ವಿಬಿ ಜಿ ರಾಮ್ ಜಿ ರದ್ದು ಮಾಡಿ, ‘ಮನರೇಗಾ’ ಮರುಜಾರಿಗೆ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಸಾಧ್ಯತೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ. 3: ಕರ್ನಾಟಕದ ಗ್ರಾಮೀಣ ಜನರ ಬದುಕಿನ ಹಕ್ಕನ್ನು ಕಾಪಾಡುವ ಉದ್ದೇಶದಿಂದ, ಒಕ್ಕೂಟ ತತ್ವಕ್ಕೆ ವಿರೋಧವಾಗಿರುವ, ರಾಜ್ಯದ ಬೊಕ್ಕಸಕ್ಕೆ ಹೊರೆ ಉಂಟುಮಾಡುವ ಹಾಗೂ ವಿಕೇಂದ್ರೀಕರಣ ತತ್ವಕ್ಕೆ ವಿರುದ್ಧವಾಗಿ ಗ್ರಾಮ ಪಂಚಾಯತಿಗಳ ಅಧಿಕಾರ ಮತ್ತು ಹಕ್ಕುಗಳನ್ನು ಕಸಿದುಕೊಂಡಿರುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) – (VB-G RAM-G) ಕಾಯ್ದೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ರದ್ದುಗೊಳಿಸಬೇಕು, ಜೊತೆಗೆ ಗ್ರಾಮೀಣ ಆಸ್ತಿ ಸೃಜನತೆಗೆ ಮತ್ತು ಬಡವರ ಸ್ವಾವಲಂಬನೆಗೆ ಕಾರಣವಾಗಿದ್ದ ‘ಮನರೇಗಾ’ ಯೋಜನೆಯನ್ನು ಅದರ ಮೂಲ ಸ್ವರೂಪದಲ್ಲಿಯೇ ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿ ಮಹತ್ವದ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸುವ ಸಾಧ್ಯತೆಗಳಿವೆ.
ಮಂಗಳವಾರ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಣಯವನ್ನು ಮಂಡಿಸಲಿದ್ದಾರೆ ಎಂದು ವಿಧಾನಸಭೆಯ ಕಾರ್ಯಕಲಾಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಉದ್ಯೋಗವು ಪ್ರತಿಯೊಬ್ಬ ವ್ಯಕ್ತಿಯ ‘ಹಕ್ಕು’ ಮತ್ತು ‘ಬೇಡಿಕೆ ಆಧಾರಿತ’ವಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಇದನ್ನು ಕೇಂದ್ರ ಸರ್ಕಾರ ರೂಪಿಸುವ ಮಾನದಂಡಗಳ ಅಧೀನಕ್ಕೆ ಒಳಪಡಿಸಿ ಜನರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ದಿಲ್ಲಿಯ ದಂತಗೋಪುರಗಳಲ್ಲಿ ಕುಳಿತು ಯೋಜನೆಗಳನ್ನು ರೂಪಿಸುವ ಮೂಲಕ ಗ್ರಾಮಸಭೆಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಗ್ರಾಮ ಪಂಚಾಯತಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ. ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಪಂಚಾಯತಿಗಳಲ್ಲಿ ಮಾತ್ರ ಯೋಜನೆ ಜಾರಿಯಾಗುತ್ತಿದ್ದು, ಉಳಿದ ಪ್ರದೇಶಗಳಲ್ಲಿ ಉದ್ಯೋಗದ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಉದ್ಯೋಗ ಖಾತ್ರಿ ಕಾಯ್ದೆಯಡಿ ನಮ್ಮ ಹೊಲ–ನಮ್ಮ ದಾರಿ, ದನದ ಕೊಟ್ಟಿಗೆ, ಕುರಿ ದೊಡ್ಡಿ, ಕಣ, ಶಾಲಾ ಕಾಂಪೌಂಡ್, ಶೌಚಾಲಯ, ಬದು, ಹೊಳಗಟ್ಟಿ, ಪಂಚಾಯತಿ ಕಟ್ಟಡಗಳು (ರಾಜೀವ ಗಾಂಧಿ ಸೇವಾ ಕೇಂದ್ರ), ತೋಟಗಾರಿಕೆ ಬೆಳೆಗಳು, ಆಟದ ಮೈದಾನ ಸೇರಿದಂತೆ ಸ್ಥಳೀಯವಾಗಿ ಅಗತ್ಯವಿರುವ ಗ್ರಾಮೀಣ ಆಸ್ತಿಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಹೊಸ ಕಾಯ್ದೆಯನ್ನು ‘ಪಿ.ಎಂ. ಗತಿಶಕ್ತಿ’ ಯೋಜನೆಗೆ ಜೋಡಿಸಿರುವುದರಿಂದ, ದೊಡ್ಡ ರಸ್ತೆಗಳು ಮತ್ತು ಹೆದ್ದಾರಿಗಳ ನಿರ್ಮಾಣಕ್ಕೆ ಬಳಸಲಾಗುತ್ತಿದ್ದು, ಇದು ಪರೋಕ್ಷವಾಗಿ ಗುತ್ತಿಗೆದಾರರು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆಯಾಗಿ ಮಾರ್ಪಟ್ಟಿದೆ. ಇದು ಬಡವರ ಕೈಯಿಂದ ಅನ್ನ ಕಸಿದುಕೊಂಡು ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಯೋಜನೆಯಾಗಿದೆ ಎಂದು ನಿರ್ಣಯದಲ್ಲಿ ಟೀಕಿಸಲಾಗಿದೆ.
