ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 3 ಹುಲಿಗಳ ಸಾವು

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಅರಣ್ಯ ವಲಯದಲ್ಲಿ ಕ್ರಿಮಿನಾಶಕ ಸೇವಿಸಿ 5 ಹುಲಿಗಳು ಸಾವನ್ನಪ್ಪಿದ ದುರ್ಘಟನೆ ಮಾಸುವ ಮುನ್ನವೇ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಂದು ಹುಲಿ ಹಾಗೂ ಅದರ ಎರಡು ಮರಿಗಳು ಮೃತಪಟ್ಟಿವೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಹಿಮದಾಸ್ ಎಂಬ ಹುಲಿ ಹಾಗೂ ಅದರ ಎರಡು ಮರಿಗಳು ಸಾವನ್ನಪ್ಪಿರುವುದನ್ನು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜು.7ರಂದು ಹಿಮಾದಾಸ್ ಹುಲಿ ತ್ಯಾಜ್ಯ ತಿಂದ ಪರಿಣಾಮ ಅನಾರೋಗ್ಯಕ್ಕೆ ತುತ್ತಾಗಿತ್ತು. ಆನಂತರ ತಕ್ಷಣವೇ ಈ ಹುಲಿಮರಿಗಳನ್ನು ಸಹ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ದೇಹದೊಳಗೆ ವಿಷಪೂರಿತ ಕಸ ಸೇರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ.
ಜು.8ರಂದು ಒಂದು ಹುಲಿ ಜು.9ರಂದು ಮತ್ತೊಂದು ಮರಿ ಹಾಗೂ ಶನಿವಾರ ಮತ್ತೊಂದು ಮರಿ ಸಾವನ್ನಪ್ಪಿವೆ. ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಿರುವ ಪಶು ವೈದ್ಯಕೀಯ ತಂಡವು ಸಾವಿಗೆ ಕಾರಣ ಏನೆಂಬುದನ್ನು ಪತ್ತೆ ಮಾಡಿದ್ದಾರೆ.
ಒಂದು ಗರ್ಭಕಂಠಕ ಗಾಯದಿಂದ ಸಾವನ್ನಪ್ಪಿದರೆ, ಮತ್ತೊಂದು ಮರಿ ಮೆದುಳಿನ ಅಂಗಾಂಶ ಊನಗೊಂಡು ಸಾವನ್ನಪ್ಪಿದೆ. ಇನ್ನೊಂದು ಮರಿ ತಾಯಿ ತಲೆಯನ್ನು ಕಚ್ಚಿದ ಪರಿಣಾಮ ಮೆನೆಂಜಿಯಲ್ ಹೆಮಟೋಮದಿಂದ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ.
ಈ ಉದ್ಯಾನವನದಲ್ಲಿರುವ ಇತರ ಹುಲಿ ಮರಿಗಳನ್ನು ರಕ್ಷಣೆ ಮಾಡುವಲ್ಲಿ ಪ್ರಾಣಿಪಾಲಕರು ಮತ್ತು ವೈದ್ಯರ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ ಎಂದು ಹಿರಿಯ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.







