ನಾಳೆಯಿಂದ ಮೂರು ದಿನ ‘ಕಾಮನ್ ವೆಲ್ತ್ ಸಂಸದೀಯ ಸಂಘ ಭಾರತ ವಿಭಾಗದ 11ನೇ ಸಮ್ಮೇಳನ’ : ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು, ಸೆ.10 : ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಮನ್‍ವೆಲ್ತ್ ಸಂಸದೀಯ ಸಂಘ(ಸಿಪಿಎ) ಭಾರತ ವಿಭಾಗದ 11ನೇ ಸಮ್ಮೇಳನವನ್ನು ಸೆ.11 ರಿಂದ 13ರ ವರೆಗೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ನಾಳೆ (ಸೆ.11) ಸಂಜೆ 5.30ಕ್ಕೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ರಾಜ್ಯಸಭೆಯ ಉಪಸಭಾಪತಿ, ದೇಶದ ಎಲ್ಲ ರಾಜ್ಯಗಳ ವಿಧಾನಸಭೆಯ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ವಿಧಾನಪರಿಷತ್ತಿನ ಸಭಾಪತಿಗಳು, ಉಪಸಭಾಪತಿಗಳು, ಲೋಕಸಭಾ ಸದಸ್ಯರು, ವಿದೇಶಿ ಗಣ್ಯರು, ಲೋಕಸಭೆ-ರಾಜ್ಯಸಭೆಯ ಮಹಾ ಕಾರ್ಯದರ್ಶಿಗಳು ಹಾಗೂ ರಾಜ್ಯ ವಿಧಾನಮಂಡಲದ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ಸಿಪಿಎ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಂಜೆ 5 ಗಂಟೆಗೆ ಭವ್ಯ ಮೆಟ್ಟಿಲುಗಳ ಮೇಲೆ ಫೋಟೋಸೆಷನ್ ನಡೆಯಲಿದೆ. ಆನಂತರ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸ್ಟ್ಯಾಂಪ್ ಬಿಡುಗಡೆ ಮಾಡಲಿದ್ದಾರೆ. ಒಂದು ವೇಳೆ ಮಳೆ ಬಂದರೆ ಕಾರ್ಯಕ್ರಮವನ್ನು ಬ್ಯಾಂಕ್ವೆಟ್ ಹಾಲ್‍ಗೆ ಸ್ಥಳಾಂತರಿಸಲಾಗುವುದು ಎಂದು ಖಾದರ್ ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ವಿಧಾನಮಂಡಲದ ಮಾಜಿ ಸ್ಪೀಕರ್‌ಗಳು, ಮಾಜಿ ಸಭಾಪತಿಗಳು ಹಾಗೂ ನಿವೃತ್ತ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಗುವುದು. ಅಲ್ಲದೇ, ಆಳ್ವಾಸ್ ನುಡಿಸಿರಿಯ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕ ವೀಕ್ಷಣೆಗೆ ಅವಕಾಶ ಇರಲಿದೆ ಎಂದು ಅವರು ತಿಳಿಸಿದರು.
ಸೆ.12 ಹಾಗೂ 13ರಂದು ‘ಶಾಸನ ಸಭೆಗಳಲ್ಲಿ(ವಿಧಾನಸಭೆ ಮತ್ತು ವಿಧಾನಪರಿಷತ್) ಚರ್ಚೆಗಳು ಮತ್ತು ಸಂವಾದಗಳು: ಜನರ ವಿಶ್ವಾಸವನ್ನು ಬೆಳೆಸುವುದು, ಜನರ ಆಕಾಂಕ್ಷೆಗಳನ್ನು ಪೂರೈಸುವುದು’. ಈ ವಿಷಯದ ಕುರಿತು ಚರ್ಚೆಗಳು ನಡೆಯಲಿವೆ. ಲೋಕಸಭೆಯ ಮಾರ್ಗದರ್ಶನದಂತೆ ಇಡೀ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ ಎಂದು ಖಾದರ್ ಹೇಳಿದರು.
ಸುಮಾರು 100ಕ್ಕೂ ಹೆಚ್ಚು ಅತಿಥಿಗಳು ಈ ಸಮ್ಮೇಳನದ ಭಾಗವಾಗಲಿದ್ದಾರೆ. ಅವರಿಗೆ ಮೈಸೂರು ಸ್ಯಾಂಡಲ್ ಸೋಪ್ ಕಿಟ್, ಮಹಿಳೆಯರಿಗೆ ರೇಶ್ಮೆ ಸೀರೆ, ಐಪ್ಯಾಡ್ ಉಡುಗೊರೆ ನೀಡಲಾಗುವುದು ಎಂದು ಅವರು ತಿಳಿಸಿದರು.
ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಈ ಸಮ್ಮೇಳನದಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಗುವುದು. ಆ ನಿರ್ಣಯಗಳನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿಕೊಡಲಾಗುವುದು. ಅವುಗಳನ್ನು ಅನುಷ್ಠಾನ ಮಾಡುವುದು ಆಯಾ ರಾಜ್ಯಗಳ ಹೊಣೆಯಾಗಿದೆ. ಮುಂದಿನ ಸಮ್ಮೇಳನ ನಡೆಯುವಾಗ ಸಹಜವಾಗಿಯೇ ಬೆಂಗಳೂರಿನಲ್ಲಿ ಕೈಗೊಂಡ ನಿರ್ಣಯಗಳ ಪ್ರಗತಿ ಏನಾಗಿದೆ ಎಂಬುದರ ಕುರಿತು ವಿಮರ್ಶೆ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ ಹಾಗೂ ಲೋಕಸಭೆಯ ಸಭಾಧ್ಯಕ್ಷರ ಕಾರ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
‘ರಾಜ್ಯಸಭೆಯ ಅಧ್ಯಕ್ಷರಾಗಿರುವ ಉಪರಾಷ್ಟ್ರಪತಿಯವರು ಸೆ.12ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರನ್ನು ನಾವೇ ಖುದ್ದು ಭೇಟಿ ಮಾಡಿ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಬೇಕಿತ್ತು. ಆದರೆ, ನಿನ್ನೆಯಷ್ಟೆ ಚುನಾವಣೆ ನಡೆದು ನೂತನವಾಗಿ ಉಪರಾಷ್ಟ್ರಪತಿ ಆಯ್ಕೆಯಾಗಿದ್ದಾರೆ. ನಾವು ಅವರಿಗೆ ಪತ್ರ ಬರೆದು, ದೂರವಾಣಿ ಮೂಲಕ ಸಂಪರ್ಕಿಸಿ ಆಹ್ವಾನ ನೀಡುತ್ತೇವೆ’
-ಯು.ಟಿ.ಖಾದರ್, ಸ್ಪೀಕರ್







