ಭೂಸ್ವಾಧೀನ ಪರ ಶನಿವಾರ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರೈತರೊಬ್ಬರು, ಸಚಿವರಾದ ಎಂ.ಬಿ.ಪಾಟೀಲ್ ಅವರು ಎಕರೆಗೆ 2.5 ಕೋಟಿ ರೂ.ಕೊಡಲು ಒಪ್ಪಿದ್ದಾರೆ. ಎಕರೆಗೆ 3.5 ಕೋಟಿ ಕೊಟ್ಟರೆ ನಮ್ಮ ಭೂಮಿ ಕೊಡುತ್ತೇವೆ. ಭೂಮಿ ಮಾರಾಟ ಮಾಡಿ ಬಂದ ಹಣದಿಂದ ನಮ್ಮ ಜೀವನ ನಡೆಸಲು ಅನುಕೂಲವಾಗುತ್ತದೆ. ಭೂಮಿ ಮಾರುವ ವಿಷಯದಲ್ಲಿ ನಮಗೆ ಯಾವುದೇ ಒತ್ತಡವಿಲ್ಲ’ ಎಂದರು.







