ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ‘ಅಲೆಮಾರಿಗಳ ಕೂಗು’

ಹೊಸದಿಲ್ಲಿ, ಅ. 2: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹಂಚಿಕೆಯಲ್ಲಿ ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯದಿಂದ ನೂರಾರು ಅಲೆಮಾರಿ ಬಂಧುಗಳು, ಕಲಾವಿದರು ‘ದಿಲ್ಲಿ ಚಲೋ’ ಮೂಲಕ ಜಂತರ್ ಮಂತರ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಗುರುವಾರ ಅಲೆಮಾರಿ ಸಮುದಾಯ ಜಂತರ್ ಮಂತರ್ ನಲ್ಲಿ ರಾಮ, ಲಕ್ಷ್ಮಣ, ರಾವಣ, ದುರ್ಗ, ಆಂಜನೇಯ ಮುಂತಾದ ವೇಷ ತೊಟ್ಟ ಕಲಾವಿದರು ತಮ್ಮ ಕಲಾ ರೂಪಗಳಲ್ಲೇ ತಮ್ಮ ನೋವನ್ನು ಹೊರಹಾಕಿದರು. ಬೆಳಗ್ಗೆ 10 ಗಂಟೆಯಿಂದ 12:30ರ ವರೆಗೆ ಸತ್ಯಾಗ್ರಹ ನಡೆಸಿ, ಪರಿಶಿಷ್ಟ ಜಾತಿಯಲ್ಲಿನ ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರನ್ನು ನೋಡಲು ಎಐಸಿಸಿ ಕಚೇರಿಗೆ ಹೆಜ್ಜೆಹಾಕಿದರು.
ಸುದೀರ್ಘ ಮಾತುಕತೆ: ಕಾಂಗ್ರೆಸ್ ಹೈಕಮಾಂಡ್ ಪರವಾಗಿ ಮಾತುಕತೆಗೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್, ಅಲೆಮಾರಿ ಸಮುದಾಯದ ನಿಯೋಗದ ಮಾತುಗಳನ್ನು ಆಲಿಸಿ ಪ್ರತಿಕ್ರಿಯಿಸಿದ ಅವರು, ‘ಕರ್ನಾಟಕದಿಂದ ತಾವುಗಳು ಇಷ್ಟು ದೂರ ಬರುವಂತಾಯಿತು, ಬಹಳ ಕಷ್ಟಗಳನ್ನು ತೆಗೆದುಕೊಳ್ಳಬೇಕಾಯಿತು, ಅದಕ್ಕಾಗಿ ವಿಷಾದಿಸುತ್ತೇನೆ. ಇಂದು ನಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಯಲ್ಲಿದ್ದಾರೆ, ರಾಹುಲ್ ಗಾಂಧಿ ದೇಶದ ಹೊರಗಿದ್ದಾರೆ. ದುರ್ಗ ಪೂಜೆ ಇರುವುದರಿಂದ ಎಲ್ಲ ಮುಖಂಡರುಗಳು ಅವರವರ ಕ್ಷೇತ್ರಗಳಲ್ಲಿದ್ದಾರೆ. ಆದುರಿಂದ ನಮ್ಮ ಕಡೆಯಿಂದ ಇಂದೇ ಖಚಿತ ತೀರ್ಮಾನ ಹೇಳಲು ಕಷ್ಟವಾಗುತ್ತಿದೆ. ಕ್ಷಮಿಸಿ. ಆದರೆ, ನಿಮ್ಮ ಜೊತೆ ನಾವಿದ್ದೇವೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕೋಣ. ಆದರೆ ಇದನ್ನು ಬಗೆಹರಿಸಲು ಏನು ಪ್ರಕ್ರಿಯೆ ಅಳವಡಿಸಬಹುದು ಎಂದು ತೀರ್ಮಾನಿಸಲು ಸ್ವಲ್ಪ ಸಮಯವಕಾಶಬೇಕು. ರಾಹುಲ್ ಗಾಂಧಿ ಬಂದೊಡನೆ ಅವರೊಡನೆ ತಮಗೆ ನೇರ ಭೇಟಿಯ ವ್ಯವಸ್ಥೆ ಮಾಡುತ್ತೇವೆ ಎಂದು ಅಭಿಷೇಕ್ ದತ್ ಭರವಸೆ ನೀಡಿದರು.
