ತಯಾರಿಕಾ ವಲಯದ ಬಲವರ್ಧನೆಗೆ 6 ಟಾಸ್ಕ್ ಫೋರ್ಸ್: ಸಚಿವ ಎಂ.ಬಿ. ಪಾಟೀಲ್
6 ವಲಯಗಳ 80 ಸಿಇಒಗಳ ಜತೆ ದಿನವಿಡೀ ನಡೆದ `ಉತ್ಪಾದನಾ ಮಂಥನ’

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ತಯಾರಿಕಾ ವಲಯದಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸರಕಾರವು 6 ಪ್ರಮುಖ ವಲಯಗಳ ಪ್ರಗತಿಗೆ ಪ್ರತ್ಯೇಕ ಟಾಸ್ಕ್ ಫೋರ್ಸ್ ಗಳನ್ನು ರಚಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಮಂಗಳವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ತಯಾರಿಕಾ ವಲಯದ ಬಲವರ್ಧನೆಗೆ ಆಗಬೇಕಾದ ಕಾಯಕಲ್ಪ ಕುರಿತು 60 ಕಂಪನಿಗಳ 80 ಮುಖ್ಯಸ್ಥರು ಮತ್ತು ಸಿಇಒಗಳೊಂದಿಗೆ ನಡೆದ `ಉತ್ಪಾದನಾ ಮಂಥನ’ ಸಮಾವೇಶದಲ್ಲಿ ಮಾತನಾಡಿದ ಅವರು, ಇದಕ್ಕೆ ಬೇಕಾದ ಸಮಗ್ರ ಟೌನ್‍ಶಿಪ್ ಗಳ ಅಭಿವೃದ್ಧಿಯಿಂದ ಹಿಡಿದು ಕೈಗಾರಿಕಾ ಪ್ರದೇಶಗಳಿಂದ ಮಂಗಳೂರು ಮತ್ತು ಚೆನ್ನೈ ಬಂದರುಗಳಿಗೆ ಬೇಕಾದ ಸಮರ್ಪಕ ಸಂಪರ್ಕದವರೆಗೆ ಪ್ರತಿಯೊಂದು ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್, ಕ್ಯಾಪಿಟಲ್ ಗೂಡ್ಸ್ ಮತ್ತು ರೋಬೋಟಿಕ್ಸ್, ಆಟೋ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್, ಟೆಕ್ನಿಕಲ್ ಮತ್ತು ಎಂಎಂಎಫ್ ಬೇಸ್ಡ್ ಟೆಕ್ಸ್ ಟೈಲ್ಸ್ ಹಾಗೂ ಪಾದರಕ್ಷೆ, ಗೊಂಬೆ ಮತ್ತು ಎಫ್‍ಎಂಸಿಜಿ ಉತ್ಪನ್ನಗಳನ್ನು ಒಳಗೊಂಡಿರುವ ಗ್ರಾಹಕ ಉತ್ಪನ್ನಗಳ ವಲಯಗಳ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು. ಇದಕ್ಕೆ ಪೂರಕವಾಗಿ ಒಂದೊಂದು ವಲಯಕ್ಕೂ ಸಂಬಂಧಿಸಿದಂತೆ ಏರ್ಪಡಿಸಿದ್ದ ವಿಚಾರ ಸಂಕಿರಣ ಮತ್ತು ಪ್ರಾತ್ಯಕ್ಷಿಕೆ ಪ್ರದರ್ಶನಗಳಲ್ಲಿ ಸಚಿವರು ಇಡೀ ದಿನ ಇದ್ದು, ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ರಾಜ್ಯದ ಕೈಗಾರಿಕಾ ವಲಯವು ತಯಾರಿಕಾ ವಲಯಕ್ಕೆ ಹೊರಳಿಕೊಳ್ಳಬೇಕಾಗಿದೆ. ಇದಕ್ಕಾಗಿ ರಫ್ತು ಕೇಂದ್ರಿತವಾಗಿರುವಂಥ `ಫ್ರೀ ಟ್ರೇಡ್ ವೇರ್-ಹೌಸಿಂಗ್ ಝೋನ್’ಗಳು, ರಫ್ತನ್ನೇ ಮುಖ್ಯವಾಗಿ ಹೊಂದಿರುವ ಕೈಗಾರಿಕಾ ಪಾರ್ಕುಗಳು, ಬಂದರುಗಳಿಗೆ ತ್ವರಿತ ಸಂಪರ್ಕ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಲಾಗುವುದು ಎಂದು ಹೇಳಿದರು.
