ಬೆಂಗಳೂರು: ನಿವೇಶನದ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

- ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.30: ನಿವೇಶನದ ವಿಚಾರದಲ್ಲಿ ಉಂಟಾದ ದ್ವೇಷದಿಂದ ಆಕ್ರೋಶಗೊಂಡು ವ್ಯಕ್ತಿಯೊಬ್ಬರನ್ನು ಕೊಲೆಗೈದಿರುವ ಘಟನೆ ಇಲ್ಲಿನ ಹೆಬ್ಬಗೋಡಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಹೆಬ್ಬಗೋಡಿಯ ರಮೇಶ್ ಕೊಲೆಯಾದವರು, ಜಗದೀಶ್ ಹಾಗೂ ಇತರೆ ಆರೋಪಿಗಳ ಗುಂಪು ಕೊಲೆಗೈದವರು ಎಂಬ ಆರೋಪ ಕೇಳಿಬಂದಿದೆ.
ಅ.29ರ ರಾತ್ರಿ 11.30ರ ವೇಳೆಗೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ರಮೇಶ್ ಅವರನ್ನು ಎದುರು ಮನೆಯ ಜಗದೀಶ್, ಇತರ ದುಷ್ಕರ್ಮಿಗಳ ಜೊತೆ ಸೇರಿ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹೆಬ್ಬಗೋಡಿಯ ಜಾಗದಲ್ಲಿ ಮನೆ ಕಟ್ಟುವ ವಿಚಾರಕ್ಕೆ ಆಗಾಗ ರಮೇಶ ಹಾಗೂ ಕೊಲೆ ಆರೋಪಿಗಳ ನಡುವೆ ಗಲಾಟೆ ನಡೆಯುತ್ತಿತ್ತು. ಸರಕಾರದಿಂದ ಅಲಾಟ್ ಆಗಿದ್ದ ಜಾಗದಲ್ಲಿ ರಮೇಶ್ ಮನೆಗೆ ಅಡಿಪಾಯ ಹಾಕಿದ್ದರು. ಇದೇ ಜಾಗ ತನಗೆ ಸೇರಬೇಕು ಎಂದು ಎದುರು ಮನೆಯ ಜಗದೀಶ್ ಎಂಬುವವರು ಆಗಾಗ ಗಲಾಟೆ ಮಾಡಿದ್ದರು. ಹೆಬ್ಬಗೋಡಿ ನಗರಸಭೆಯಿಂದ ಈ ಜಾಗ ರಮೇಶ್ಗೆ ಸೇರಿದ್ದು ಎಂದು ದಾಖಲೆ ನೀಡಲಾಗಿತ್ತೆನ್ನಲಾಗಿದೆ.
ಇದೇ ವಿಚಾರಕ್ಕಾಗಿ ದ್ವೇಷ ಸಾಧಿಸುತ್ತಿದ್ದ ಜಗದೀಶ್, ಗುಂಪು ಕಟ್ಟಿಕೊಂಡು ಮಾರಕಾಸ್ತ್ರಗಳ ಜೊತೆ ಬಂದು ಕೊಲೆ ಮಾಡಿದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.







