7 ಮಂಡಳಿಗಳನ್ನು ಮುಚ್ಚುವಂತೆ ಸರಕಾರಕ್ಕೆ ಸುಧಾರಣಾ ಆಯೋಗ ಶಿಫಾರಸು

ಬೆಂಗಳೂರು, ಅ.16 : ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಇಲ್ಲದ 7 ಮಂಡಳಿಗಳನ್ನು ಮುಚ್ಚಬೇಕು. ಜತೆಗೆ 9 ನಿಗಮಗಳನ್ನು ವಿಲೀನಗೊಳಿಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 9ನೆ ವರದಿಯನ್ನು ಹಸ್ತಾಂತರಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ಪ್ರಮುಖ ವಿಷಯಗಳನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಜತೆಗೆ, 9ನೆ ವರದಿಯಲ್ಲಿ ಒಟ್ಟು 449 ಹೊಸ ಶಿಫಾರಸುಗಳನ್ನು ಮಾಡಲಾಗಿದೆ ಎಂದರು.
ಜನರ ಹಣ ಇದು. ಆ ಹಣದ ಉಪಯೋಗ ಜನರಿಗೆ ಆಗಬೇಕು. ಇವತ್ತಿನ ಕಾಲದಲ್ಲಿ ಅವಶ್ಯಕತೆ ಇಲ್ಲದ ಮಂಡಳಿಗಳನ್ನು ಮುಚ್ಚಲು ಹೇಳಿದ್ದು, ಈ ವರದಿಯಲ್ಲಿ ಅತ್ಯಂತ ಪ್ರಮುಖವಾಗಿ, 7 ಮಂಡಳಿ ಮತ್ತು 9 ನಿಗಮಗಳನ್ನು ವಿಲೀನಗೊಳಿಸಲು ಶಿಫಾರಸು ಮಾಡಲಾಗಿದೆ. ಮುಚ್ಚಲು ಶಿಫಾರಸು ಮಾಡಿರುವ ಮಂಡಳಿಗಳಲ್ಲಿ ಕೆಲಸವೇ ಇಲ್ಲ ಹಾಗೂ ಹಣಕಾಸಿನ ನೆರವು ಇಲ್ಲದಿರುವುದೇ ಕಾರಣವಾಗಿದೆ ಎಂದು ಅವರು ಉಲ್ಲೇಖಿಸಿದರು.
ಉಳಿದ ಮಂಡಳಿ ಮತ್ತು ನಿಗಮಗಳ ಅಭಿವೃದ್ಧಿ, ಸುಧಾರಣೆ ಕುರಿತು 379 ಶಿಫಾರಸು ಮಾಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಗಳ ಸುಧಾರಣೆಗಾಗಿ 15 ಶಿಫಾರಸು ನೀಡಲಾಗಿದೆ. ಸಾಮಾನ್ಯ ಆಡಳಿತಾತ್ಮಕ ಮತ್ತು ಇ-ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ 55 ಶಿಫಾರಸುಗಳನ್ನು ಮಾಡಲಾಗಿದೆ ಎಂದ ಅವರು, ನನ್ನ ಜವಾಬ್ದಾರಿ ನಾನು ಮಾಡಿದ್ದೇನೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರದಿಯನ್ನು ಅಂಗೀಕಾರ ಮಾಡುವುದಾಗಿ ಹೇಳಿದ್ದಾರೆ ಎಂದರು.
ಬಂದ್ ಮಾಡಲು ಶಿಫಾರಸು ನಿಗಮ:
*ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ
*ಕರ್ನಾಟಕ ರಾಜ್ಯ ಸಂಯಮ ಮಂಡಳಿ
*ಕರ್ನಾಟಕ ಸಹಕಾರಿ ಕೋಳಿ ಸಾಕಾಣಿಕೆ ಒಕ್ಕೂಟ
*ಕರ್ನಾಟಕ ರಾಜ್ಯ ಅಗ್ರೋ-ಕಾರ್ನ್ ಪ್ರಾಡಕ್ಟ್ ಲಿಮಿಟೆಡ್
*ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್
ಯಾವ ನಿಗಮ ವೀಲಿನ?
*ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೋಂದಿಗೆ ವೀಲಿನ)
*ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ ನಿಯಮಿತ (ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್ ವಿಲೀನ ಮಾಡಬೇಕು)
*ಆಹಾರ ಕರ್ನಾಟಕ ಲಿಮಿಟೆಡ್ (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ, ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತದಲ್ಲಿ ವಿಲೀನ)
*ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಂಪೆನಿ ಲಿಮಿಟೆಡ್ (ಬಿ-ರೈಡ್) (ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪೆನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್)
*ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ (ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ವಿಲೀನ)
*ಮೈಸೂರು ಕ್ರೋಮ್ ಟ್ಯಾನಿಂಗ್ ಕಂಪೆನಿ ಲಿಮಿಟೆಡ್ (ಮೈಸೂರು ಸೇಲ್ಸ್ ಇಂಟನ್ರ್ಯಾಷನಲ್ ಲಿಮಿಟೆಡ್‍ನಲ್ಲಿ ವಿಲೀನ)
*ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ (ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದಲ್ಲಿ ವಿಲೀನ)
* ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (ಜಿಕೆವಿಕೆ)
*ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಸಂಬಂಧಿಸಿದ ನೀರಾವರಿ ನಿಗಮಗಳು)
.................
...................







