ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದ 1,400ಕ್ಕೂ ಅಧಿಕ ಗೃಹ ಬಳಕೆ ಸಿಲಿಂಡರ್ ವಶ: 25 ಎಫ್ಐಆರ್ ದಾಖಲು

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು : ರಾಜ್ಯದಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಕಂಡು ಬಂದಿದ್ದು, 10 ದಿನಗಳಿಂದ ರಾಜ್ಯಾದ್ಯಂತ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದ 1,448 ಗೃಹ ಬಳಕೆ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಹಾಗೆಯೇ 25 ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
ಸೋಮವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪ್ರಕಟನೆ ಹೊರಡಿಸಿದ್ದು, ಬಾಗಲಕೋಟೆ 64, ಬೆಂಗಳೂರು ನಗರ 507, ರಾಯಚೂರು 4, ಶಿವಮೊಗ್ಗ 7, ತುಮಕೂರು 37, ವಿಜಯಪುರ 16, ಯಾದಗಿರಿ 100, ಬಳ್ಳಾರಿ 1, ಕಲಬುರಗಿ 7, ಮೈಸೂರು 52, ಬೆಂಗಳೂರು ದಕ್ಷಿಣ 39, ಉತ್ತರ ಕನ್ನಡ 30 ಮತ್ತು ವಿಜಯಪುರ 16 ಸಿಲಿಂಡರ್ಗಳನ್ನು ವಶಕ್ಕೆ ಪಡೆಯಲಾಗಿದ್ದು, 25 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ 10 ದಿನಗಳಿಂದ ಇಲ್ಲಿಯವರೆಗೂ ಗೃಹ ಬಳಕೆಯ 30,51,045 ಸಿಲಿಂಡರ್ ಗಳನ್ನು ವಿತರಿಸಲಾಗಿದೆ. ಅಲ್ಲದೇ ವಾಣಿಜ್ಯ ಬಳಕೆಯ 67,641 ಸಿಲಿಂಡರ್ ಗಳನ್ನು ವಿತರಿಸಲಾಗಿದೆ. ಸುಮಾರು 40,083 ಆಟೋ ಎಲ್ಪಿಜಿ ಸಿಲಿಂಡರ್ ಗಳನ್ನು ಅಂದರೆ 761.655 ಮೆ.ಟನ್.ಗಳಷ್ಟು ಅನಿಲವನ್ನು ವಿತರಣೆಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಗೃಹ ಬಳಕೆ ಸಿಲಿಂಡರ್ ಸರಬರಾಜು ಸಹಜವಾಗಿ ನಿರ್ವಹಣೆಯಾಗುತ್ತಿದ್ದು, ವಾಣಿಜ್ಯ ಸಿಲಿಂಡರ್ ಗಳ ಮತ್ತು ಆಟೋ ಎಲ್ಪಿಜಿಗಳ ವಿತರಣೆಯಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದೆ.






