ಎಐಸಿಸಿ ಕದ ತಟ್ಟಿದ ಅಲೆಮಾರಿ ಸಮುದಾಯ | ನಾಳೆಯಿಂದ(ಅ.11) ಎಐಸಿಸಿ ಕಚೇರಿ ಆವರಣದಲ್ಲೇ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು ಅ.10: ಪರಿಶಿಷ್ಟ ಜಾತಿ ಒಳಮೀಸಲಾತಿ ಹಂಚಿಕೆಯಲ್ಲಿ ಅಲೆಮಾರಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು, ಜೊತೆಗೆ ಅಲೆಮಾರಿಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ‘ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ’ ನಾಳೆ(ಅ.11)ಯಿಂದ ಹೊಸದಿಲ್ಲಿ ಎಐಸಿಸಿ ಕೇಂದ್ರ ಕಚೇರಿ ಆವರಣದಲ್ಲಿಯೇ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದೆ.
ಶುಕ್ರವಾರ ಹೊಸದಿಲ್ಲಿಯ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮಂಜುನಾಥ್ ಧಾಯತ್ಕರ್, ಕರ್ನಾಟಕದಲ್ಲಿ ದಸರಾ ಹಬ್ಬ ಆಚರಿಸುತ್ತಿದೆ. ಆದರೆ, ಅಲೆಮಾರಿ ಸಮುದಾಯದ ನಾವು ಬೀದಿಯಲ್ಲಿ ಕೂತಿದ್ದೇವೆ. ನ್ಯಾಯವನ್ನರಸಿ ದಿಲ್ಲಿಯ ವರೆಗೆ ಬಂದಿದ್ದೇವೆ. ಈ ಬಾರಿ ನಮಗೆ ಹಬ್ಬವಿಲ್ಲ, ಹಬ್ಬದ ವೇಳೆ ಆಗುತ್ತಿದ್ದ ವ್ಯಾಪಾರವೂ ಇಲ್ಲ. ಈ ದೇಶದ ಸ್ವಾತಂತ್ರ್ಯ ಯಾರಿಗೆ ಬಂದಿತೋ ಗೊತ್ತಿಲ್ಲ, ನಮ್ಮ ಜನರಿಗಂತೂ ಸಿಕ್ಕಿಲ್ಲ. ಇಂದಿಗೂ ನಮ್ಮಲ್ಲಿನ ಹೆಚ್ಚಿನ ಪಾಲಿನ ಜನ ಬೀದಿಗಳಲ್ಲೇ ಪ್ಲಾಸ್ಟಿಕ್ ಶೆಡ್‍ಗಳಡಿಯಲ್ಲೇ ವಾಸಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಸಮುದಾಯದಲ್ಲಿ ಒಬ್ಬ ಉನ್ನತ ಅಧಿಕಾರಿಯೂ ಇಲ್ಲ, ಒಬ್ಬ ರಾಜಕೀಯ ಪ್ರತಿನಿಧಿಯೂ ಇಲ್ಲ. ಕೃಷಿ ಮಾಡಲು ಭೂಮಿ ಇಲ್ಲ, ವ್ಯಾಪಾರ ಮಾಡಲು ಬಂಡವಾಳವೂ ಇಲ್ಲ. ಬಣ್ಣ ಹಚ್ಚಿಕೊಂಡು ಊರೂರು ಅಲೆದು ಭಿಕ್ಷೆ ಬೇಡುತ್ತೇವೆ. ಇಲ್ಲವೆ ಕರಿಮಣಿ, ಪಿನ್ನ, ಪೀಪಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ನಾವು ಪರಿಶಿಷ್ಟ ಜಾತಿ ಅಡಿಯಲ್ಲಿದ್ದರೂ ನಮಗೆ ಮೀಸಲಾತಿಯ ಸೌಲಭ್ಯವೂ ಸಿಕ್ಕಿಲ್ಲ. ಕರ್ನಾಟಕದಲ್ಲಿ 101 ಪರಿಶಿಷ್ಟ ಜಾತಿಗಳಿಲ್ಲಿ ನಾವು ಕಟ್ಟಕಡೆಯವರು, ಆದರೂ ನಮಗೆ ಮೀಸಲಾತಿ ಇಲ್ಲ ಎಂದು ಅವರು ದೂರಿದರು.
