ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ: ಡಿ.13ರಂದು ಪ್ರತಿಭಟನೆ

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ-2 ‘ಎ' ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರಕಾರ ಮೀನಾಮೇಷ ಎಣಿಸುತ್ತಿದ್ದು, ಸರಕಾರದ ವಿಳಂಬ ನೀತಿ ಖಂಡಿಸಿ ಡಿ.13ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪಂಚಮಸಾಲಿ ಗುರುಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮಿ ತಿಳಿಸಿದ್ದಾರೆ.
ರವಿವಾರ ಬಾಗಲಕೋಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರಕಾರ ಸಮುದಾಯಕ್ಕೆ 2 ‘ಡಿ' ಮೀಸಲಾತಿ ಘೋಷಣೆ ಮಾಡಿತ್ತು. ಆದರೆ ಅದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಜೊತೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಮಾಜದ ಮುಖಂಡರ ಸಭೆ ಕರೆದು ತೀರ್ಮಾನ ಮಾಡುತ್ತೇವೆಂದು ಮಾತು ಕೊಟ್ಟು ತಪ್ಪಿದ್ದಾರೆ ಎಂದು ದೂರಿದರು.
ರಾಜ್ಯ ಸರಕಾರವನ್ನು ಎಚ್ಚರಿಸಲು ಡಿ.13ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರವರ್ಗ-2 'ಎ' ಮೀಸಲಾತಿಗೆ ಆಗ್ರಹಿಸಿ ಈ ಹಿಂದೆ ವಿಧಾನಸೌಧದ ಮುಂದೆಯೇ ಹೋರಾಟ ಮಾಡಬೇಕು ಎಂದು ತೀರ್ಮಾನಿಸಿದ್ದೆವು. ಆದರೆ, ಸಿಎಂ ಭರವಸೆ ನೀಡಿದ ಕಾರಣಕ್ಕೆ ಹೋರಾಟ ಹಿಂಪಡೆಯಲಾಗಿತ್ತು ಎಂದು ಅವರು ಹೇಳಿದರು.
ಲಿಂಗಾಯತ ಪಂಚಮಸಾಲಿ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಪ್ರವರ್ಗ-2 ‘ಎ' ಮೀಸಲಾತಿ ಅತ್ಯಂತ ಅಗತ್ಯ. ಹೀಗಾಗಿ ಆಶ್ವಾಸನೆ ನೀಡಿ ಸಿಎಂ ಸಿದ್ದರಾಮಯ್ಯನವರು ಮಾತು ತಪ್ಪಿದ್ದು, ಅವರನ್ನು ಎಚ್ಚರಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ಸ್ಪಷ್ಟಣೆ ನೀಡಿದರು.







