ಪೂರ್ಣಗೊಂಡಿರುವ ಎಲ್ಲಾ ಕಟ್ಟಡಗಳಿಗೆ ವಿದ್ಯುತ್-ನೀರು ಸಂಪರ್ಕ ಪಡೆಯಲು 15 ದಿನಗಳ ಕಾಲಾವಕಾಶ: ಸಿಎಂ ಡಿ.ಕೆ. ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Photo: X)
ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮೇ 31ರೊಳಗೆ ಪೂರ್ಣಗೊಂಡಿರುವ ಎಲ್ಲ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ವಿನಾಯಿತಿ ನೀಡಲಾಗಿದ್ದು, ಈ ವಿಚಾರವನ್ನು ಸರಕಾರಿ ಆದೇಶ ಬಂದ ದಿನದಿಂದ 15 ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶನಿವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಟ್ಟಡ ಮಾಲಕರು ಕಟ್ಟಡದ ಜೊತೆಗಿನ ಫೋಟೊ ಹಾಗೂ ಜಿಪಿಎಸ್ ದಾಖಲೆ ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ರೇಷ್ಮೆ ಸಾಕಾಣಿಕೆ ಮನೆ, ಕೊಟ್ಟಿಗೆಗಳಿಗೆ ವಿನಾಯಿತಿ ನೀಡಲಾಗಿದೆ. ಹೊಸದಾಗಿ ನಿರ್ಮಾಣ ಮಾಡುವ ಕಟ್ಟಡಗಳಿಗೆ ಅವಕಾಶವಿಲ್ಲ. ಈ ಸಂಬಂಧ ಇಂಧನ, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ದಿ ಸಚಿವರ ಬಳಿ ವಿವರವಾಗಿ ಚರ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಯಾದಗಿರಿಯ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನೂತನ 200 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. 18 ಕೋಟಿ ರೂ. ವೆಚ್ಚದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಆರು ಸಿವಿಲ್ ಕಾಮಗಾರಿಗಳಿಗೆ ಮತ್ತು ಬೆಂಗಳೂರು ವೈದ್ಯಕೀಯ ಸಂಶೋಧನಾ ಆಸ್ಪತ್ರೆಗೆ ಸುಮಾರು 60 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
620 ಬಸ್ ಖರೀದಿಗೆ ಅನುಮೋದನೆ:
ರಾಜ್ಯ ರಸ್ತೆ ಸಾರಿ ನಿಗಮಕ್ಕೆ 400 ಬಸ್ಸುಗಳು ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ 220 ಬಸ್ಸುಗಳು ಒಳಗೊಂಡಂತೆ ಒಟ್ಟು 620 ಹೊಸ ಬಿಎಸ್-6 ಪೂರ್ಣ ನಿರ್ಮಿತ ಮೊಫಿಸ್ಸಿಲ್ ಬಸ್ಸುಗಳನ್ನು ಒಟ್ಟು 235.60 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ಎಂದು ಶಿವಕುಮಾರ್ ಹೇಳಿದರು.
ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯದ ಪಿಎಂ ಇ-ಬಸ್ ಸೇವಾ ಯೋಜನೆ ಅಡಿಯಲ್ಲಿ ರಾಜ್ಯದ ಮೂರು ಸಾರಿಗೆ ನಿಗಮಗಳಿಗೆ 10 ನಗರಗಳ 11 ಸ್ಥಳಗಳಲ್ಲಿ ಎಲೆಕ್ಟ್ರಿಕ್ ಬಸ್ ಘಟಕಗಳನ್ನು 112.72 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ಎಂದು ಅವರು ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸಂಡೂರು ಪಟ್ಟಣದಲ್ಲಿ ಸುಸಜ್ಜಿತವಾದ ಸರ್ಕಾರಿ ಬಸ್ ನಿಲ್ದಾಣ ಮತ್ತು ಮೂಲಭೂತ ಸೌಕರ್ಯ ನಿರ್ಮಾಣ ಕಾಮಗಾರಿಯನ್ನು 30 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಎಂದು ಮುಖ್ಯಮಂತ್ರಿ ಹೇಳಿದರು.
