ಫೆ.16ರಿಂದ ಫಿಸಿಯೊಥೆರಪಿ ಸಮ್ಮೇಳನ: ಯು.ಟಿ. ಇಫ್ತಿಕಾರ್ ಅಲಿ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ‘ಫಿಸಿಯೊಥೆರಪಿ ಸಮ್ಮೇಳನವನ್ನು ಫೆ.16 ಮತ್ತು 17ರಂದು ಹುಬ್ಬಳ್ಳಿಯ ಸತ್ತೂರಿನ ಡಾ.ವೀರೇಂದ್ರ ಹೆಗಡೆ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಯು.ಟಿ.ಇಫ್ತಿಕಾರ್ ಅಲಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಮಂಗಳೂರಿನಲ್ಲಿ ಫಿಸಿಯೊಥೆರಪಿ ಸಮ್ಮೇಳನ ನಡೆಸಲಾಗುತ್ತಿತ್ತು. ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಸಮ್ಮೇಳನ ನಡೆಸಬೇಕೆಂಬ ಉದ್ದೇಶದಿಂದ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ದಿನದಂದು ಬೆಳಗ್ಗೆ 9 ಗಂಟೆಯಿಂದ ವಿವಿ‘ ಗೋಷ್ಠಿಗಳು ಆರಂಭಗೊಳ್ಳಲಿವೆ. ಬೆಳಗ್ಗೆ 11:30ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಈ ಸಮ್ಮೇಳನದಲ್ಲಿ ಎಸ್‌ಡಿಎಂ ಉಪಕುಲಪತಿ ಡಾ.ನಿರಂಜನ ಕುಮಾರ, ಪದ್ಮಾಲತಾ ಸಹಿತ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಫೆ.17ರಂದು ಮ 12:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಿರ್ದೇಶಕ ಸಂದೀಪ್ ರೆಡ್ಡಿ ವಾಗಾ ಸೇರಿದಂತೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸಮ್ಮೇಳನದಲ್ಲಿ ರಾಜ್ಯ, ಹೊರ ರಾಜ್ಯಗಳಿಂದ ಸುಮಾರು 2 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ರಾಜ್ಯದ 50ಕ್ಕೂ ಹೆಚ್ಚು ಫಿಸಿಯೊಥೆರಪಿ ಕಾಲೇಜಿನ ವಿದ್ಯಾರ್ಥಿಗಳು, ಫಿಸಿಯೊಥೆರಪಿ ತಜ್ಞರು, ಇತರ ಪ್ರಮುಖರು ಭಾಗವಹಿಸಲಿದ್ದಾರೆ. ಎರಡು ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಡಾ.ಮಧುಲಿಕಾ ಹೊರಟ್ಟಿ, ಡಾ.ದೇವಿದಾಸ್ ಪಾಟೀಲ್, ವಸಂತ ಹೊರಟ್ಟಿ, ಸಂದೀಪ್ ರೆಡ್ಡಿ ವಾಗಾ ಮತ್ತಿತರರು ಉಪಸ್ಥಿತರಿದ್ದರು.