ಒಳಮೀಸಲಾತಿ ಜಾರಿಗೆ ಸರಕಾರ ನ್ಯಾ.ನಾಗಮೋಹನ್‍ದಾಸ್ ನೇತೃತ್ವದ ಸಮಿತಿ ರಚಿಸಿತು. ಸಮಿತಿಯು ಅಲೆಮಾರಿಗಳನ್ನು ಅತ್ಯಂತ ಹಿಂದುಳಿದವರು ಎಂದು ಗುರುತಿಸಿ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತು. ‘ಮೊಟ್ಟಮೊದಲ ಬಾರಿಗೆ ನಮಗೂ ಏನೋ ಸಿಗುತ್ತದೆ’ ಎಂದುಕೊಂಡೆವು. ಆದರೆ, ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿತು.
ಬಲಾಢ್ಯರ ಒತ್ತಡಕ್ಕೆ ಮಣಿದು ಅಸ್ಪೃಶ್ಯರಲ್ಲೇ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ನಮ್ಮನ್ನು ಸ್ಪೃಶ್ಯ ಹಾಗೂ ಸಾಪೇಕ್ಷವಾಗಿ ಮುಂದುವರೆದ ಗುಂಪಿನಲ್ಲಿ ಹಾಕಿಬಿಟ್ಟಿತು. ಇದು ನಮಗೆ ಆಘಾತವನ್ನುಂಟು ಮಾಡಿದೆ. ಸಿಎಂ ಸಿದ್ದರಾಮಯ್ಯ, ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿರುವುದು ನಿಜ, ನಾನು ನಿಮ್ಮ ಜೊತೆಗಿದ್ದೇನೆ. ಆದರೆ, ನನ್ನ ಸಂಪುಟ ನನ್ನ ಜೊತೆಗಿಲ್ಲ, ನಾನು ಒಂಟಿಯಾಗಿದ್ದೇನೆ. ನನ್ನ ಕೈಗಳನ್ನು ಕಟ್ಟಿಹಾಕಲಾಗಿದೆ. ನಾನೇನು ಮಾಡಲಾರೆ ಕ್ಷಮಿಸಿ’ ಎಂದು ಹೇಳುತ್ತಾರೆ.
ಸಿಎಂ ಸಿದ್ದರಾಮಯ್ಯನವರೇ ಅಸಹಾಯಕರಾಗುವಷ್ಟು ಬಲಾಢ್ಯ ಜಾತಿಗಳ ಲಾಬಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿರುವಾಗ ಇದನ್ನು ಸರಿಪಡಿಸುವ ಜವಾಬ್ದಾರಿ ಕಾಂಗ್ರೆಸ್ ಹೈಕಮಾಂಡ್‍ನದ್ದು. ಹೀಗಾಗಿಯೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಕಾಣಲು ದಿಲ್ಲಿಗೆ ಬಂದಿದ್ದೇವೆ. ದಿಲ್ಲಿಗೆ ಬಂದು 10 ದಿನಗಳಾಗಿದೆ. ಇನ್ನೂ ನಮ್ಮನ್ನು ಕಾಯಿಸಬೇಡಿ, ನಮಗೆ ನ್ಯಾಯ ಕೊಡಿಸಿ. ಅ.11ರಿಂದ ಎಐಸಿಸಿ ಕೇಂದ್ರ ಕಚೇರಿಯಲ್ಲಿಯೇ ಧರಣಿ ಕೂರಲು ತೀರ್ಮಾನಿಸಿದ್ದೇವೆ. ನಮ್ಮ ಹಕ್ಕನ್ನು ಪಡೆದೇ ಹಿಂತಿರುಗುತ್ತೇವೆಂದು ಮಹಾ ಒಕ್ಕೂಟ ತಿಳಿಸಿತು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಬಸವರಾಜ್ ನಾರಾಯಣಕರ್, ಮಂಡ್ಯ ರಾಜಣ್ಣ, ಸಂದೀಪ್ ಕುಮಾರ್, ಶರಣಪ್ಪ ತುಮ್ಮರ್‍ಗುದ್ದಿ, ಕರಿಯಪ್ಪ ಗುಡಿಮನಿ, ನೂರ್ ಶ್ರೀಧರ್, ಎನ್‍ಎಫ್‍ಐಡಬ್ಲ್ಯೂನ ನಿಶಾ ಸಿದ್ದು ಉಪಸ್ಥಿತರಿದ್ದರು.







