7.11 ಕೋಟಿ ದರೋಡೆ ಪ್ರಕರಣ | ಆರೋಪಿಗಳ ಪತ್ತೆಗೆ 4 ಜಂಟಿ ಆಯುಕ್ತರು, 18 ಡಿಸಿಪಿಗಳ ನೇತೃತ್ವದಲ್ಲಿ 16 ತಂಡಗಳ ರಚನೆ

ಬೆಂಗಳೂರು : ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದು ಎಟಿಎಂಗಳಿಗೆ ಹಣ ಹಾಕುವ ಸಿಎಂಎಸ್ ಎಜೆನ್ಸಿಯ ವಾಹನ ಅಡ್ಡಗಟ್ಟಿ 7.11 ಕೋಟಿ ರೂ. ದರೋಡೆ ಮಾಡಿದ ಪ್ರಕರಣ ಸಂಬಂಧ ಆರೋಪಿಗಳ ಬಂಧನಕ್ಕಾಗಿ ನಾಲ್ವರು ಜಂಟಿ ಪೊಲೀಸ್ ಆಯುಕ್ತರು, 18 ಡಿಸಿಪಿಗಳ ನೇತೃತ್ವದಲ್ಲಿ 16 ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ನವೆಂಬರ್ 19ರಂದು ನಗರದ ಡೈರಿ ಸರ್ಕಲ್ ಬಳಿ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ನಮ್ಮ 16 ತಂಡಗಳು ಒಂದೊಂದು ವಿಭಾಗಗಳಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಿವೆ. ಸಿಸಿಟಿವಿ, ಟವರ್ ಡಂಪ್ ಸೇರಿದಂತೆ ಇನ್ನಿತರ ತಾಂತ್ರಿಕ ಸಾಕ್ಷ್ಯಾಧಾರ ಆಧರಿಸಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳು ಹಳೆ ಮದ್ರಾಸ್ ರಸ್ತೆ ಮೂಲಕ ಆಂಧ್ರಪ್ರದೇಶಕ್ಕೆ ತೆರಳಿರುವುದು ಖಚಿತವಾಗಿದೆ ಎಂದರು.
ದರೋಡೆಯಾದ ಸ್ಥಳ ಸಿದ್ದಾಪುರ ಪೊಲೀಸ್ ಠಾಣೆಗೆ ಕೇವಲ 1 ಕಿ.ಮೀ. ದೂರವಿದೆ. ಈ ಘಟನೆ ಬಗ್ಗೆ ತಕ್ಷಣ ಮಾಹಿತಿ ನೀಡಬಹುದಾಗಿತ್ತು. ಆದರೆ ಸಿಬ್ಬಂದಿ ಏಕೆ ತಡ ಮಾಡಿದರು ಎಂಬುವುದರ ಬಗ್ಗೆ ಅನುಮಾನವಿದೆ ಹಾಗಾಗಿ ಸಿಎಂಎಸ್ ಏಜೆನ್ಸಿಯ ಸಿಬ್ಬಂದಿಗಳನ್ನು ಸಹ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಸೀಮಂತ್‍ಕುಮಾರ್ ಸಿಂಗ್ ಹೇಳಿದರು.
ಆರೋಪಿಗಳು ಬೇರೆ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆಯಿದೆ. ನಮ್ಮ ತಂಡಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ. ದರೋಡೆ ನಡೆದ 2 ಗಂಟೆಗಳ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆದ್ದರಿಂದಾಗಿ ಆರೋಪಿಗಳನ್ನು ನಗರದಲ್ಲಿ ಬಂಧಿಸಲು ಸಾಧ್ಯವಾಗಿಲ್ಲ ಎಂದು ಸೀಮಂತ್‍ಕುಮಾರ್ ಸಿಂಗ್ ಬೇಸರ ವ್ಯಕ್ತಪಡಿಸಿದರು.
