ಅ.1ರಿಂದ ಸರಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆ ಜಾರಿ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.23: ರಾಜ್ಯ ಸರಕಾರಿ ನೌಕರರು ಮತ್ತು ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅ.1ರಿಂದ ಜಾರಿಗೆ ಬರಲಿದ್ದು, ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮಂಗಳವಾರದಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಯೋಜನೆಗೆ ಸರಕಾರಿ ನೌಕರರ ವೇತನದಿಂದ ಮಾಸಿಕ ವಂತಿಕೆಯನ್ನು ಕಡಿತಗೊಳಿಸಲಾಗುವುದು. 2025ರ ಅಕ್ಟೋಬರ್ ವೇತನದಿಂದ ಈ ವಂತಿಕೆ ಕಡಿತ ಆರಂಭವಾಗಲಿದೆ. ನೌಕರರ ಗ್ರೂಪ್ಗೆ ಅನುಗುಣವಾಗಿ ವಂತಿಕೆ ಕಡಿತವಾಗಲಿದ್ದು, ಗ್ರೂಪ್ - ಎ ನೌಕರರಿಗೆ 1,000 ರೂ., ಗ್ರೂಪ್ - ಬಿ ನೌಕರರಿಗೆ 500 ರೂ., ಗ್ರೂಪ್ - ಸಿ ನೌಕರರಿಗೆ 350 ರೂ., ಗ್ರೂಪ್ - ಡಿ ನೌಕರರಿಗೆ 250 ರೂ. ವಂತಿಕೆ ಕಡಿತವಾಗಲಿದೆ.
ಸರಕಾರಿ ನೌಕರರ ವೇತನದಿಂದ ಕಡಿತಗೊಂಡ ವಂತಿಕೆಯನ್ನು ಎಲ್ಲ ವೇತನ ವಿತರಣಾ ಅಧಿಕಾರಿಗಳು(ಡಿಡಿಒ) ಖಜಾನೆ-2ರ ಮೂಲಕ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಿದೆ. ಬ್ಯಾಂಕ್ ಖಾತೆ ವಿವರಗಳನ್ನು ಎಚ್ಆರಎಂಎಸ್ ಮೂಲಕ ಡಿಡಿಒಗಳಿಗೆ ರವಾನೆಯಾಗಲಿದೆ. ಸರಕಾರಿ ನೌಕರನ ಪತಿ ಅಥವಾ ಪತ್ನಿ ಇಬ್ಬರೂ ಸರಕಾರಿ ನೌಕರರಾಗಿದ್ದಲ್ಲಿ, ಅವರಿಬ್ಬರಲ್ಲಿ ಒಬ್ಬರು ಮಾತ್ರ ವಂತಿಕೆ ಪಾವತಿಸುವ ಬಗ್ಗೆ ತಾವೇ ನಿರ್ಧರಿಸಿ, ಸಂಬಂಧಪಟ್ಟ ಡಿಡಿಒಗೆ ಮಾಹಿತಿ ನೀಡಬೇಕಿದೆ.
ಎಚ್ಆರ್ಎಂಎಸ್ ವ್ಯಾಪ್ತಿಯಲ್ಲಿ ಇಲ್ಲದ(ಇತರ ಇಲಾಖೆಗಳು, ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯೋಜನೆ, ಅನ್ಯಸೇವೆ) ನೌಕರರು ತಮ್ಮ ಮಾಸಿಕ ವೇತನದಲ್ಲಿ ವಂತಿಕೆ ಕಡಿತಗೊಳಿಸಿ, ಸಂಸ್ಥೆಯಿಂದ ನೇರವಾಗಿ ಟ್ರಸ್ಟ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕಿದೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.