ಹೊಸ ಕಾಯ್ದೆಯು ವರ್ಷಕ್ಕೆ 12 ತಿಂಗಳ ಬದಲು ಕೇವಲ 10 ತಿಂಗಳು ಮಾತ್ರ ಕೆಲಸಕ್ಕೆ ಅವಕಾಶ ನೀಡುತ್ತದೆ. VB G RAM G ಕಾಯ್ದೆಯಡಿ ಎಲ್ಲಾ ಗ್ರಾಮ ಪಂಚಾಯತಿಗಳು ಸೇರ್ಪಡೆಗೊಳ್ಳುವ ಖಚಿತತೆ ಇಲ್ಲ. ಅಲ್ಲದೆ ಕಾರ್ಮಿಕರಿಗೆ ನೀಡಲಾಗುವ ಕೂಲಿ ದರದ ಬಗ್ಗೆ ಯಾವುದೇ ಖಚಿತತೆ ಅಥವಾ ಭರವಸೆ ಇಲ್ಲ. ಈ ಅನಿಶ್ಚಿತತೆಯಿಂದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು—ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಮಿಕರು, ಆದಿವಾಸಿಗಳು ಹಾಗೂ ರೈತಾಪಿ ಜನರ ಹಕ್ಕುಗಳು ಕಸಿದುಕೊಳ್ಳಲ್ಪಡುತ್ತಿವೆ. ಗ್ರಾಮೀಣ ಕೂಲಿ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಯತ್ತ ತಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಲಾಗಿದೆ.
ಆದ್ದರಿಂದ ಮೇಲ್ಕಂಡ ಪ್ರಮುಖ ಕಾರಣಗಳಿಂದ ಕೇಂದ್ರ ಸರ್ಕಾರದ ಈ ನಡೆಯನ್ನು ಈ ಸದನವು ತೀವ್ರವಾಗಿ ವಿರೋಧಿಸುತ್ತದೆ. ಮೇಲ್ಕಂಡ ಎಲ್ಲ ಗಂಭೀರ ಅಂಶಗಳನ್ನು ಪರಿಗಣಿಸಿ, ಭಾರತದ ಪ್ರಜಾಸತ್ತೆಯ ಭದ್ರ ಬುನಾದಿಯಾಗಿರುವ ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಅಧಿಕಾರ ವಿಕೇಂದ್ರೀಕರಣದ ತತ್ವಗಳಿಗೆ ತನ್ನ ಸಂಪೂರ್ಣ ಬದ್ಧತೆಯನ್ನು ಈ ಸದನವು ಪುನರುಚ್ಚರಿಸುತ್ತದೆ. ಗ್ರಾಮೀಣ ಬಡವರ ಪಾಲಿನ ‘ಸಂಜೀವಿನಿ’ಯಾಗಿದ್ದ ಮತ್ತು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ‘ಮನರೇಗಾ’ ಯೋಜನೆಯನ್ನು ರದ್ದುಗೊಳಿಸಿರುವುದನ್ನು ಈ ಸದನವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಜಾರಿಗೆ ತಂದಿರುವ ಹೊಸ VB-GRAM-G ಕಾಯ್ದೆಯು ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಗೆ ಮತ್ತು ಗ್ರಾಮೀಣ ಜನರ ಜೀವನೋಪಾಯದ ಹಕ್ಕಿಗೆ ಮಾರಕವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಗ್ರಾಮೀಣ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಸಲುವಾಗಿ 2005ರಲ್ಲಿ ಅಂದಿನ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯು ನಿರುದ್ಯೋಗ ನಿವಾರಣೆ, ವಲಸೆ ತಡೆ, ಲಿಂಗತಾರತಮ್ಯವಿಲ್ಲದ ವೇತನ ವ್ಯವಸ್ಥೆ, ಪಂಚಾಯತ್ ವಿಕೇಂದ್ರೀಕರಣದ ಬಲವರ್ಧನೆ ಹಾಗೂ ಗ್ರಾಮೀಣ ಜನರ ವೈಯಕ್ತಿಕ ಮತ್ತು ಸಮುದಾಯ ಆಸ್ತಿಗಳ ಸೃಜನೆಯ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಹೊಸ ಕಾಯ್ದೆಯು