ಉನ್ನತ ಮೂಲಗಳ ಪ್ರಕಾರ, ದರೋಡೆಕೋರರ ಪತ್ತೆಗಾಗಿ ರಚಿಸಲಾದ 16 ತಂಡಗಳ ಪೈಕಿ ಸಿಸಿಬಿ ವಿಶೇಷ ತಂಡವು ಆಂಧ್ರಪ್ರದೇಶದ ತಿರುಪತಿ ಪೊಲೀಸರ ಸಹಾಯದಿಂದ ತಿರುಪತಿಯಲ್ಲಿರುವ ಹೋಟೆಲ್‍ಗಳು, ಲಾಡ್ಜ್ ಗಳು ಮತ್ತು ದೇವಾಲಯಗಳ ಬಳಿ ಮಫ್ತಿಯಲ್ಲಿ ವ್ಯಾಪಕ ಶೋಧ ನಡೆಸಿ ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರು ಹಾಗೂ ಇಬ್ಬರು ಪ್ರಮುಖ ಶಂಕಿತರನ್ನು ವಶಕ್ಕೆ ಪಡೆದಿದೆ. ಬಳಿಕ ತಿರುಪತಿಯಲ್ಲೇ ಶಂಕಿತರ ತೀವ್ರ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ದರೋಡೆ ಮಾಡಿದವರೆಲ್ಲ ಬೆಂಗಳೂರು ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಇದು ಸಂಘಟಿತ ಅಪರಾಧ ಕೃತ್ಯವೆಂದು ಕಂಡುಬಂದಿದ್ದು, ಆರೋಪಿಗಳು ಹಲವು ದಿನಗಳಿಂದಲೇ ಸಂಚು ರೂಪಿಸಿದ್ದರು ಎಂಬ ಅನುಮಾನವಿದೆ. ದರೋಡೆಯ ವಿಧಾನವು ಯಾವುದಾದರೂ ವೆಬ್ ಸೀರೀಸ್‍ನಿಂದ ಪ್ರೇರಿತವೇ ಎಂಬ ಕೋನದಲ್ಲಿಯೂ ತನಿಖೆ ಸಾಗಿದೆ. ದರೋಡೆಯ ಬಳಿಕ ಸಿಎಂಎಸ್ ವಾಹನವನ್ನು ಡೈರಿ ಸರ್ಕಲ್ ಮೇಲ್ಸೇತುವೆ ಬಳಿ ನಿಲ್ಲಿಸಲಾಗಿತ್ತು. ಈ ಜಾಗವು ಆಡುಗೋಡಿ, ಸುದ್ದುಗುಂಟೆಪಾಳ್ಯ ಮತ್ತು ಸಿದ್ಧಾಪುರ ಪೊಲೀಸ್ ಠಾಣೆಗಳ ಗಡಿಯಾಗಿರುವುದರಿಂದ, ಪೊಲೀಸರನ್ನು ಗೊಂದಲಕ್ಕೀಡು ಮಾಡುವ ಉದ್ದೇಶದಿಂದಲೇ ಆರೋಪಿಗಳು ಈ ತಂತ್ರ ಅನುಸರಿಸಿರಬಹುದು ಎಂದು ವಿಶೇಷ ತನಿಖಾ ತಂಡಗಳು ಶಂಕಿಸಿವೆ.
20ಕ್ಕೂ ಅಧಿಕ ಮಂದಿ ವಿಚಾರಣೆ, ಕೆಲವರ ಹೇಳಿಕೆಗಳಲ್ಲಿ ಗೊಂದಲ!:
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‍ಡಿಎಫ್‍ಸಿ ಬ್ಯಾಂಕ್ ಮತ್ತು ಸಿಎಂಎಸ್ ಏಜೆನ್ಸಿಯ ಸಿಬ್ಬಂದಿ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ತನಿಖಾ ತಂಡವು ವಶಕ್ಕೆ ಪಡೆದುಕೊಂಡಿದೆ. ಎಲ್ಲರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಇವರ ಹೇಳಿಕೆಯಲ್ಲಿ ಕೆಲವು ಗೊಂದಲಗಳಿವೆ. ಅಲ್ಲದೆ, ವಶಕ್ಕೆ ಪಡೆದವರ ಪೂರ್ವಾಪರ ಹಾಗೂ ಇತ್ತೀಚಿನ ದಿನಗಳ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
"ಪೊಲೀಸ್ ಅಧಿಕಾರಿಗಳಿಂದ ಎಲ್ಲಾ ಮಾಹಿತಿ ಪಡೆದುಕೊಂಡಿದ್ದೇನೆ. ದರೋಡೆಕೋರರು ಬಳಸಿದ ಕಾರಿನ ನಂಬರ್ ಪ್ಲೇಟ್ ನಕಲಿ ಆಗಿದೆ. ಸದ್ಯ ಪೊಲೀಸರು ದರೋಡೆಕೋರರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ದರೋಡೆಕೋರರನ್ನು ಬಿಡುವ ಮಾತೇ ಇಲ್ಲ"
-ಡಾ.ಜಿ.ಪರಮೇಶ್ವರ್, ಗೃಹ ಸಚಿವ
100ಕ್ಕೂ ಹೆಚ್ಚು ಸಿಸಿಟಿವಿ ಶೋಧ..!:
ದರೋಡೆ ನಡೆಸಿದ ಬಳಿಕ ಡೈರಿ ಸರ್ಕಲ್‍ನಿಂದ ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದ ಆರೋಪಿಗಳಿದ್ದ ಕಾರಿನ ಟ್ರ್ಯಾಕ್ ಬಗ್ಗೆ ಪೊಲೀಸರು ಜಾಡು ಪತ್ತೆ ಹಚ್ಚಿದ್ದು, ಡೈರಿ ಸರ್ಕಲ್‍ನಿಂದ ಕೆ.ಆರ್.ಪುರದ ಭಟ್ಟರಹಳ್ಳಿವರೆಗೂ ಸುಮಾರು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಈ ಮೂಲಕ ಆರೋಪಿಗಳು ಆಂಧ್ರಕ್ಕೆ ಪರಾರಿಯಾಗಿರುವುದು ಖಚಿತವಾಗಿದೆ.







