ಬೆಂಗಳೂರು ಅಭಿವೃದ್ಧಿಗೆ 7 ಸಾವಿರ ಕೋಟಿ ರೂ. ಭರಪೂರ ಘೋಷಣೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : 2025-26ನೇ ಸಾಲಿನಲ್ಲಿ ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರಕಾರ ನೀಡುತ್ತಿದ್ದ 3,000 ಕೋಟಿ ರೂ.ಅನುದಾನವನ್ನು 7 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿಯೂ ಈ ಅನುದಾನವನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ನಡೆದ ಬಜೆಟ್ ಮಂಡಿಸಿದ ಅವರು, ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ 1,255 ಕೋಟಿ ರೂ.ಗಳ ಮೊತ್ತದ ವಾರ್ಡ್ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ. 1,700 ಕೋಟಿ ರೂ.ಗಳ ಮೊತ್ತದಲ್ಲಿ 158 ಕಿ.ಮೀ. ಉದ್ದದ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
1,936 ಕೋಟಿ ರೂ.ಗಳ ಮೊತ್ತದ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿ. ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸುವ 450 ಕೋಟಿ ರೂ.ಗಳ ಯೋಜನೆ. 273 ಕೋಟಿ ರೂ. ಅಂದಾಜು ಮೊತ್ತದಲ್ಲಿ ರಾಜಕಾಲುವೆಗಳ ಮೇಲ್ದರ್ಜೆಗೇರಿಸುವುದು ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗಳು ನಡೆಸಲಾಗುವುದು ಎಂದು ಹೇಳಿದರು.
ರಸ್ತೆಗಳ ದೀರ್ಘ ಕಾಲದ ಬಾಳಿಕೆಗಾಗಿ ಮುಂದಿನ ಮೂರು ವರ್ಷಗಳಲ್ಲಿ 450 ಕಿ.ಮೀಗೂ ಹೆಚ್ಚು ಉದ್ದದ ರಸ್ತೆಗಳನ್ನು 3,000 ಕೋಟಿ ರೂ.ಗಳ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಲಾಗುವುದು. ಬೆಂಗಳೂರು ನಗರ ಪಾಲಿಕೆಗಳ ಸ್ವಂತ ಸಂಪನ್ಮೂಲದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 175 ಜಂಕ್ಷನ್ಗಳ ಸೌಂದರ್ಯೀಕರಣ, 500 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಮೇಲ್ದರ್ಜೆಗೇರಿಸಲು ಮತ್ತು 100 ಸ್ಕೈ ವಾಕ್ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ವಿಶ್ವಬ್ಯಾಂಕ್ ನೆರವಿನ ಜಲ ಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮದ ಕ್ರಿಯಾ ಯೋಜನೆಯಡಿ ರಾಜಕಾಲುವೆಗಳ ಅಭಿವೃದ್ಧಿ, ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಒಟ್ಟು 2,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದು ಅನುಷ್ಠಾನಗೊಳಿಸಲಾಗುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯ ಐದು ಮಹಾನಗರ ಪಾಲಿಕೆಗಳು ತಮ್ಮ ಬ್ಯಾಲೆನ್ಸ್ ಶೀಟ್ ಆಧಾರದಲ್ಲಿ ‘ಮುನಿಸಿಪಲ್ ಬಾಂಡ್’ಗಳನ್ನು ಹೊರಡಿಸುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು ಎಂದರು.
2027ರ ಅಂತ್ಯದೊಳಗೆ ಬೆಂಗಳೂರಿಗೆ ಹೊಸ ಪರಿಷ್ಕೃತ ಮಾಸ್ಟರ್ ಪ್ಲಾನ್-2041 ಅನ್ನು (ಆರ್ಎಂಪಿ)ಜಾರಿಗೊಳಿಸಲಾಗುವುದು. ಇದರ ಜೊತೆಗೆ ಸಮಗ್ರ ಮೊಬಿಲಿಟಿ ಯೋಜನೆಯನ್ನು (ಸಿಎಂಪಿ)ಆರು ತಿಂಗಳೊಳಗೆ ರೂಪಿಸಲಾಗುವುದು ಎಂದು ಹೇಳಿದರು.
ಪ್ರಮುಖ ಅಂಶಗಳು:
* 2026–27ರ ಹಣಕಾಸು ವರ್ಷದಲ್ಲಿ ಒಟ್ಟು 41ಕಿ.ಮೀ. ಹೆಚ್ಚುವರಿ ಮೆಟ್ರೋ ಮಾರ್ಗಗಳನ್ನು ಪೂರ್ಣಗೊಳಿಸಲುಯೋಜಿಸಲಾಗಿದೆ. ಇದರಿಂದ ದಿನಕ್ಕೆ 15 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
* ಹೊರ ವರ್ತುಲ ರಸ್ತೆಯ ಮೆಟ್ರೋ ವಯಾಡಕ್ಟ್ ಉದ್ದಕ್ಕೂ 9 ಕಿ.ಮೀ ಪಾದಚಾರಿ ನಡಿಗೆ ಮಾರ್ಗವನ್ನು ಅಂದಾಜು 160 ಕೋಟಿ ರೂ.ಗಳ ವೆಚ್ಚದಲ್ಲಿ ಹೊರ ವರ್ತುಲ ಕಂಪೆನಿಗಳ ಸಂಘದ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗುವುದು.
