ಪೊಲೀಸ್ ಕರ್ತವ್ಯ ಲೋಪ ಕಾರಣ, ಸರಕಾರಕ್ಕೆ 4.56 ಕೋಟಿ ರೂ. ನಷ್ಟ

(PTI File Photo)
ಬೆಂಗಳೂರು: ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ, ಮದ್ದೂರು ಮತ್ತು ದಾವಣಗೆರೆ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 2024 ಮತ್ತು 2025ರಲ್ಲಿ ಗಣೇಶ ಹಬ್ಬ ಸಂದರ್ಭದಲ್ಲಿ ನಡೆದಿದ್ದ ಕೋಮು ಗಲಭೆಗಳಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ಕಂಡು ಬಂದಿದೆ ಎಂದು ರಾಜ್ಯ ಕಾಂಗ್ರೆಸ್ ಸರಕಾರವು ಒಪ್ಪಿಕೊಂಡಿದೆ.
ಅಲ್ಲದೆ ಈ ಪೊಲೀಸ್ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಮತ್ತು ಲೋಪದಿಂದಾಗಿ ಈ ಎರಡು ವರ್ಷಗಳಲ್ಲಿ ಸರಕಾರ, ಸಾರ್ವಜನಿಕ ವ್ಯಕ್ತಿಗಳಿಗೆ, ಅಂಗಡಿ ಮುಂಗಟ್ಟುಗಳಿಗೆ 4.56 ಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿದೆ. ಆದರೆ ಈ ಆರ್ಥಿಕ ನಷ್ಟಕ್ಕಾಗಿ ನಿರ್ಲಕ್ಷ್ಯ ವಹಿಸಿದ್ದ ಪೊಲೀಸ್ ಅಧಿಕಾರಿಗಳಿಂದ ನಯಾ ಪೈಸೆಯನ್ನೂ ವಸೂಲಿ ಮಾಡಿಲ್ಲ.
ಕೋಮು ಗಲಭೆಗಳನ್ನು ತಡೆಗಟ್ಟುವಲ್ಲಿ ನಿರ್ಲಕ್ಷ್ಯ ವಹಿಸಿದ್ದರ ಕುರಿತು ಮತ್ತು ಇದರಿಂದಾಗಿರುವ ಆರ್ಥಿಕ ನಷ್ಟದ ಕುರಿತು ವಿಧಾನ ಪರಿಷತ್ನಲ್ಲಿ ಸದಸ್ಯ ಎಚ್.ವಿಶ್ವನಾಥ್ ಅವರು ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಒದಗಿಸಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
ರಾಜ್ಯದಲ್ಲಿ 2024-25 ಮತ್ತು 2025-26ನೇ ಸಾಲಿನ ಗಣೇಶ ಹಬ್ಬ ಸಂದರ್ಭದಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಮಂಡ್ಯದಲ್ಲಿ 2024ರಲ್ಲಿ 24 ಮತ್ತು 2025ರಲ್ಲಿ 10 ಪ್ರಕರಣ, ದಾವಣಗೆರೆಯಲ್ಲಿ 2024ರಲ್ಲಿ 6 ಮತ್ತು 2025ರಲ್ಲಿ 1 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ಒದಗಿಸಿದ್ದಾರೆ.
ಕೋಮು ಗಲಭೆಗಳ ಬಗ್ಗೆ ಸಂಬಂಧಪಟ್ಟ ಜಿಲ್ಲಾಡಳಿತ, ಜಿಲ್ಲಾ ಪೊಲೀಸರು, ರಾಜ್ಯ ಗುಪ್ತಚರ ವಿಭಾಗದ ಅಧಿಕಾರಿಗಳ ಕರ್ತವ್ಯ ಲೋಪ, ನಿರ್ಲಕ್ಷ್ಯತೆಯಿಂದ ಸರಕಾರಕ್ಕೆ, ಸಾರ್ವಜನಿಕರಿಗೆ, ಪ್ರತೀ ವ್ಯಕ್ತಿಗೆ, ಪ್ರತೀ ಕುಟುಂಬಕ್ಕೆ ಉಂಟಾದ ಆರ್ಥಿಕ ನಷ್ಟದ ವಿವರವನ್ನೂ ಒದಗಿಸಿದ್ದಾರೆ.
