ಬೆಂಗಳೂರು| ಕಾಲ್ತುಳಿತದಲ್ಲಿ 13 ವರ್ಷದ ಬಾಲಕಿ ಸಹಿತ 11 ಮಂದಿ ಬಲಿ
ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದಿದ್ದೇನು?; ಇಲ್ಲಿದೆ ಸಂಪೂರ್ಣ ಮಾಹಿತಿ...

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತಕ್ಕೆ ಸಾಕ್ಷಿಯಾಗಿ ರಾಶಿ ಬಿದ್ದಿದ್ದ ಪಾದರಕ್ಷೆಗಳು(ಫೈಲ್ ಚಿತ್ರ)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 13 ವರ್ಷದ ಬಾಲಕಿ ಸಹಿತ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದು, 50ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೂಮಿಕ್(20), ಸಹನ(19), ಪೂರ್ಣಚಂದ್(32), ಚಿನ್ಮಯಿ (19), ದಿವ್ಯಾಂಶಿ(13), ಚಿಂತಾಮಣಿ ನಿವಾಸಿ ಶ್ರವಣ್ (20), ಆಂಧ್ರಪ್ರದೇಶದ ನಿವಾಸಿ ದೇವಿ (29), ಕಣ್ಣೂರು ನಿವಾಸಿ ಶಿವಲಿಂಗ್ (17), ಮನೋಜ್ (33), ಮಂಗಳೂರು ನಿವಾಸಿ ಅಕ್ಷತಾ ಮೃತಪಟ್ಟವರು. ಮತ್ತೋರ್ವ 20 ವರ್ಷದ ವ್ಯಕ್ತಿಯ ಹೆಸರು ಪತ್ತೆಯಾಗಿಲ್ಲ ಎಂದು ಸರಕಾರ ತಿಳಿಸಿದೆ.
ಸಿ.ವೇಣು (22), ಪ್ರಕಾಶ್ ರಾಜ್ (37), ನಿಖಿಲ್ (23), ರಕ್ಷಿತಾ (20), ರೋಜಾ (26), ಹೀನಾ (26), ಬಿಲಾಲ್ (14), ಶಾಮಿಲ್ (25), ರಾಹುಲ್ (24), ಅನೂಜ್ (25), ಸುಶ್ಮಿತಾ (23), ಅನೋಜ್ (20), ಚೈತನ್ಯ (30), ಶಿಲ್ಪಾ (29), ಹನೀಫ್ (22), ಅನ್ಚಲ್ (23), ರಾಜೇಶ್ (26), ಮನೋಜ್ (21), ಲಕೀಶ (9), ದೀಕ್ಷ (18), ಪ್ರಶಾಂತ್ (24) ಅನೀಶ್ (17) ಗಾಯಗೊಂಡವರು.
ಬುಧವಾರ ಸಂಜೆ 4:30ರ ಸುಮಾರಿಗೆ ಬೆಂಗಳೂರು ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವಕ್ಕಾಗಿ ಬೃಹತ್ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಅದರಂತೆ ನಿರೀಕ್ಷೆಗೂ ಮೀರಿ ಆರ್ಸಿಬಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಧಾವಿಸಿದ್ದರು.
ಇತ್ತ ನೋಡು ನೋಡುತ್ತಿದ್ದಂತೆ ವಿಪರೀತ ಜನಸಂದಣಿ ಕಂಡುಬಂದಿದ್ದು ಮಾತ್ರವಲ್ಲದೆ, ಕ್ರೀಡಾಂಗಣ ಪ್ರವೇಶ ಬಾಗಿಲುಗಳು ಮುಂದೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನಿಲ್ಲತೊಡಗಿದರು. ಇನ್ನೊಂದೆಡೆ ಪೊಲೀಸರು, ಕ್ರೀಡಾಂಗಣ ಸಿಬ್ಬಂದಿ ಅಭಿಮಾನಿಗಳ ಗುಂಪು ನಿಯಂತ್ರಿಸಲು ಹರಸಾಹಸವೇ ಪಟ್ಟಿತು. ಈ ವೇಳೆ ಕ್ರೀಡಾಂಗಣಕ್ಕೆ ಪ್ರವೇಶ ಪಡೆಯುವ ಬರದಲ್ಲಿ ಉಂಟಾದ ತಳ್ಳಾಟ-ನೂಕಾಟ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಇನ್ನುಳಿದ 7 ಮಂದಿ ತೀವ್ರವಾಗಿ ಅಸ್ವಸ್ಥರಾದ ಬೆನ್ನಲ್ಲೇ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅದೇ ರೀತಿ, ಈ ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡು ಅಸ್ವಸ್ಥಗೊಂಡಿದ್ದು, ಅವರನ್ನು ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆ, ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.