ಸಂವಿಧಾನದ 21ನೇ ಅನುಚ್ಛೇದದಡಿ ಸಿಗುವ ಜೀವಿಸುವ ಹಕ್ಕು ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ. ಜೊತೆಗೆ ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಗ್ರಾಮ ಪಂಚಾಯತಿಗಳಿಗೆ ನೀಡಲಾದ ಅಧಿಕಾರ ಮತ್ತು ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಮೂಲಕ, 73ನೇ ತಿದ್ದುಪಡಿಯ ಆಶಯಕ್ಕೂ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಗೂ ವಿರುದ್ಧವಾಗಿದೆ. ಮನರೇಗಾ ಕಾಯ್ದೆಯಡಿ ಕೇಂದ್ರ ಸರ್ಕಾರವೇ 100 ಮಾನವ ದಿನಗಳ ಕೂಲಿ ವೆಚ್ಚವನ್ನು ಶೇ.100ರಷ್ಟು ಭರಿಸುತ್ತಿತ್ತು. ಆದರೆ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ, ಕೇಂದ್ರ ಸರ್ಕಾರವು ರಾಜ್ಯಗಳು ಶೇ.40ರಷ್ಟು ಅನುದಾನ ಭರಿಸಬೇಕೆಂಬ ನಿಯಮವನ್ನು ಏಕಾಏಕಿ ಹೇರಿದೆ. ಇದರಿಂದ ಹೊಸ ಕಾಯ್ದೆಯಲ್ಲಿ 125 ಮಾನವ ದಿನಗಳ ಕೆಲಸ ನೀಡುವುದಾಗಿ ಹೇಳಿದ್ದರೂ, ವಾಸ್ತವದಲ್ಲಿ 50 ಮಾನವ ದಿನಗಳ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಹಾಗೂ ಸಂವಿಧಾನದ ಅನುಚ್ಛೇದ 258 ಮತ್ತು 280ರ ಸ್ಪಷ್ಟ ಉಲ್ಲಂಘನೆಯಾಗಿದೆ.
ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಗ್ರಾಮ ಪಂಚಾಯತಿಗಳ ತೆರಿಗೆ ಸಂಗ್ರಹದಲ್ಲೂ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ವಿಕೇಂದ್ರೀಕರಣ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಮುಂಚೂಣಿಯಲ್ಲಿದೆ. 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಶೇ.4.71ರಷ್ಟು ತೆರಿಗೆ ಹಂಚಿಕೆಯನ್ನು ಶಿಫಾರಸು ಮಾಡಲಾಗಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಇದು ಶೇ.3.64ಕ್ಕೆ ಇಳಿಯಿತು. ಇದೀಗ 16ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ಶೇ.4.131ರಷ್ಟು ಹಂಚಿಕೆ ನೀಡಲಾಗಿದ್ದರೂ, ಅದು 14ನೇ ಹಣಕಾಸು ಆಯೋಗದ ಶಿಫಾರಸಿಗಿಂತ ಶೇ.14.1ರಷ್ಟು ಕಡಿಮೆಯಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ, ಹೊಸ ಕಾಯ್ದೆಯ ಮೂಲಕ ಯೋಜನೆಯ ಅನುಷ್ಠಾನದಲ್ಲಿ ಶೇ.40ರಷ್ಟು ಹೊರೆ ರಾಜ್ಯದ ಮೇಲೆ ಹೊರಿಸುವುದು ರಾಜ್ಯದ ಆರ್ಥಿಕ ಭದ್ರತೆ ಮತ್ತು ಅಭಿವೃದ್ಧಿಯನ್ನು ಅಪಾಯಕ್ಕೆ ದೂಡುವ ಹುನ್ನಾರವಾಗಿದೆ ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ.







