ರಾಜ್ಯದಲ್ಲಿ 2.94 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಬಿದ್ದಿವೆ, ಸಂಪುಟ ದರ್ಜೆ ಹುದ್ದೆಗಳು ‘ಸೂಪರ್ ಫಾಸ್ಟ್’ ಆಗಿ ಭರ್ತಿ ಆಗುತ್ತಿವೆ: ಎಚ್.ಡಿ. ಕುಮಾರಸ್ವಾಮಿ

ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ‘ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಬೀದಿಗೆ ಇಳಿದಿರುವುದನ್ನು ರಾಜ್ಯ ಸರಕಾರ ಲಘುವಾಗಿ ಪರಿಗಣಿಸಬಾರದು. ಸರಕಾರಿ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬದೇ ನಿರ್ಲಕ್ಷಿಸಿದ ಪರಿಣಾಮವೇ ಯುವಜನರು ಪ್ರತಿಭಟನೆ ದಾರಿ ತುಳಿಯಲು ಕಾರಣ. ಯುವಜನರಿಗೆ ನನ್ನ ಮನವಿ ಇಷ್ಟೇ, ನಿಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ, ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಯ ನೀಡಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ರಾಜ್ಯದಲ್ಲಿ 2.94 ಲಕ್ಷ ಸರಕಾರಿ ಹುದ್ದೆಗಳು ಖಾಲಿ ಬಿದ್ದಿವೆ. ಸಂಪುಟ ದರ್ಜೆ ಹುದ್ದೆಗಳು ಮಾತ್ರ ‘ಸೂಪರ್ ಫಾಸ್ಟ್’ ಆಗಿ ಭರ್ತಿ ಆಗುತ್ತಿವೆ. ಈ ಸರಕಾರದ ಆದ್ಯತೆ ಯಾವ ರೀತಿಯಲ್ಲಿದೆ ಎಂಬುದು ಅರ್ಥವಾಗುತ್ತದೆ. ದೇಶಪಾಂಡೆ ಅಧ್ಯಕ್ಷತೆಯ ಆಡಳಿತ ಸುಧಾರಣೆ ಆಯೋಗದ ವರದಿಯಂತೆ ರಾಜ್ಯದಲ್ಲಿ 7ಲಕ್ಷ ನಿರುದ್ಯೋಗಿಗಳಿದ್ದಾರೆ. ಇವರೆಲ್ಲರೂ ಸರಕಾರಿ ಹುದ್ದೆಗಳ ನಿರೀಕ್ಷೆಯಲ್ಲಿದ್ದು, ಖಾಲಿ ಹುದ್ದೆಗಳನ್ನು ಸರಕಾರ ಹಂತ-ಹಂತವಾಗಿ ಭರ್ತಿ ಮಾಡಬೇಕಿತ್ತು. ಕುರ್ಚಿ ತಿಕ್ಕಾಟದಲ್ಲಿ ಅಮೂಲ್ಯವಾದ 3ವರ್ಷಗಳನ್ನು ಪೋಲು ಮಾಡಿದೆ. ಯುವಜನರತ್ತ ಗಮನ ಹರಿಸಲು ಈ ಸರಕಾರಕ್ಕೆ ಸಮಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿರುದ್ಯೋಗ ಎನ್ನುವುದು ಸರಳ ಸಮಸ್ಯೆಯಲ್ಲ. ಅದು ಸದಾ ಕುದಿಯುವ ಜ್ವಾಲಾಮುಖಿ ಎಂಬುದನ್ನು ಸರಕಾರ ಮರೆಯಬಾರದು. ಈ ಹೊತ್ತಿಗೇ ಆಡಳಿಗಾರರು ಎಚ್ಚೆತ್ತು ಬಜೆಟ್ನಲ್ಲಿ ಪ್ರತ್ಯೇಕ ಹಣ ಇರಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕಿತ್ತು. ಅತಿಹೆಚ್ಚು ಹುದ್ದೆಗಳು ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗಳಲ್ಲಿ ಖಾಲಿ ಇವೆ. ಬೆಂಗಳೂರು ನಗರದ 18ಆಯಕಟ್ಟಿನ ಪೊಲೀಸ್ ಠಾಣೆಗಳಲ್ಲಿ ಇನ್ಸ್ಪೆಕ್ಟರ್ಗಳೇ ಇಲ್ಲ.
ವರ್ಗಾವಣೆ ದಂಧೆಯಲ್ಲಿ ಸರಕಾರ ಮುಳುಗಿದ್ದರ ಪರಿಣಾಮವಿದು. ಇದೆಲ್ಲವೂ ಆಡಳಿತದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಕೂಡಲೇ ಖಾಲಿ ಹುದ್ದೆಗಳ ಭರ್ತಿ ಮಾಡುವ ನಿಟ್ಟಿನಲ್ಲಿ ಸರಕಾರ ತುರ್ತು ಕ್ರಮ ವಹಿಸಬೇಕು. ವಿಧಾನಸೌಧದ 3ನೇ ಮಹಿಡಿಯಿಂದ ಕೆಳಗಿಳಿದು ಬಂದು ಯುವಜನರ ದನಿ ಆಲಿಸಬೇಕು. ಇಲ್ಲವಾದರೆ, ಇವರ ಆಕ್ರೋಶಕ್ಕೆ ಕಾಂಗ್ರೆಸ್ ಸರಕಾರ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
‘ನೇಮಕಾತಿ ಆರಂಭಿಸದ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಾಡಿನ ಯುವ ಸಮುದಾಯ ಸಿಡಿದೆದ್ದಿದೆ. ಧಾರವಾಡದಲ್ಲಿ ಆರಂಭಗೊಂಡಿರುವ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯ ಜ್ವಾಲೆ ನಿಷ್ಕ್ರೀಯಗೊಂಡಿರುವ ಕಾಂಗ್ರೆಸ್ ಸರಕಾರವನ್ನು ದಹಿಸುವುದರಲ್ಲಿ ಯಾವ ಅನುಮಾನವಿಲ್ಲ. ಭ್ರಷ್ಟ ಸಿಎಂ ಸಿದ್ದರಾಮಯ್ಯನವರೇ, ಯುವಕರ ಕಿಚ್ಚು ನಾಡಿನೆಲ್ಲೆಡೆ ಹರಡುವ ಮುನ್ನ ನೇಮಕಾತಿ ಆರಂಭಿಸಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಿ’
-ಆರ್.ಅಶೋಕ್, ಪ್ರತಿಪಕ್ಷ ನಾಯಕ