ಘಟನೆ ಕುರಿತು ವೈದೇಹಿ ಆಸ್ಪತ್ರೆಯ ಹಿರಿಯ ವೈದ್ಯೆ ಡಾ.ಎಂ.ಎಸ್.ಹುಮೆರಾ ಪ್ರತಿಕ್ರಿಯಿಸಿ, ‘ನಮ್ಮ ಆಸ್ಪತ್ರೆಗೆ ಒಟ್ಟು 16 ಜನ ದಾಖಲಾಗಿದ್ದು, ಈ ಪೈಕಿ ಓರ್ವ ಮಹಿಳೆ ಹಾಗೂ ನಾಲ್ವರು ಯುವಕರು ಮೃತಟಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು’ ಎಂದು ತಿಳಿಸಿದರು.
ಹಾಗೆಯೇ ಇಲ್ಲಿನ ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಲ್ಲಿ ಏಳು ಮಂದಿ ಮೃತಪಟ್ಟಿದ್ದು, ಆಸ್ಪತ್ರೆಗಳ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ಲಾಠಿ ಪ್ರಹಾರ:
ಚಿನ್ನಸ್ವಾಮಿ ಕ್ರೀಡಾಂಗಣದ 18, 19, ಮತ್ತು 20ರ ಸಂಖ್ಯೆಯ ಗೇಟ್ಗಳನ್ನು ತೆರೆಯುತ್ತಿದ್ದಂತೆ ಅಭಿಮಾನಿಗಳು ಏಕಾಏಕಿ ಒಳನುಗ್ಗಿದ್ದು, ತಳ್ಳಾಟ, ನೂಕುನುಗ್ಗಲು ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಕಾರಿನಲ್ಲಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಯಿತು.
ಇದಿಷ್ಟೇ ಅಲ್ಲದೆ, ವಿಧಾನಸೌಧದ ಮುಂಭಾಗದ ಕಾರ್ಯಕ್ರಮದಲ್ಲಿಯೂ ಅಭಿಮಾನಿಗಳ ದಟ್ಟಣೆ ಹೆಚ್ಚಾಗಿ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡರು. ಅಲ್ಲದೆ, ಕೆಲವರು ಹೈಕೋರ್ಟ್ ಆವರಣದ ಕಟ್ಟಡದ ಮೇಲೆ, ಬೃಹದಾಕಾರದ ಮರಗಳ ಮೇಲೆ ಹತ್ತಿ ಹುಚ್ಚಾಟ ಮೆರೆದರು. ಈ ವೇಳೆ ಅಲ್ಲಿಯೂ ಪೊಲೀಸರು ಲಾಠಿ ಪ್ರಹಾರ ನಡೆಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಮುರಿದು ಬಿದ್ದ ಪ್ರವೇಶ ದ್ವಾರ:
ಬುಧವಾರ ಸಂಜೆ ನಿರೀಕ್ಷೆಗೂ ಮೀರಿ ಆರ್ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನುಗ್ಗಿದರು. ಕ್ಷಣಾರ್ಧದಲ್ಲೇ ಕ್ರೀಡಾಂಗಣ ಭರ್ತಿಯಾದ ಹಿನ್ನೆಲೆಯಲ್ಲಿ ಎಲ್ಲ ಪ್ರವೇಶ ಪಡೆಯುವ ಎಲ್ಲ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಈ ವೇಳೆ ಕ್ರೀಡಾಂಗಣದ ಹೊರಭಾಗದಲ್ಲಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಪೊಲೀಸರ ನಿಯಂತ್ರಣವನ್ನೂ ಲೆಕ್ಕಿಸದೆ ಪ್ರವೇಶ ದ್ವಾರಗಳ ಮೇಲೆ ಹತ್ತಿ ಒಳಗೆ ನುಗ್ಗಲು ಯತ್ನಿಸಿದಾಗ 12ರ ಸಂಖ್ಯೆಯ ಕಬ್ಬಿಣದ ಬೃಹದಾಕಾರ ಗೇಟ್ವೊಂದು ದಿಢೀರನೆ ಕುಸಿದು ಬಿದ್ದಿದೆ.