ನಾಗಮಂಗಲ ಟೌನ್ನಲ್ಲಿ 2024 ಮತ್ತು 2025ನೇ ಸಾಲಿನಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ನಡದಿದ್ದ ಕೋಮು ಗಲಭೆ ಪ್ರಕರಣಗಳಲ್ಲಿ ಡಿವೈಎಸ್ಪಿ ಡಾ. ಸುಮಿತ್ ಆರ್. ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್, ಪಿಎಸ್ಐ ರವಿ ಬಿ.ಜೆ., ಹೆಡ್ ಕಾನ್ಸ್ಟೇಬಲ್ ರಮೇಶ್ ಅವರು ಕರ್ತವ್ಯ ನಿರ್ಲಕ್ಷ್ಯ, ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇವರ ನಿರ್ಲಕ್ಷ್ಯ ಮತ್ತು ಲೋಪದಿಂದಾಗಿ ಒಟ್ಟಾರೆ 4,56,45,000 ರೂ. ನಷ್ಟವಾಗಿದೆ.
ಆದರೂ ಈ ಅಧಿಕಾರಿಗಳಿಂದ ನಷ್ಟ ವಸೂಲು ಮಾಡಿಲ್ಲ. ಇವರಿಂದ ಆರ್ಥಿಕ ನಷ್ಟ ಉಂಟಾಗಿಲ್ಲ. ಅದರೆ ಕರ್ತವ್ಯ ಲೋಪದ ಬಗ್ಗೆ ಶಿಸ್ತು ಕ್ರಮ ವಹಿಸಲಾಗಿದೆ ಎಂದು ಉತ್ತರದಲ್ಲಿ ಹೇಳಲಾಗಿದೆ.
ಡಾ. ಸುಮಿತ್ ಆರ್., ಅಶೋಕ್ ಕುಮಾರ್ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ. ರವಿ, ರಮೇಶ್, ಅವರಿಗೆ ವಾರ್ಷಿಕ ವೇತನ ಭಡ್ತಿಯನ್ನು 3 ತಿಂಗಳ ಕಾಲ ಮುಂದೂಡಿದೆ ಎಂದು ಮಾಹಿತಿ ನೀಡಿದೆ.
ಮದ್ದೂರಿನಲ್ಲಿ ನಡೆದಿದ್ದ ಗಲಭೆಗೆ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಎಂ ಅವರಿಂದ ಕರ್ತವ್ಯ ಲೋಪ, ನಿರ್ಲಕ್ಷ್ಯ ಉಂಟಾಗಿದೆ, ಆರ್ಥಿಕ ನಷ್ಟ ಉಂಟಾಗಿರುವುದಿಲ್ಲ. ಆದ್ದರಿಂದ ಕರ್ತವ್ಯ ಲೋಪದ ಬಗ್ಗೆ ಶಿಸ್ತು ಕ್ರಮ ಜರುಗಿಸಲಾಗಿದೆ. ಕಾರಣ ಕೇಳಿ ನೋಟೀಸ್ ಮತ್ತು ದೋಷಾರೋಪ ಪಟ್ಟಿ 1,2,3,4ನ್ನ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದೆ.
ನಾಗಮಂಗಲ ಮತ್ತು ಮದ್ದೂರು ತಾಲೂಕಿನಲ್ಲಿ ನಡೆದಿದ್ದ ಕೋಮು ಗಲಭೆ ಪ್ರಕರಣಗಳಲ್ಲಿಯೇ ಅತೀ ಹೆಚ್ಚು ನಷ್ಟವುಂಟಾಗಿರುವುದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ದಾವಣಗೆರೆಯ ಆಝಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಯಾವೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯ ಲೋಪವೂ ಕಂಡು ಬಂದಿಲ್ಲ ಎಂದು ಹೇಳಿರುವ ಗೃಹ ಸಚಿವರು ಆರ್ಎಂಸಿ ಯಾರ್ಡ್ ಪೊಲೀಸ್ ಸ್ಟೇಷನ್ನಲ್ಲಿ ಪಿಎಸ್ಐ ಸಚಿನ್ ಬಿರಾದರ್, ಷಣ್ಮುಖ, ವತ್ಸಲಾ ಟಿ. ಅವರ ಕರ್ತವ್ಯ ನಿರ್ಲಕ್ಷ್ಯ ಕಂಡು ಬಂದಿದೆ ಎಂದು ಮಾಹಿತಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕೋಮು ಗಲಭೆ ಉಂಟಾಗಲು ಇವರು ನೇರವಾಗಿ ಕಾರಣಕರ್ತರಲ್ಲ. ಹೀಗಾಗಿ ಪ್ರಕರಣ ದಾಖಲಿಸಿಲ್ಲ. ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲ. ಅಮಾನತಿನ ಆದೇಶ ಮತ್ತು ದೋಷಾರೋಪ ಹೊರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.