ಉದ್ಯಮಿಗಳು ಮಾಡಿರುವ ಶಿಫಾರಸುಗಳನ್ನು ಸರಕಾರದ ಕ್ರಿಯಾ ಯೋಜನೆಯ ಭಾಗವನ್ನಾಗಿ ಮಾಡಿಕೊಳ್ಳಲಾಗುವುದು. ಜೊತೆಗೆ, ಆರೂ ವಲಯಗಳಲ್ಲಿ ಪ್ರಗತಿ ಸಾಧಿಸಲು ಟಾಸ್ಕ್-ಫೋರ್ಸ್ ಗಳನ್ನು ರಚಿಸಲಾಗುವುದು. ಇದಕ್ಕಾಗಿ 2030ರ ಹೊತ್ತಿಗೆ 7.5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಜತೆಗೆ, 20 ಲಕ್ಷ ಉದ್ಯೋಗ ಸೃಷ್ಟಿಸುವತ್ತ ದಾಪುಗಾಲು ಇಡಬೇಕಾಗಿದೆ. ಮೂರು ತಿಂಗಳ ಬಳಿಕ ಮತ್ತೊಮ್ಮೆ ಸಾಧಕಬಾಧಕಗಳನ್ನು ಚರ್ಚಿಸಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಉದ್ಯಮಿಗಳು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ ಉತ್ಪಾದನೆಗೆ ಅನುಕೂಲವಾಗುವಂತೆ ಐಚ್ಛಿಕ ಕೋರ್ಸ್ ಆರಂಭಿಸಬೇಕು, ಸುಗಮ ವಹಿವಾಟಿಗೆ ಕಸ್ಟಮ್ಸ್ ವ್ಯವಸ್ಥೆ ಸುಲಭವಾಗಬೇಕು, ಪ್ಲಗ್ ಅಂಡ್ ಪ್ಲೇ ಮಾದರಿಯಲ್ಲಿ ಕೈಗಾರಿಕಾ ಟೌನ್ಶಿಪ್ ಗಳು ನಿರ್ಮಾಣವಾಗಬೇಕು, ಆಧುನಿಕ ತಯಾರಿಕಾ ಸಂಸ್ಥೆ ಬರಬೇಕು, ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ರಾಜ್ಯವು ನಿರ್ದಿಷ್ಟ ಟ್ರೇಡ್ ಡೆಸ್ಕ್‍ಪ್ರಾರಂಭಿಸಬೇಕು, ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ಸರಳವಾಗಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ. ಸರಕಾರವು ಇವೆಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ, ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.
ವೈಮಾನಿಕ ಕ್ಷೇತ್ರದಲ್ಲಿ ಉತ್ಪಾದಿಸುವಂತಹ ಗುಣಮಟ್ಟದ ಸ್ಟೀಲ್ ಅಲಾಯ್ ಮತ್ತು ಕಾಂಪೊಸಿಟ್ ಮೆಟೀರಿಯಲ್ ಗಳಿಗೆ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಬ್ಯಾಟರಿ ಮತ್ತು ಇತರ ಬಿಡಿಭಾಗಗಳನ್ನು ತಯಾರಿಸುವ ಕೈಗಾರಿಕಾ ಕ್ಲಸ್ಟರುಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ವಿದ್ಯುತ್-ಚಾಲಿತ ವಾಹನ ತಯಾರಿಕೆ ಕ್ಷೇತ್ರಕ್ಕೆ ಬಲ ತುಂಬಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು.
ಅಲ್ಲದೆ, ಗ್ರೀನ್ ಹೈಡ್ರೋಜನ್, ಮೆಡ್-ಟೆಕ್, ವೈಮಾಂತರಿಕ್ಷ ಎಂಆರ್ ಒ, ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ಸ್ಪೇಸ್-ಟೆಕ್ ಕ್ಷೇತ್ರಗಳಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿರುವಂತೆ ನೋಡಿಕೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ್ ನುಡಿದರು.
ಉತ್ಪಾದನಾ ಮಂಥನದಲ್ಲಿ ಆ್ಯಕ್ಸೆಲ್ ಕಂಪನಿಯ ಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್, ಏಕಸ್ ಕಂಪನಿಯ ಮುಖ್ಯಸ್ಥ ಅರವಿಂದ್ ಮೆಳ್ಳಿಗೇರಿ, ಡೆಲ್ಟಾ ಎಲೆಕ್ಟ್ರಾನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್, ಅಪ್ಲೈಡ್ ಮೆಟೀರಿಯಲ್ಸ್ ಮುಖ್ಯಸ್ಥ ಅವಿನಾಶ ಅವುಲಾ, ಕ್ರೋನ್ಸ್ ವ್ಯವಸ್ಥಾಪಕ ನಿರ್ದೇಶಕ ಹರೀಶ್ ಹನಗೂಡು, ವಿಂಗ್ಸ್ ಆಗ್ರೋ ಸಿಇಒ ಹಿರೇನ್ ಸೋಧಾ, ಶಾಹಿ ಎಕ್ಸ್‍ಪೋಟ್ರ್ಸ್ ಮುಖ್ಯಸ್ಥ ಪಿ.ಬಿ.ಆನಂದ್, ನಾರ್ ಬ್ರೆಮ್ಸ್ ಸಿಟಿಒ ಶ್ರೀಕಿರಣ್ ಕೋಸನಂ ಮತ್ತು ನ್ಯೂಸ್ಪೇಸ್ ಕಂಪನಿಯ ಸಹ ಸಂಸ್ಥಾಪಕ ದಿಲೀಪ್ ಛಾಬ್ರಿಯಾ ಮುಂತಾದವರು ಪಾಲ್ಗೊಂಡಿದ್ದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವುಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.