* ಬೆಂಗಳೂರು ನಗರದ ಸುಮಾರು 1.40 ಕೋಟಿ ಜನರಿಗೆ ಕುಡಿಯುವ ನೀರು ಪೂರೈಸಲು ಕಾವೇರಿ ನೀರು ಸರಬರಾಜು ಯೋಜನೆಯ 1ರಿಂದ 5ನೇ ಹಂತಗಳ ಮೂಲಕ ಒಟ್ಟು 2,225 ಎಂಎಲ್ಡಿ ನೀರು ಪೂರೈಸಲಾಗುತ್ತಿದೆ. ಇದೀಗ ಜೆಐಸಿಎ ನೆರವಿನಿಂದ 6,939 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿಯಾಗಿ ಆರು ಟಿಎಂಸಿ ನೀರನ್ನು ಪೂರೈಸಲು ಕಾವೇರಿ 6ನೇ ಹಂತದ ಯೋಜನೆಯನ್ನು ರೂಪಿಸಲಾಗಿದೆ.
* ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ 73 ಕಿ.ಮೀ ಉದ್ದದ ಬೆಂಗಳೂರು ಬಿಸ್ನೆಸ್ ಕಾರಿಡಾರ್ ಭಾಗ-1 ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ರೈತರಿಗೆ ಸಮರೋಪಾದಿಯಲ್ಲಿ ಪರಿಹಾರ ವಿತರಿಸಲಾಗುತ್ತಿದೆ. ಈ ರಸ್ತೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
* ಹೆಬ್ಬಾಳ ಜಂಕ್ಷನ್ನಿಂದ ಎಚ್ಎಸ್ಆರ್ ಲೇಔಟ್ ಸಿಲ್ಕ್ ಬೋರ್ಡ್ ವರೆಗಿನ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಹಾಗೂ ಕೆ.ಆರ್.ಪುರಂ ನಿಂದ ಮೈಸೂರು ರಸ್ತೆಯವರೆಗಿನ ಪೂರ್ವ-ಪಶ್ಚಿಮ ಕಾರಿಡಾರ್ ಯೋಜನೆಯ ಒಟ್ಟಾರೆ 40 ಕಿ.ಮಿ. ಉದ್ದದ ಸುರಂಗ ಮಾರ್ಗವನ್ನು 40,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ‘ಬಿಒಒಟಿ’ ಮಾದರಿಯಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ. ಮೊದಲನೇ ಹಂತದಲ್ಲಿ 17ಕಿ.ಮಿ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಯನ್ನು 17,780 ಕೋಟಿ ರೂ.ಗಳ ಮೊತ್ತಕ್ಕೆ ಟೆಂಡರ್ ಕರೆಯಲಾಗಿದೆ.
* ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ಸರ್ಕಲ್ ವರೆಗೆ ಸುರಂಗ ಮಾರ್ಗ ಹಾಗೂ ಮೇಲು ಸೇತುವೆ ರಸ್ತೆಯನ್ನು 2,250ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುವುದು.
* ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆಯನ್ನು ಃಒಖಆಂ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಆರ್ಥಿಕ ಸಂಪನ್ಮೂಲಗಳಿಂದ ನಿರ್ಮಿಸಲಾಗುವುದು.
* ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-4ರಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು 3,885 ಕೋಟಿ ರೂ.ಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲ್ಲಿಯವರೆಗೂ ರಾಜ್ಯ ಸರಕಾರದಿಂದ 1,716 ಕೋಟಿ ರೂ.ಗಳನ್ನು ಬಿಡುಗಡೆಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ರಾಜ್ಯದ ನಗರಗಳ ಸ್ವಚ್ಛತೆಯನ್ನು ಕಾಪಾಡುವ ದೃಷ್ಟಿಯಿಂದ ಒಳಚರಂಡಿ ಕಾಮಗಾರಿಗಳನ್ನು ಅಣ್ಣಿಗೇರಿ, ಗುಂಡ್ಲುಪೇಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಭದ್ರಾವತಿ, ದೇವನಹಳ್ಳಿ ಮತ್ತು ಮೈಸೂರಿನ ಕೆಲವು ಭಾಗಗಳಲ್ಲಿ ಕೈಗೊಳ್ಳಲಾಗುವುದು. ಜೊತೆಗೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದ ನೆರವಿನೊಂದಿಗೆ ಆಳಂದ, ಅಫ್ಜಲ್ಪುರ, ಚಿತ್ತಾಪುರ, ಯಾದಗಿರಿ, ಹರಪನಹಳ್ಳಿ, ಜೇವರ್ಗಿ ಹಾಗೂ ಸುರಪುರ ಪಟ್ಟಣಗಳಲ್ಲಿ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
* ಹೊಸದಾಗಿ ಮೇಲ್ದರ್ಜೆಗೇರಿಸಲಾದ ರಾಯಚೂರು, ಬೀದರ್ ಮತ್ತು ಹಾಸನ ಮಹಾನಗರ ಪಾಲಿಕೆಗಳಿಗೆ ಮಹಾತ್ಮಾಗಾಂಧಿ ನಗರ ವಿಕಾಸ್ ಯೋಜನೆ 2.0ರಡಿ 2026-27ನೇ ಸಾಲಿನಲ್ಲಿ ತಲಾ 200 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ಧಾರವಾಡದಲ್ಲಿ ನಾಲ್ಕು ಹಾಗೂ ಬೆಂಗಳೂರಿನಲ್ಲಿ ಎರಡು ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ಗಳನ್ನು ಪ್ರಾರಂಭ. ಕಲಬುರಗಿ ನಗರಕ್ಕೆ ದಿನ 24ಗಂಟೆಗಳ ಕಾಲ ಶಾಶ್ವತವಾಗಿ ಗುಣಮಟ್ಟದ ನೀರನ್ನು ಒದಗಿಸಲು ಅಂದಾಜು 1,863 ಕೋಟಿ ರೂ. ವೆಚ್ಚದ ಕಾಮಗಾರಿಗೆ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು.
* ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ವಿವಿಧ ಭಾಗಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಒದಗಿಸಲಾಗುವುದು.