ದಿಲ್ಲಿ ಬಿಡದಿರಲು ಒಕ್ಕೂಟ ತೀರ್ಮಾನ: ‘ಕಾಂಗ್ರೆಸ್ ಪ್ರತಿನಿಧಿಗಳು ಭರವಸೆಯ ಮಾತುಗಳನ್ನಾಡಿದ್ದರೂ ಮುಂದಿನ ಪ್ರಕ್ರಿಯೆ ಕುರಿತು ಖಚಿತವಾದ ಉತ್ತರ ನೀಡಲು ಒಂದಷ್ಟು ಸಮಯಬೇಕೆಂದು ಹೇಳಿದ್ದಾರೆ. ಅವರ ಇಕ್ಕಟ್ಟನ್ನೂ ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಖಚಿತ ತೀರ್ಮಾನ ಆಗುವ ತನಕ ನಾವು ದಿಲ್ಲಿಯನ್ನು ತೊರೆಯುವ ಮಾತೇ ಇಲ್ಲ. ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಈ ಸಮಸ್ಯೆಗೆ ಪರಿಹಾರ ಮಾರ್ಗ ತೆಗೆದುಕೊಳ್ಳುವ ತನಕ ಇಲ್ಲೇ ಉಳಿಯುತ್ತೇವೆ. ಎಷ್ಟೇ ದಿನ ಆದರೂ ಕಾಯುತ್ತೇವೆ. ಪರಿಹಾರ ಪಡೆದೇ ಹಿಂತಿರುಗುತ್ತೇವೆ ಎಂದು ಒಕ್ಕೂಟ ತೀರ್ಮಾನ ತೆಗೆದುಕೊಂಡಿದೆ.
ಮುಖಂಡರ ಸಭೆ: ಕಾಂಗ್ರೆಸ್‍ನೊಂದಿಗಿನ ಮಾತುಕತೆಯ ನಂತರ ಅಂಬೇಡ್ಕರ್ ಭವನದಲ್ಲಿ ಎಲ್ಲ ಅಲೆಮಾರಿ ಮುಖಂಡರ ಮತ್ತು ಸದಸ್ಯರ ಸುದೀರ್ಘ ಸಭೆ ನಡೆಯಿತು. ಅಲೆಮಾರಿ ಸಮುದಾಯದ 59 ಜಾತಿಗಳು ಒಂದಾಗಿದ್ದೇವೆ. ದಿಲ್ಲಿಗೂ ಬಂದು ನಮ್ಮ ಕೂಗನ್ನು ಪ್ರಬಲವಾಗಿ ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಒಗ್ಗಟ್ಟನ್ನು ಮತ್ತು ನ್ಯಾಯಕ್ಕಾಗಿನ ನಮ್ಮ ಹೋರಾಟವನ್ನು ಕೊನೆ ಮುಟ್ಟುವ ತನಕ ಮುಂದುವರೆಸುತ್ತೇವೆ. ಈ ಅವಕಾಶ ಕಳೆದುಕೊಂಡರೆ ನಮಗೆ ಮತ್ತೆ ನ್ಯಾಯ ಸಿಗಲು ಸಾಧ್ಯವಿಲ್ಲ. ಹಾಗಾಗಿ ಕರ್ನಾಟಕದಿಂದಲೂ ನಿತ್ಯ ಒಂದೆರಡು ಅಲೆಮಾರಿ ತಂಡಗಳು ದಿಲ್ಲಿಗೆ ಬಂದು ಸೇರಿಕೊಳ್ಳಬೇಕು ಎಂದು ಒಕ್ಕೂಟ ಕರೆ ನೀಡಿತು.
ಹೋರಾಟದಲ್ಲಿ ಎ.ಎಸ್.ಪ್ರಭಾಕರ್, ಬಾಲಗುರುಮೂರ್ತಿ, ಮಂಜುನಾಥ್, ಬಸವರಾಜು, ಅಂಬಣ್ಣ ಅರೋಲಿಕರ್, ಕರಿಯಪ್ಪ ಗುಡಿಮನಿ, ನೂರ್ ಶ್ರೀಧರ್, ಸರೋವರ್ ಬೆಂಕಿಕೆರೆ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.







