ಲಂಡನ್: ಪ್ರತಿಷ್ಠಿತ 'ವರ್ಷದ ವನ್ಯಜೀವಿ ಛಾಯಾಗ್ರಾಹಕ' ಪ್ರಶಸ್ತಿ ಪಡೆದ ಬೆಂಗಳೂರಿನ ಬಾಲಕ

ವಿಹಾನ್ ತಾಳ್ಯ ವಿಕಾಸ್ (Photo credit: newindianexpress.com)
ಬೆಂಗಳೂರು: ಲಂಡನ್ನಲ್ಲಿ ನಡೆದ ಪ್ರತಿಷ್ಠಿತ 'ವರ್ಷದ ವನ್ಯಜೀವಿ ಛಾಯಾಗ್ರಾಹಕ' (WPY) ಸ್ಪರ್ಧೆಯಲ್ಲಿ ಬೆಂಗಳೂರಿನ 10 ವರ್ಷದ ವಿಹಾನ್ ತಾಳ್ಯ ವಿಕಾಸ್ ಅವರು ತನ್ನ ವಿಭಾಗದಲ್ಲಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಲಂಡನ್ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿರುವ ಈ ಸ್ಪರ್ಧೆಯು ಪ್ರಪಂಚದಾದ್ಯಂತದ ಅತ್ಯುತ್ತಮ ವನ್ಯಜೀವಿ ಫೊಟೋಗ್ರಫಿಯನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವನ್ನು ‘ಆಸ್ಕರ್ ಆಫ್ ಫೊಟೋಗ್ರಫಿ’ ಎಂದೂ ಪರಿಗಣಿಸಲಾಗಿದೆ. ವಿಹಾನ್ ಅವರ 'ಕೃಷ್ಣನ ಕೆತ್ತನೆಯ ಜೊತೆಗಿನ ಜೇಡ'ದ ಫೊಟೋವು ಪ್ರಶಸ್ತಿಯನ್ನು ಪಡೆಯಲು ಸಹಾಯ ಮಾಡಿದೆ.
(Photo credit: newindianexpress.com)
ವನ್ಯಜೀವಿ ಛಾಯಾಗ್ರಹಣದಲ್ಲಿ ತಮ್ಮ ತಂದೆಯ ಉತ್ಸಾಹದಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿರುವ ವಿಹಾನ್, “ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ತುಂಬಾ ಸಂತೋಷ ಪಡುತ್ತಿದ್ದೇನೆ. ನಾನು ಛಾಯಾಗ್ರಹಣ ಮಾಡಲು ಇಷ್ಟಪಡುತ್ತೇನೆ, ಅದು ನಮಗೆ ಸೃಜನಾತ್ಮಕವಾಗಿ ಯೋಚಿಸಲು ಮತ್ತು ಪ್ರಕೃತಿಯೊಂದಿಗೆ ಸಂಪರ್ಕಕ್ಕೆ ಸಹಾಯ ಮಾಡುತ್ತದೆ" ಎಂದಿದ್ದಾರೆ.
ಈ ವರ್ಷದ ಸ್ಪರ್ಧೆಯು ವಿವಿಧ ವಿಭಾಗಗಳಲ್ಲಿ 95 ದೇಶಗಳಿಂದ ಸ್ಪರ್ಧಿಗಳು ಭಾಗಿಯಾಗಿದ್ದರು. ಒಟ್ಟು 50,000 ಚಿತ್ರಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಟಾಪ್ 100 ಅನ್ನು ಸ್ಪರ್ಧೆಗೆ ಪರಿಗಣಿಸಲಾಗಿದೆ. 11 ಅನ್ನು ವಿವಿಧ ವಿಭಾಗಗಳಲ್ಲಿ ಆಯ್ಕೆ ಮಾಡಲಾಗಿದ್ದು, ವಿಹಾನ್ 10 ವರ್ಷದೊಳಗಿನವರ ವಿಭಾಗದ ಪ್ರಶಸ್ತಿಯನ್ನು ಗೆದ್ದಿದ್ದಾರೆ.