ವಿಧಾನಪರಿಷತ್ತಿಗೆ ಐದು ಸದಸ್ಯರ ನಾಮ ನಿರ್ದೇಶನ:
ವಿಧಾನಪರಿಷತ್ತಿಗೆ ಐದು ಸದಸ್ಯರನ್ನು ರಾಜ್ಯಪಾಲರ ಮೂಲಕ ನಾಮ ನಿರ್ದೇಶನ ಮಾಡಿಸುವ ಸಂಬಂಧ, ಯಾರ ಹೆಸರನ್ನು ಶಿಫಾರಸ್ಸು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸಚಿವ ಸಂಪುಟ ನನಗೆ ನೀಡಿದೆ. ಅದೇ ರೀತಿ, ವಿವಿಧ ಸಚಿವ ಸಂಪುಟ ಉಪ ಸಮಿತಿಗಳನ್ನು ಪುನರ್ ರಚನೆ ಮಾಡುವ ಅಧಿಕಾರವನ್ನು ನನಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ವಿದ್ಯಾರ್ಥಿಗಳಿಗಾಗಿ ದಿಲ್ಲಿಯಲ್ಲಿ ಕರ್ನಾಟಕ ಭವನ:
ಯುಪಿಎಸ್ಸಿ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಒಂದೇ ಸೂರಿನಡಿ ಎಲ್ಲ ಅನುಕೂಲ ದೊರೆಯಬೇಕು ಎನ್ನುವ ಕಾರಣಕ್ಕೆ ಕೆಐಡಬ್ಲ್ಯೂಬಿ ವತಿಯಿಂದ ಹೊಸದಿಲ್ಲಿಯಲ್ಲಿ ಕರ್ನಾಟಕ ಭವನ-4 ಅನ್ನು 80.75 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಇದರಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಶೇ.50 ಹಾಗೂ ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ದಿಲ್ಲಿಯಲ್ಲಿ ಕಾನೂನು ವಿಭಾಗ ಸದೃಢ:
ಸುಪ್ರೀಂ ಕೋರ್ಟಿನಲ್ಲಿರುವ ವ್ಯಾಜ್ಯಗಳ ಇತ್ಯರ್ಥಕ್ಕೆ ದಿಲ್ಲಿಯ ಕಾನೂನು ವಿಭಾಗವನ್ನು ಮತ್ತಷ್ಟು ಸದೃಢಗೊಳಿಸಲು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಾದೇಶಿಕ ಆಯುಕ್ತರ ಕಚೇರಿ ಕಾರ್ಯವೈಖರಿ ನನಗೆ ಸಮಾಧಾನ ತಂದಿಲ್ಲ. ಆದ ಕಾರಣಕ್ಕೆ ಅದನ್ನು ಹೊಸದಾಗಿ ಸಮೀಕರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕೇಂದ್ರದ ಯೋಜನೆಗಳನ್ನು ಕರ್ನಾಟಕಕ್ಕೆ ತರಲು ಅಧಿಕಾರಿಗಳ ತಂಡ ನಿಯೋಜನೆ:
ಕೇಂದ್ರದ ಯೋಜನೆಗಳನ್ನು ರಾಜ್ಯಕ್ಕೆ ತರುವುದು ಹೇಗೆ? ಯಾವ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕು. ಯಾವ ಯೋಜನೆಗಳು ಇತರೆ ರಾಜ್ಯಗಳಲ್ಲಿದೆ. ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳು ಯಾವ ಯೋಜನೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಯಲು ಹೊಸ ಅಧಿಕಾರಿಗಳ ತಂಡ ರಚಿಸಿ ನೇಮಕ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈಗಾಗಲೇ ದಿಲ್ಲಿಗೆ ತೆರಳಿ ಕರ್ನಾಟಕದ ಅಧಿಕಾರಿಗಳ ಸಭೆ ನಡೆಸಿ ಅವರ ಸಲಹೆ ಪಡೆದಿದ್ದೇನೆ. ನಮ್ಮ ಅಧಿಕಾರಿಗಳು ಹಲವಾರು ಸಲಹೆ ನೀಡಿದ್ದು, ಕರ್ನಾಟಕದ ಏಳಿಗೆಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ದಿಲ್ಲಿಯಲ್ಲಿರುವ ನಮ್ಮ ಅಧಿಕಾರಿಗಳು ತಂಡಗಳನ್ನು ರಚಿಸಿಕೊಂಡು ಇಲಾಖೆಗೆ ಅನುಗುಣವಾಗಿ ಸಲಹೆ ನೀಡಲು ಮುಂದೆ ಬಂದಿದ್ದಾರೆ. ಇವರ ಜೊತೆಗೆ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ನಿವೃತ್ತ ಅಧಿಕಾರಿಗಳನ್ನು ಈ ತಂಡಕ್ಕೆ ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಳಸಾಪೂರ ಗ್ರಾಮದಲ್ಲಿನ ಒಟ್ಟು 18 ಎಕರೆ ಜಮೀನಿನಲ್ಲಿ 50:50ರ ಅನುಪಾತದಲ್ಲಿ ರೈತರು ಹಾಗೂ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ 19.69 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ವಸತಿ ಯೋಜನೆಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಜಮೀನಿನ ಪೈಕಿ ಸ್ವಯಂಪ್ರೇರಿತವಾಗಿ ಜಮೀನು ನೀಡಲು ರೈತರು ಮುಂದೆ ಬಂದಿದ್ದಾರೆ. ಇದರ ಕಾಲಾವಕಾಶವನ್ನು 31.10.2026 ರವರೆಗೆ ವಿಸ್ತರಿಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.
ಕುಡಿಯುವ ನೀರಿನ ವಿಚಾರವಾಗಿ ಸಚಿವ ಸಂಪುಟ ವಿಸ್ತರಣೆಯಾದ ತಕ್ಷಣ ಜವಾಬ್ದಾರಿ ನೀಡಲಾಗುವುದು. ಪ್ರಸಕ್ತ ಈಗ ಇರುವವರೆ ನೀರಿನ ಸಮಸ್ಯೆ ಬರದಂತೆ ನಿಗಾವಹಿಸಬೇಕು ಎಂದು ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.






