ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಕಾಲೇಜು ಆವರಣದಲ್ಲಿ ಅಪಘಾತ; ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ಬೆಂಗಳೂರು, ಅ.07: ನಗರದ ಪ್ರತಿಷ್ಠಿತ ಮಹಾರಾಣಿ ಕ್ಲಸ್ಟರ್ ಕಾಲೇಜು ಆವರಣದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ವಿದ್ಯಾರ್ಥಿನಿಯರು ಹಾಗೂ ಮ್ಯೂಸಿಕ್ ಟೀಚರ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡಿರುವುದು ಶನಿವಾರ ವರದಿಯಾಗಿದೆ.
ಕಾಲೇಜು ಆವರಣದಲ್ಲಿ ಅತಿ ವೇಗದಲ್ಲಿದ್ದ ಇಂಗ್ಲಿಷ್ ಪ್ರೊಫೆಸರ್ ಒಬ್ಬರ ಕಾರು ಇಬ್ಬರು ವಿದ್ಯಾರ್ಥಿನಿಯರು ಮತ್ತು ಮ್ಯೂಸಿಕ್ ಟೀಚರ್‌ಗೆ ಢಿಕ್ಕಿ ಹೊಡೆದೆ ಎಂದು ಹೇಳಲಾಗಿದೆ.
ಘಟನೆಯಲ್ಲಿ ಬಿಕಾಂ ವಿದ್ಯಾರ್ಥಿ ಅಶ್ವಿನಿ, ಮತ್ತೊಬ್ಬ ವಿದ್ಯಾರ್ಥಿನಿ ನಂದುಪ್ರಿಯಾಗೆ ಗಂಭೀರ ಗಾಯಗಳಾಗಿವೆ. ಹಾಗೂ ಮ್ಯೂಸಿಕ್ ಟೀಚರ್ ಜ್ಯೋತಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸದ್ಯ ಗಾಯಾಳುಗಳನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾವುದೇ ಆತಂಕವಿಲ್ಲ, ಚಿಕಿತ್ಸೆಗೆ ವಿದ್ಯಾರ್ಥಿನಿಯರು ಸ್ವಂದಿಸುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಗಾಯಾಳು ಅಶ್ವಿನಿ ಗಂಗಾವತಿ ಮೂಲದವರಾಗಿದ್ದು ಆರ್.ಟಿ. ನಗರದ ಪಿಜಿಯಲ್ಲಿ ವಾಸವಿದ್ದರು. ಮಹಾರಾಣಿ ಕಾಲೇಜು ಆವರಣದಲ್ಲಿ ಬೆಳಗ್ಗೆ 9.35ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ʼʼ ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣʼʼ
ಇನ್ನು ಅಪಘಾತ ಸಂಬಂಧ ಪ್ರತಿಕ್ರಿಯೆ ನೀಡಿದ ಮಹಾರಾಣಿ ಕ್ಲಸ್ಟರ್ ವಿವಿ ಸಿಂಡಿಕೇಟ್ ಸದಸ್ಯ ಚಿಕ್ಕಮುನಿಯಪ್ಪ, ʼʼಪ್ರೊ.ನಾಗರಾಜ್ ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ. ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದರೂ ಸ್ಥಳಕ್ಕೆ ಕುಲಪತಿ ಆಗಮಿಸಿಲ್ಲ ಎಂದು ಕುಲಪತಿ ಗೋಮತಿ ದೇವಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರೊ.ಹೆಚ್.ನಾಗರಾಜ್ ಆವರಣದಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ನಿಯಂತ್ರಣ ಸಿಗದೆ ಪಾರ್ಕಿಂಗ್ನಲ್ಲಿದ್ದ ಮತ್ತೊಂದು ಕಾರಿಗೆ ಢಿಕ್ಕಿಯಾಗಿದೆ. ಈ ವೇಳೆ ನಡೆದುಕೊಂಡು ಬರುತ್ತಿದ್ದ ಮೂವರಿಗೆ ಗಾಯವಾಗಿದೆʼʼ ಎಂದು ಚಿಕ್ಕಮುನಿಯಪ್ಪ ಅವರು ತಿಳಿಸಿದರು.







