ಬೆಂಗಳೂರಿನಲ್ಲಿ ಶೇ.35ರಷ್ಟು ಜನ ಕುಡಿಯುವ ನೀರಿನ ಬಿಲ್ ಕಟ್ಟುತ್ತಿಲ್ಲ : ಡಿ.ಕೆ.ಶಿವಕುಮಾರ್

ಬೆಂಗಳೂರು : ನಗರದಲ್ಲಿ ಶೇ.35ರಷ್ಟು ಜನ ಕುಡಿಯುವ ನೀರಿನ ಬಿಲ್ ಕಟ್ಟುತ್ತಿಲ್ಲ. ಆದರೂ ಬೆಂಗಳೂರು ಜಲಮಂಡಳಿಯು ನೀರು ಪೂರೈಕೆ ಮಾಡುತ್ತಿದ್ದು, ಜಿಲ್ಲೆಯ ಎರಡು ಕೋಟಿಯಷ್ಟು ನಾಗರೀಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬುಧವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಗಿನ್ನಿಸ್ ವಿಶ್ವ ದಾಖಲೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರಕ್ಕೆ ನೀರು ಒದಗಿಸಲು ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ನೇತೃತ್ವದಲ್ಲಿ ಹೊಸ ಆವಿಷ್ಕಾರದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಯೋಜಿತ ನಗರವಲ್ಲ. ಇಲ್ಲಿನ ಜನಸಂಖ್ಯೆ ಬಹಳ ದೊಡ್ಡದಾಗಿ ಬೆಳೆದಿದೆ. ಹೀಗಾಗಿ ಇಲ್ಲಿ ಗ್ರೇಟರ್ ಬೆಂಗಳೂರನ್ನು ಘೋಷಣೆ ಮಾಡಿ, ಮತ್ತಷ್ಟು ಪ್ರದೇಶವನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇದರ ವ್ಯಾಪ್ತಿಯಲ್ಲಿ ಎಷ್ಟು ಪಾಲಿಕೆ ರಚಿಸಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ನಗರದಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ನಗರದ ಹೊರಭಾಗ ಆನೇಕಲ್ ಹಾಗೂ ಇತರೆ ಭಾಗದಲ್ಲಿ 50 ಲಕ್ಷ ಜನಸಂಖ್ಯೆ ಇದೆ. ನಗರಕ್ಕೆ ಹೊಸದಾಗಿ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದೇವೆ. 10 ವರ್ಷಗಳಿಂದ ನೀರಿನ ದರ ಏರಿಕೆ ಮಾಡಿರಲಿಲ್ಲ. ಇದರಿಂದ ಮಂಡಳಿಯು ವಾರ್ಷಿಕವಾಗಿ 500 ಕೋಟಿ ರೂ.ಗಳವರೆಗೆ ನಷ್ಟ ಅನುಭವಿಸುವಂತಾಗಿದೆ. ನಷ್ಟವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಈಗ ಕೆಆರ್‌ಎಸ್ ಬಳಿ ಕಾವೇರಿ ಆರತಿ ಮಾಡಲು ಮುಂದಾಗಿದ್ದೇವೆ. ಬೆಂಗಳೂರು ಜಲಮಂಡಳಿಯ ಅಧ್ಯಕ್ಷರ ನೇತೃತ್ವದಲ್ಲೇ ಇದಕ್ಕೆ ಸಮಿತಿ ರಚಿಸಲಾಗಿದ್ದು, ಉತ್ತಮ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಇದರಿಂದ ಆ ಭಾಗದಲ್ಲಿ ಒಂದೂವರೆ ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಈ ವಿಚಾರವಾಗಿ ಮಂಡ್ಯ ಜಿಲ್ಲೆಯ ರೈತ ಸಂಘದವರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಸ್ವಪ್ನಿಲ್ ದಂಗಾರಿಕರ್ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ’ ವಿತರಿಸಿದರು. ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್, ಎಫ್‍ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್, ಜಲಮಂಡಳಿಯ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







