ಲಂಚ ಸ್ವೀಕಾರ: ಲೋಕಾಯುಕ್ತ ಪೊಲೀಸರ ಮೇಲೆ ವಾಹನ ಹತ್ತಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆಹಾರ ನಿರೀಕ್ಷಕನ ಬಂಧನ
15 ಕಿ.ಮೀ ಬೆನ್ನಟ್ಟಿ ಹಿಡಿದ ಅಧಿಕಾರಿಗಳು

ಬಂಧಿತ ಅಧಿಕಾರಿ
ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಲು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಮತ್ತು ಅಧಿಕಾರಿಗಳ ಮೇಲೆ ವಾಹನ ಹತ್ತಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದಲ್ಲಿ ಬೆಂಗಳೂರು ಉತ್ತರ ತಾಲೂಕಿನ ಆಹಾರ ನಿರೀಕ್ಷಕನನ್ನು ಶುಕ್ರವಾರ ಬಂಧಿಸಲಾಗಿದೆ.
ಮಹಾಂತೇಗೌಡ ಬಿ. ಕಡಬಾಳು ಎಂಬವರೇ ಬಂಧಿತ ಆಹಾರ ನಿರೀಕ್ಷಕ ಎಂದು ತಿಳಿದು ಬಂದಿದೆ.
ಮಹಾಂತೇಗೌಡ, ಇತ್ತೀಚೆಗೆ ರಂಗಧಾಮಯ್ಯ ಎಂಬುವವರ ಬಳಿ ಉದ್ದಿಮೆ ಪರವಾನಗಿ ಪರಿಶೀಲನೆಗಾಗಿ 1ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ 12,000 ಮುಂಗಡವಾಗಿ ಪಡೆದಿದ್ದರು. ಈ ಬಗ್ಗೆ ರಂಗಧಾಮಯ್ಯ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು.
ಶುಕ್ರವಾರ ಬಾಕಿ ಮೊತ್ತ 43,000 ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮಹಾಂತೇಗೌಡ ಕಾರು ಏರಿ ಪರಾರಿಯಾಗಲು ಯತ್ನಿಸಿದ್ದರೆನ್ನಲಾಗಿದೆ.
ಬೆನ್ನಟ್ಟಿ ಹಿಡಿದ ಅಧಿಕಾರಿಗಳು
15 ಕಿ.ಮೀ.ವರೆಗೂ ಆರೋಪಿಯನ್ನು ಬೆನ್ನಟ್ಟಿ ಹೋದ ಲೋಕಾಯುಕ್ತ ಪೊಲೀಸರು, ನೆಲಮಂಗಲದ ಸೊಂಡೆಕೊಪ್ಪ ರಸ್ತೆ ಬಳಿ ಸುತ್ತುವರೆದಿದ್ದಾರೆ. ಅದಾಗ್ಯೂ. ಅಧಿಕಾರಿಗಳ ಮೇಲೆ ವಾಹನವನ್ನು ಚಲಾಯಿಸಲು ಪ್ರಯತ್ನಿಸಿದಾಗ, ಲೋಕಾಯುಕ್ತದ ಟಾಟಾ ಸುಮೊ ವಾಹನವನ್ನು ಅಡ್ಡ ಇಟ್ಟು, ಢಿಕ್ಕಿ ಹೊಡೆಸಿ ಮಹಾಂತೇಗೌಡರನ್ನು ಲಂಚದ ಹಣದ ಸಮೇತ ಬಂಧಿಸಲಾಗಿದೆ ಎಂದು ಲೋಕಾಯುಕ್ತದ ಬೆಂಗಳೂರು ನಗರ ಎಸ್ ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸಿರುವ ಪ್ರಕರಣದ ಜತೆಯಲ್ಲಿ ಹಲ್ಲೆ ಮತ್ತು ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ತಡೆದ ಆರೋಪದ ಮೇಲೆ ಅಧಿಕಾರಿಯ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.







