4 ಸಾವಿರ ಕೋಟಿ ರೂ. ಬೆಂಬಲದ ಹೊಸ ಜವಳಿ ಮತ್ತು ಉಡುಪು ನೀತಿ 4.0 ಅಧಿಕೃತ ಜಾರಿ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಶೇಷ ಆಸಕ್ತಿಯೊಂದಿಗೆ ರೂಪಿಸಲಾದ ಕರ್ನಾಟಕದ ನೂತನ ಜವಳಿ ಮತ್ತು ಉಡುಪು ನೀತಿ (4.0) 2026–31ಕ್ಕೆ ರಾಜ್ಯ ಸರಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಜವಳಿ ಇಲಾಖೆಯ ಇತಿಹಾಸದಲ್ಲೆ ಮೊದಲ ಬಾರಿಗೆ ನೀತಿಯ ಅನುಷ್ಠಾನಕ್ಕಾಗಿ 4 ಸಾವಿರ ಕೋಟಿ ರೂ. ಮೊತ್ತದ ಹಣಕಾಸು ಬೆಂಬಲಕ್ಕೆ ಅನುಮೋದನೆ ನೀಡಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ 20 ಸಾವಿರ ಕೋಟಿ ರೂ.ಹೂಡಿಕೆ ಆಕರ್ಷಿಸುವುದು ಹಾಗೂ 5 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
ಮುಖ್ಯಮಂತ್ರಿಯ ಆದ್ಯತೆಯಂತೆ ಬೆಂಗಳೂರಿನಾಚೆಗೂ ಜವಳಿ ಮತ್ತು ಉಡುಪು ಕೈಗಾರಿಕೆಗಳನ್ನು ವಿಸ್ತರಿಸಿ, ಪ್ರಾದೇಶಿಕ ಸಮತೋಲನದೊಂದಿಗೆ ಕೈಗಾರಿಕಾ ಬೆಳವಣಿಗೆ ಸಾಧಿಸಲು ರಾಜ್ಯದ 34 ತಾಲೂಕುಗಳನ್ನು ವಿಶೇಷ ಆದ್ಯತೆಯ ತಾಲೂಕುಗಳಾಗಿ ಗುರುತಿಸಲಾಗಿದೆ. ಈ ತಾಲೂಕುಗಳಲ್ಲಿ ಸ್ಥಾಪನೆಯಾಗುವ ಅರ್ಹ ಹೊಸ ಜವಳಿ ಮತ್ತು ಉಡುಪು ಘಟಕಗಳಿಗೆ ನೀತಿಯಡಿ ಸಾಮಾನ್ಯ ಸೌಲಭ್ಯಗಳ ಜೊತೆಗೆ ಹೆಚ್ಚುವರಿ ಪ್ರೋತ್ಸಾಹಧನ ಹಾಗೂ ರಿಯಾಯಿತಿಗಳು ಲಭ್ಯವಾಗಲಿವೆ.
ಮೊದಲ ಬಾರಿಗೆ ರೇಷ್ಮೆ ನೂಲು ಉತ್ಪಾದನೆಗೂ ನೀತಿಯ ಬೆಂಬಲ:
ನೂತನ ನೀತಿಯ ಮತ್ತೊಂದು ಪ್ರಮುಖ ವಿಶೇಷತೆಯೆಂದರೆ, ಇಲಾಖೆಯ ಇತಿಹಾಸದಲ್ಲೆ ಮೊದಲ ಬಾರಿಗೆ ರೇಷ್ಮೆ ನೂಲು ಉತ್ಪಾದನೆಗೆ ಸಂಬಂಧಿಸಿದ ರೇಷ್ಮೆ ರೀಲಿಂಗ್ ಮತ್ತು ಸ್ಪಿನ್ನಿಂಗ್ ಚಟುವಟಿಕೆಗಳನ್ನು ಜವಳಿ ನೀತಿಯ ವ್ಯಾಪ್ತಿಗೆ ತರಲಾಗಿದೆ. ಇದರಿಂದ ರಾಜ್ಯದ ರೇಷ್ಮೆ ಉತ್ಪಾದನಾ ಸರಪಳಿಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸಂಬಂಧಿತ ಉದ್ಯಮಗಳ ಅಭಿವೃದ್ಧಿಗೆ ಹೊಸ ಅವಕಾಶ ಕಲ್ಪಿಸಲಾಗಿದೆ.
ಕಲಬುರಗಿ ಪಿಎಂ-ಮಿತ್ರ ಪಾರ್ಕ್ಗೆ ವಿಶೇಷ ಪ್ರೋತ್ಸಾಹ: ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಲಬುರಗಿಯ ಪ್ರಧಾನಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ ರೀಜನ್ ಆ್ಯಂಡ್ ಅಪ್ಯಾರಲ್(ಪಿಎಂ-ಮಿತ್ರ) ಪಾರ್ಕ್ನಲ್ಲಿ ಸ್ಥಾಪನೆಯಾಗುವ ಅರ್ಹ ಘಟಕಗಳಿಗೆ ವಿಶೇಷ ಪ್ರೋತ್ಸಾಹಧನ ಮತ್ತು ರಿಯಾಯಿತಿಗಳನ್ನು ನೀತಿಯಲ್ಲಿ ಕಲ್ಪಿಸಲಾಗಿದೆ.
ಜವಳಿ ಉತ್ಪಾದನೆ, ತಾಂತ್ರಿಕ ಜವಳಿ, ಕೈಮಗ್ಗ, ರೇಷ್ಮೆ, ಕೌಶಲ್ಯಾಭಿವೃದ್ಧಿ, ರಫ್ತು ಹಾಗೂ ಸುಸ್ಥಿರ ಉತ್ಪಾದನೆಗೆ ಆದ್ಯತೆ ನೀಡುವ ಮೂಲಕ ಕರ್ನಾಟಕವನ್ನು ಜಾಗತಿಕ ಮಟ್ಟದ ಜವಳಿ ಮತ್ತು ಉಡುಪು ಉತ್ಪಾದನಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ಹೊಸ ನೀತಿಯ ಉದ್ದೇಶವಾಗಿದೆ.
ಅಧಿಕೃತ ಸರಕಾರಿ ಆದೇಶ ಬಿಡುಗಡೆ: ನೂತನ ಜವಳಿ ಮತ್ತು ಉಡುಪು ನೀತಿ (4.0) 2026–31ಕ್ಕೆ ಸಂಬಂಧಿಸಿದ ಸರಕಾರಿ ಆದೇಶವನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಬುಧವಾರ 30ರಂದು ಅಧಿಕೃತವಾಗಿ ಹೊರಡಿಸಿದ್ದಾರೆ.
ಹೊಸ ನೀತಿ ಮತ್ತು ಅದರ ಪ್ರೋತ್ಸಾಹಧನ ಹಾಗೂ ರಿಯಾಯಿತಿ ಪ್ಯಾಕೇಜ್ ಸೆ.30ರಿಂದ ಜಾರಿಗೆ ಬರಲಿದ್ದು, ಐದು ವರ್ಷಗಳ ಅವಧಿಗೆ ಅಥವಾ ಮುಂದಿನ ಹೊಸ ಜವಳಿ ನೀತಿ ಘೋಷಣೆಯಾಗುವವರೆಗೆ ಅನ್ವಯವಾಗಲಿದೆ.






