ವಸತಿ ಮಕ್ಕಳಿಗೆ 1650 ರೂ. ಖರ್ಚು ಆದರೆ ಕೈದಿಗಳಿಗೆ ಖರ್ಚಿನ ಮಿತಿ ಇಲ್ಲ: ಶಾಸಕಿ ರೂಪಕಲಾ ಶಶಿಧರ್ ಬೇಸರ

ಬೆಳಗಾವಿ: ವಸತಿ ಶಾಲೆಯಲ್ಲಿ ಓದು ಮಕ್ಕಳಿಗೆ ಒಂದು ತಿಂಗಳಿಗೆ ತಲಾ 1650 ರೂ. ಖರ್ಚು ಮಾಡುತ್ತೇವೆ. ಅದೇ ಜೈಲಿನಲ್ಲಿರುವ ಕೈದಿಯ ಖರ್ಚಿಗೆ ಮಿತಿ ಇಲ್ಲ ಎಂದು ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಬರಗಾಲದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ನಮ್ಮ ಕೋಲಾರ ಜಿಲ್ಲೆಯ ಜನ ಕೃಷಿ ಆಧಾರಿತವಾಗಿದ್ದಾರೆ. ನಮ್ಮಲ್ಲಿ ಶಾಶ್ವತ ನೀರಾವರಿ ಸೌಲಭ್ಯ ಇಲ್ಲ. ಕೃಷಿ ಕೈ ಕೊಟ್ಟರೆ ಮಕ್ಕಳಿಗೆ ವಿದ್ಯಾಭ್ಯಾಸ ಸಿಗಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಿಗೆ ಕಳಿಸುತ್ತಾರೆ ಎಂದರು.
ಆದರೆ ಶೇ.90ರಷ್ಟು ವಸತಿ ಶಾಲೆಗಳಲ್ಲಿ ವಾರ್ಡನ್ ಗಳು ಇಲ್ಲ. ವಾರ್ಡನ್ ಜಾಗದಲ್ಲಿ ಡಿ ಗ್ರೂಪ್ ನವರು ಇದ್ದಾರೆ. ಅಡುಗೆ ಸಹಾಯಕರಿಗೆ ಅನುಭವದ ಕೊರತೆಯಿದೆ. ಕಾಳಜಿಯಿಂದ ಕೆಲಸ ಮಾಡಲ್ಲ. ವಾರ್ಡನ್ ಹುದ್ದೆ ತೆಗೆದುಕೊಳ್ಳುವವರಿಗೆ ಮಕ್ಕಳ ಬಗ್ಗೆ ಕಾಳಜಿ ಇರಲ್ಲ. ಪ್ರತಿ ಜಿಲ್ಲೆಯಲ್ಲಿ 6-8 ಸಾವಿರ ಮಕ್ಕಳು ವಸತಿ ಶಾಲೆಗಳನ್ನು ಅವಲಂಬಿಸಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸರಿಸುಮಾರು 3 ಲಕ್ಷ ಮಕ್ಕಳು ವಸತಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಆದರೆ 50ವರ್ಷದ ಹಳೆಯ ಕಟ್ಟಡಗಳಿವೆ. ಸರಿಯಾದ ವ್ಯವಸ್ಥೆಗಳು ಇಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ ಎಂದು ರೂಪಕಲಾ ಬೇಸರ ವ್ಯಕ್ತಪಡಿಸಿದರು.
ಊಟ ಮಾಡುವ ಜಾಗ ,ಗ್ರಂಥಾಲಯ ಸರಿಯಾಗಿಲ್ಲ. ಕಟ್ಟಡಗಳಿಗೆ ದುರಸ್ತಿ ಮಾಡುತ್ತೇವೆ. ಕಿಟಕಿ, ಕಾಂಪೌಂಡ್ ಹಾಕುತ್ತೇವೆ ಎಂದು ಹೇಳುತ್ತಾರೆ. ಕಟ್ಟಡಗಳು ಯೋಗ್ಯವಾಗಿ ಇದ್ದೆ ಎಂದು ತಜ್ಞರ ಸಮಿತಿ ಒಂದು ವರದಿ ಸಹ ಕೊಟ್ಟಿಲ್ಲ. ಊಟ ಚನ್ನಾಗಿದೆಯಾ ಎಂದು ಪರಿಶೀಲನೆ ಮಾಡಲ್ಲ ಎಂದು ರೂಪಕಲಾ ದೂರಿದರು.
ಸರಕಾರಿ ಆಸ್ಪತ್ರೆಗಳ ಬಗ್ಗೆ ಚರ್ಚೆ ಮಾಡಿದಾಗ ಹೇಗೆ ಹಿಂಸೆ ಆಗುತ್ತೋ ಅದೇ ರೀತಿ ಹಾಸ್ಟೆಲ್ ಗಳನ್ನು ನೋಡಿದಾಗ ಅನಾಥ ಪ್ರಜ್ಞೆ ಕಾಡುತ್ತದೆ. ತಂದೆ ತಾಯಿ ಇಲ್ಲದ ಮಗುಗೆ ಏನು ಪರಿಸ್ಥಿತಿ ಇರುತ್ತೋ ಅದೇ ಪರಿಸ್ಥಿತಿ ಇದೆ. ಈ ವಿಚಾರದಲ್ಲಿ ಸುಧಾರಣೆ ತರಬೇಕು ಎಂದು ಅವರು ಸಲಹೆ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸುಧಾರಿಸಿವೆ. ಯೋಗ್ಯವಾದ ವಾತಾವರಣದಲ್ಲಿ ಮಕ್ಕಳು ಓದುತ್ತಿದ್ದಾರೆ. ಹಾಗಾಗಿ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಸತಿ ಶಾಲೆಗಳಿಗೆ ಜಾಗ ಖರೀದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.







