ಸಂಸತ್ತಿನಲ್ಲಿ ಸತ್ಯ ಎದುರಿಸಲು ‘56 ಇಂಚಿನ ಎದೆ’ ಸಾಲದು: ಬಿ.ಕೆ. ಹರಿಪ್ರಸಾದ್

ಬೆಂಗಳೂರು : ಸಂಸತ್ತಿನಲ್ಲಿ ಸತ್ಯವನ್ನು ಎದುರಿಸಲು ಎದೆಗಾರಿಕೆ ಬೇಕೆ ಹೊರತು, ಸುಳ್ಳಿನ ಪರದೆಯ ಹಿಂದೆ ಬಚ್ಚಿಟ್ಟುಕೊಳ್ಳುವ ಹೇಡಿತನದ "56" ಇಂಚಿನ ಎದೆಯಲ್ಲ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಕುಟುಕಿದ್ದಾರೆ.
"ಚೀನಾ ದೇಶವನ್ನು ಕೆಂಪು ಕಣ್ಣಿನಿಂದ ನೋಡಬೇಕು" ಎಂದು ಪುಂಖಾನುಪುಂಖ ಭಾಷಣ ಬೀಗುತ್ತಿದ್ದ ಆಗಿನ ಗುಜರಾತಿನ ಮುಖ್ಯಮಂತ್ರಿ, ಈಗಿನ ಪ್ರಧಾನಿ ನರೇಂದ್ರ ಮೋದಿಯ ಉತ್ತರನ ಪೌರುಷ ಟೆಲಿಪ್ರಾಂಪ್ಟರ್ ಎದುರು ಮಾತ್ರವೇ ಹೊರತು ಸಂಸತ್ತಿನಲ್ಲಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಚೀನಾ ದೇಶದ ಅತಿಕ್ರಮಣ, ದೇಶದ ಭದ್ರತೆ ಹಾಗೂ ಸರ್ಕಾರದ ವೈಫಲ್ಯಗಳನ್ನು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರಾಗಿದ್ದ ಜನರಲ್ ಎಂ.ಎಂ.ನರವಣೆ ಅವರ ಪುಸ್ತಕದಲ್ಲಿನ ಗಂಭೀರ ಅಂಶಗಳ ಕುರಿತು ಚರ್ಚೆಗೆ ಅನುವು ಮಾಡಿಕೊಡದೆ ಇರುವುದು ದೇಶದ ಎದುರು ಕೇಂದ್ರ ಸರ್ಕಾರದ ಹೇಡಿತನ ಪ್ರದರ್ಶನವಾಗಿದೆ ಎಂದಿದ್ದಾರೆ.
ಒಬ್ಬ ಮಾಜಿ ಸೇನಾ ಮುಖ್ಯಸ್ಥರ ಅನುಭವಾಧಾರಿತ ಅಭಿಪ್ರಾಯಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಗೆ ಧೈರ್ಯವಿಲ್ಲ ಎಂದರೆ ದೇಶದ ಎದುರು ತಮ್ಮ ಮುಖವಾಡಗಳು ಕಳಚಿ ಬೀಳುವ ಭಯವೇ? ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರು ಎತ್ತಿದ ಪ್ರಶ್ನೆಗಳು ಸೈನ್ಯದ ವಿರುದ್ಧವಲ್ಲ; ಅವು ಸರ್ಕಾರದ ನಿರ್ಧಾರಗಳು ಮತ್ತು ವೈಫಲ್ಯಗಳ ಅನಾವರಣ. ಆದರೆ ಮೋದಿ ಸರ್ಕಾರ ಲೋಕಸಭೆಯ ತಾಂತ್ರಿಕ ನಿಯಮಾವಳಿಗಳ ಹಿಂದೆ ಅಡಗಿಕೊಂಡು, ಉತ್ತರಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಹೇಡಿತನದ ಪರಮಾವಧಿ ಎಂದು ಹರಿಹಾಯ್ದಿದ್ದಾರೆ.
ಪ್ರಶ್ನೆ ಕೇಳುವುದೇ ಅಪರಾಧವಾದರೆ, ಸಂಸತ್ತಿನ ಅಸ್ತಿತ್ವವೇ ಪ್ರಶ್ನಾರ್ಹವಾಗುತ್ತದೆ. ಪ್ರತಿಪಕ್ಷ ನಾಯಕರ ಧ್ವನಿಯನ್ನು ಅಡಗಿಸುವುದು, ವಿಪಕ್ಷಗಳ ನಾಯಕರುಗಳು ಮಾತಾಡುವಾಗ ಮೈಕ್ ಸ್ಥಗಿತಗೊಳಿಸುವುದು, ಲೋಕಸಭೆಯ ಸ್ಪೀಕರ್ ಏಕಪಕ್ಷೀಯವಾಗಿ ನಡೆದುಕೊಳ್ಳುವುದು, ಲೋಕಸಭೆಯ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅತ್ಯಂತ ಮಾರಕ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಸತ್ಯವನ್ನು ಎದುರಿಸಲು ಎದೆಗಾರಿಕೆ ಬೇಕೆ ಹೊರತು, ಸುಳ್ಳಿನ ಪರದೆಯ ಹಿಂದೆ ಬಚ್ಚಿಟ್ಟುಕೊಳ್ಳುವ ಹೇಡಿತನದ "56" ಇಂಚಿನ ಎದೆಯಲ್ಲ.
— Hariprasad.B.K. (@HariprasadBK2) February 3, 2026
"ಚೀನಾ ದೇಶವನ್ನು ಕೆಂಪು ಕಣ್ಣಿನಿಂದ ನೋಡಬೇಕು" ಎಂದು ಪುಂಖಾನುಪುಂಖ ಭಾಷಣ ಬೀಗುತ್ತಿದ್ದ ಆಗಿನ ಗುಜರಾತಿನ ಮುಖ್ಯಮಂತ್ರಿ, ಈಗಿನ ಪ್ರಧಾನಿ @narendramodiಯದ್ದು ಉತ್ತರನ ಪೌರುಷ… pic.twitter.com/O6qBaPB465







