79 ನೇ ಸ್ವಾತಂತ್ರ್ಯ ದಿನಾಚರಣೆ | ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಮನ ಸೆಳೆದ ‘ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತಿಯರು’ ರೂಪಕ

ಬೆಂಗಳೂರು, ಆ.15: ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯು ಅದ್ದೂರಿಯಾಗಿ ನಡೆದಿದ್ದು, ವಿಶೇಷತೆಗಳಿಂದ ಕೂಡಿದ್ದ ಎರಡು ನೃತ್ಯ ರೂಪಕಗಳು ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಕರನ್ನು ಆಕರ್ಷಿಸಿತು. ವಿಶೇಷವಾಗಿ ‘ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತಿಯರು’ ರೂಪಕವು ನೋಡುಗರ ಮನ ಸೆಳೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈದಾನಕ್ಕೆ ಆಗಮಿಸಿ ಧ್ವಜಾರೋಹಣ ನೆರೆವೇರಿಸಿದ ಬಳಿಕ ತೆರೆದ ವಾಹನದಲ್ಲಿ ಪೇರೆಡ್ ಪರಿವೀಕ್ಷಣೆ ಮಾಡಿ ಗೌರವ ರಕ್ಷೆಯನ್ನು ಸ್ವೀಕರಿಸಿದರು. ಗಡಿ ಭದ್ರತಾ ಪಡೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ 30 ತುಕಡಿಗಳು ಈ ಬಾರಿ ಪಥ ಸಂಚಲನದಲ್ಲಿ ಭಾಗವಹಿಸಿದವು.
ಮನ ಸೆಳೆದ ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತಿಯರು: ಹೇರೋಹಳ್ಳಿ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 694 ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತಿಯರು’ ಎಂಬ ನೃತ್ಯ ರೂಪಕವು ಮನ ಸೆಳೆಯಿತು. ಭಾರತದ ಸ್ವಾಂತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ವೀರ ನಾರಿಯರ ಬಗ್ಗೆ ಸುಮಾರು 8 ನಿಮಿಷಗಳ ಕಾಲ ವಿದ್ಯಾರ್ಥಿಗಳು ನೃತ್ಯ ರೂಪಕವನ್ನು ಪ್ರದರ್ಶಿಸಿದರು.
ಕರ್ನಾಟಕದಲ್ಲಿ ಹಲವಾರು ಮಹಿಳೆಯರು ಇತಿಹಾಸದಲ್ಲಿ ಅಳಿಸಲಾಗದ ಗುರುತು ಬಿಟ್ಟಿದ್ದಾರೆ. ಪೋರ್ಚುಗೀಸರ ವಿರುದ್ಧ ಶೌರ್ಯದಿಂದ ಹೋರಾಡಿದ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯಿಂದ ಹಿಡಿದು ಬ್ರಿಟೀಷರ ವಿರುದ್ಧ ತನ್ನ ಸೈನ್ಯವನ್ನು ಮುನ್ನೆಡೆಸಿದ ಕಿತ್ತೂರಿನ ರಾಣಿ ಚನ್ನಮ್ಮನವರೆಗೆ ಮಹಿಳೆಯು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಅವರಿಗೆ ಗೌರವ ಸೂಚಕವಾಗಿ ನೃತ್ಯವನ್ನು ಪ್ರದರ್ಶಿಸಲಾಯಿತು. ಈ ರೂಪಕಕ್ಕೆ ಹಿದಾಯತ್ ಅಹಮದ್ ನೃತ್ಯ ಸಂಯೋಜನೆಯ ಮೇಲುಸ್ತುವಾರಿಯನ್ನು ವಹಿಸಿದ್ದರು.
ಕರ್ನಾಟಕ ಸರಕಾರದ ಐದು ಗ್ಯಾರೆಂಟಿ ಯೋಜನೆಗಳ ಕುರಿತಾಗಿ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ 450 ಮಕ್ಕಳು ‘ಹೋಯಿತು ಅಂಧಕಾರವು, ಉಚಿತ ಸಂಚಾರ-ಒಳ್ಳೆಯ ಆಹಾರ’ ಎಂಬ ನೃತ್ಯ ರೂಪಕವನ್ನು ಪ್ರದರ್ಶನ ಮಾಡಿದರು. ಸುಮಾರು ಎಂಟು ನಿಮಿಗಳ ಕಾಲ ಗ್ಯಾರೆಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳ ಬಗ್ಗೆ ನೃತ್ಯವನ್ನು ಪ್ರದರ್ಶನ ಮಾಡಲಾಯಿತು.
ಪೊಲೀಸ್ ಇಲಾಖೆ ವತಿಯಿಂದ ಸಮೂಹ ವಾದ್ಯಮೇಳವನ್ನು ಆಯೋಜಿಸಲಾಗಿತ್ತು. ಸುಮಾರು 253 ಅಧಿಕಾರಿಗಳು, ಸಿಬ್ಬಂದಿಗಳು ಎಂಟು ನಿಮಿಷಗಳ ಕಾಲ ನಡೆದ ವಾದ್ಯಮೇಳದಲ್ಲಿ ಭಾಗವಹಿಸಿದ್ದರು. ಹಂಸಲೇಖ, ಆರ್.ಎನ್. ಜಯಗೋಪಾಲ್, ನರಸಿಂಹ ಮೆಹ್ತಾ, ಕೆ.ಎಸ್. ನಿಸ್ಸಾರ್ ಅಹ್ಮದ್, ತುಳಸೀದಾಸ್, ಎ.ಆರ್. ರೆಹಮಾನ್, ಮಹಮ್ಮದ್ ಇಕ್ಬಾಲ್ ರಚಿಸಿದ ಹಾಡುಗಳಿಗೆ ವಾದ್ಯಗಳನ್ನು ನುಡಿಸಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲೆಯ ಮಕ್ಕಳಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ ಬಹುಮಾನಗಳನ್ನು ವಿತರಿಸಿದರು. ಉನ್ನತ ಶಿಕ್ಷಣ ಇಲಾಖೆಯ ಡಾ.ಕೆ.ಜಿ.ಜಗದೀಶ್ ಮಾರ್ಗದರ್ಶನದಲ್ಲಿ ಮೂಡಿಬಂದ ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ನೃತ್ಯಕ್ಕೆ ಪ್ರಥಮ ಬಹುಮಾನ ನೀಡಲಾಯಿತು.
ಇನ್ನು ಪ್ರತಿ ವರ್ಷ ಸೇನಾಯೋಧರ ಸಾಹಸಮಯ ಬೈಕ್ ಪ್ರದರ್ಶನ, ಪ್ಯಾರಾ ಮೋಟಾರ್ ಪ್ರದರ್ಶನವನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ವರ್ಷ ಸಾಹಸಮಯ ಬೈಕ್ ಪ್ರದರ್ಶನ, ಪ್ಯಾರಾ ಮೋಟಾರ್ ಪ್ರದರ್ಶನ ಇರಲಿಲ್ಲ.







