ತಪ್ಪು ಮಾಡಿದ್ದಾರೆಂದು ಕ್ರಮ ಕೈಗೊಂಡರೆ ಅಧಿಕಾರಿಗಳ ಗ್ಯಾಲರಿಯೇ ಖಾಲಿಯಾಗಲಿದೆ: ಸ್ಪೀಕರ್ ಯು.ಟಿ. ಖಾದರ್ ಹೀಗೆ ಹೇಳಿದ್ದು ಏಕೆ?

ಬೆಳಗಾವಿ (ಸುವರ್ಣ ವಿಧಾನಸೌಧ): ‘ಅಧಿಕಾರಿಗಳು ತಪ್ಪು ಮಾಡಿದ್ದಾರೆಂದು ಕ್ರಮ ಕೈಗೊಳ್ಳುತ್ತಾ ಹೋದರೆ ವಿಧಾನಸಭೆಯಲ್ಲಿನ ಅಧಿಕಾರಿಗಳ ಗ್ಯಾಲರಿಯೇ ಖಾಲಿ ಖಾಲಿಯಾಗಲಿದೆ’ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು, ಸದಸ್ಯರೊಬ್ಬರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಪ್ರಸಂಗ ನಡೆಯಿತು.
ಗುರುವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಶರಣಗೌಡ ಕಂದಕೂರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ‘ವಿಧಾನಸಭೆ ಬದಲಿಗೆ ವಿಧಾನ ಪರಿಷತ್’ ಎಂದು ತಪ್ಪಾಗಿ ನಮೂದಿಸಿ ಉತ್ತರ ನೀಡಿದ್ದರು. ಇದರಿಂದ ಆಕ್ರೋಶಿತರಾದ ಶರಣಗೌಡ ಕಂದಕೂರ್, ನಾನು ವಿಧಾನಸಭೆ ಸದಸ್ಯ. ಆದರೆ, ಅಧಿಕಾರಿಗಳು ವಿಧಾನ ಪರಿಷತ್ ಎಂದು ತಪ್ಪಾಗಿ ಉತ್ತರ ನೀಡಿದ್ದಾರೆಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ, ನನಗೆ ನೀಡಿದ ಉತ್ತರದಲ್ಲಿ ವಿಧಾನಸಭೆ ಎಂದು ಇದೆ. ಆ ಪ್ರತಿಯನ್ನು ತಮಗೆ ಕಳುಹಿಸುತ್ತೇನೆ ಎಂದರು. ತಪ್ಪಾಗಿ ಉತ್ತರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶರಣಗೌಡ ಕಂದಕೂರ್ ಆಗ್ರಹಿಸಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ತಪ್ಪಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡದರೆ ಅಧಿಕಾರಿಗಳ ಗ್ಯಾಲರಿ ಖಾಲಿಯಾಗಲಿದೆ ಎಂದು ಪ್ರತಿಕ್ರಿಯೆ ನೀಡಿದರು.