ಆಗ ಅದನ್ನು ಹಿಡಿದು ನಿಂತಿದ್ದ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೆಟ್ರೋ ತಾತ್ಕಾಲಿಕ ಬಂದ್:
ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪಕ್ಕಿರುವ ಕಬ್ಬನ್ಪಾರ್ಕ್, ಎಂ.ಜಿ.ರಸ್ತೆ ಹಾಗೂ ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾದ ಪರಿಣಾಮ ಬುಧವಾರ ಸಂಜೆ 4:30ರಿಂದ ಪ್ರಮುಖ ಮಾರ್ಗಗಳ ರೈಲುಗಳ ನಿಲುಗಡೆ ಸ್ಥಗಿತಗೊಳಿಸಲಾಗಿತ್ತು. ಈ ನಿಲ್ದಾಣಗಳಲ್ಲಿ ಟೋಕನ್ ಮತ್ತು ಕ್ಯೂಆರ್ ಟಿಕೆಟ್ ವಿತರಣಾ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.
ಈ ವೇಳೆ ಪ್ರಯಾಣಿಕರು ತಾತ್ಕಾಲಿಕ ಬದಲಾವಣೆಗಳಿಗೆ ಗಮನಿಸಿ ಸಹಕರಿಸಬೇಕೆಂದು ಬಿಎಂಆರ್ಸಿಎಲ್ ಮನವಿ ಮಾಡಿಕೊಂಡರೂ ಜನರ ದಟ್ಟಣೆ ಮಾತ್ರ ನಿಲ್ದಾಣಗಳಲ್ಲಿ ಕ್ಷೀಣಿಸಿರಲಿಲ್ಲ.
ತನಿಖೆಗೆ ಬೆಂಗಳೂರು ನಗರ ಡಿಸಿ ನಿಯೋಜನೆ
ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ಗಳ ಬಳಿ ಉಂಟಾದ ಕಾಲ್ತುಳಿತ ಹಾಗೂ ಮೃತಪಟ್ಟವರ ಸಾವಿಗೆ ಕಾರಣಗಳ ಬಗ್ಗೆ ಮತ್ತು ಈ ಪ್ರಕರಣದಲ್ಲಿ ಲೋಪಕ್ಕೆ ಕಾರಣರಾದವರು ಹಾಗೂ ನಿರ್ಲಕ್ಷ್ಯತೆ ಕುರಿತು ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನಾಗಿ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಜಗದೀಶ್ ಜಿ. ಅವರನ್ನು ನೇಮಿಸಿದ್ದು, ಹದಿನೈದು ದಿನಗಳ ಒಳಗೆ ವರದಿ ನೀಡಲು ಒಳಾಡಳಿತ ಇಲಾಖೆ ಆದೇಶಿದೆ.
ಸರಕಾರವೆ ಹೊಣೆ: ಬಿ.ಎಸ್.ಯಡಿಯೂರಪ್ಪ
ಸಮರ್ಪಕ ವ್ಯವಸ್ಥೆ, ಅಗತ್ಯ ಬಂದೋಬಸ್ತ್ ಮಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇಂತಹ ಅಸಮರ್ಥ, ಬೇಜವಾಬ್ದಾರಿ ಸರಕಾರದ ವೈಫಲ್ಯದಿಂದ ಸಂಭ್ರಮೋತ್ಸವಕ್ಕೆ ಸೂತಕದ ಛಾಯೆ ಆವರಿಸಿದೆ. ಲಕ್ಷಾಂತರ ಅಭಿಮಾನಿಗಳು ಸೇರುವ ಸಾಧ್ಯತೆ ಗೊತ್ತಿದ್ದೂ, ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾದರೂ ಏಕೆ? ಮುನ್ನೆಚ್ಚರಿಕೆ ವಹಿಸಿ ತಡೆಯಬಹುದಾಗಿದ್ದ ದುರಂತಕ್ಕೆ ಈ ಅಸಮರ್ಥ ಸರಕಾರ ಹೊಣೆ ಹೊರಲೇಬೇಕು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
‘ಅಭಿಮಾನ’ ಜೀವಕ್ಕಿಂತ ದೊಡ್ಡದಲ್ಲ: ಡಿ.ಕೆ. ಶಿವಕುಮಾರ್
ಆರ್ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆ ಸಾಕ್ಷಿಯಾಗಬೇಕಿದ್ದ ಜನರು ದುರಂತಕ್ಕೆ ಒಳಗಾಗಿ, ಮೃತಪಟ್ಟಿರುವುದು ತೀವ್ರ ನೋವು ಮತ್ತು ಆಘಾತ ತಂದಿದೆ. ಮೃತರಿಗೆ ನನ್ನ ಸಂತಾಪಗಳು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು. ಅಭಿಮಾನ ಇರಲಿ, ಆದರೆ ಜೀವಕ್ಕಿಂತ ದೊಡ್ಡದಲ್ಲ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಉಪಮುಖ್ಯಮಂತ್ರಿ .ಕೆ.ಶಿವಕುಮಾರ್ ಹೇಳಿದ್ದಾರೆ.










