`ಟೋಬಿ' ಸಿನೆಮಾ ಚೆನ್ನಾಗಿಲ್ಲ ಎಂದು ಹೇಳಿದ ಯುವತಿಗೆ ಯುವಕನಿಂದ ನಿಂದನೆ: ಕ್ಷಮೆ ಕೇಳಿದ ನಟ ರಾಜ್ ಬಿ. ಶೆಟ್ಟಿ

ಬೆಂಗಳೂರು: `ಟೋಬಿ' ಸಿನೆಮಾ ಚೆನ್ನಾಗಿಲ್ಲ ಎಂದು ಹೇಳಿದ ಯುವತಿಗೆ ಯವಕನೊಬ್ಬ ನಿಂದಿಸಿದ ಪ್ರಕರಣ ಸಂಬಂಧ, ಚಿತ್ರನಟ ರಾಜ್ ಬಿ. ಶೆಟ್ಟಿಯವರು ಕ್ಷಮೆ ಕೋರಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ, ‘ಸಿನೆಮಾ ವಿಮರ್ಶೆಗೆ ಒಳಪಡುವ ಮಾಧ್ಯಮ. ಹಣ ಕೊಡುವ ವೀಕ್ಷಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ಅದನ್ನು ಒಪ್ಪಿಕೊಳ್ಳುವ ಅಥವಾ ಒಪ್ಪಿಕೊಳ್ಳದೇ ಇರುವ ಸ್ವಾತಂತ್ರ್ಯ ಅವರಿಗಿದೆ’ ಎಂದು ರಾಜ್ ಬಿ. ಶೆಟ್ಟಿ ಬರೆದುಕೊಂಡಿದ್ದಾರೆ.
ʼʼಅಭಿಪ್ರಾಯ ಹೇಳಿದ ಕಾರಣಕ್ಕೆ ಜನರಿಗೆ ಯಾವುದೇ ರೀತಿಯಲ್ಲಿ ನಾವು ಕಿರುಕುಳ ನೀಡಲು ಪ್ರಯತ್ನಿಸಬಾರದು. ವಿಡಿಯೊದಲ್ಲಿರುವವರು ನಮ್ಮ ಸಿನೆಮಾಗೆ ಸಂಬಂಧಪಟ್ಟವರಲ್ಲ. ಆದರೂ ನಾನು ಕಿರುಕುಳಕ್ಕೆ ಒಳಗಾದ ಯುವತಿಯ ಜತೆ ಕ್ಷಮೆ ಕೇಳುತ್ತೇನೆ. ನಮ್ಮನ್ನು ಕ್ಷಮಿಸಿ..ʼʼ ಎಂದು ಅವರು ಬರೆದುಕೊಂಡಿದ್ದಾರೆ.
‘ಟೋಬಿ’ ಸಿನೆಮಾ ತೆರೆಕಂಡ ದಿನ ಥಿಯೇಟರ್‌ನಲ್ಲಿ ಚಿತ್ರ ವೀಕ್ಷಿಸಿದ ನಂತರ ಯುವತಿಯೊಬ್ಬರು ಖಾಸಗಿ ವಾಹಿನಿಯೊಂದರ ಕ್ಯಾಮರಾ ಮುಂದೆ ‘’ಟೋಬಿ ಸಿನೆಮಾ ಚೆನ್ನಾಗಿಲ್ಲ’’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ, ಯುವತಿಗೆ ಅಲ್ಲೇ ಇದ್ದ ಯವಕನೊಬ್ಬ ನಿಂದಿಸಿದ್ದಾನೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನಟ ರಾಜ್ ಬಿ. ಶೆಟ್ಟಿ ಫೇಸ್ ಬುಕ್ ನಲ್ಲಿ ಪ್ರತಿಕ್ರಯಿಸಿದ್ದಾರೆ.







