ಹಾಲಿನ ಖರೀದಿ ದರ ಹೆಚ್ಚಳಕ್ಕೆ ಪರಿಶೀಲನೆ : ಕೆ.ವೆಂಕಟೇಶ್

ಬೆಂಗಳೂರು : ಹಾಲಿನ ಮಾರಾಟ ದರವನ್ನು ಹೆಚ್ಚಿಸಿ, ಹಾಲಿನ ಖರೀದಿ ದರವನ್ನು ಹೆಚ್ಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರ ಪರಿಶೀಲನೆಯಲ್ಲಿದೆ ಎಂದು ಪಶುಸಂಗೋಪನೆ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಬುಧವಾರ ಪರಿಷತ್ತನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಡಾ.ಉಮಾಶ್ರೀ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲಿನ ಖರೀದಿ ದರ ಹೆಚ್ಚಿಸುವ ಸಂಬಂಧ ಇರುವ ಸಾಧಕ-ಭಾದಕಗಳ ಬಗ್ಗೆ ರಾಜ್ಯ ಸರಕಾರದ ಪಶು ಸಂಗೋಪನೆ ಮತ್ತು ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳು, ವ್ಯವಸ್ಥಾಪಕ ನಿರ್ದೇಶಕರುಗಳು, ಸರಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ ಚರ್ಚಿಸಲಾಗುತ್ತಿದೆ ಎಂದರು.
ಒಟ್ಟು 9,04,547 ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಪಾವತಿಸಲು ಬಾಕಿ ಇದೆ. ಅದರಲ್ಲಿ ಸಾಮಾನ್ಯ ವರ್ಗದ 8,17,074 ಹಾಲು ಉತ್ಪಾದಕರಿಗೆ 5 ತಿಂಗಳು, ಪರಿಶಿಷ್ಟ ಜಾತಿಯ 52,467 ಹಾಲು ಉತ್ಪಾದಕರಿಗೆ 2 ತಿಂಗಳು ಮತ್ತು ಪರಿಶಿಷ್ಟ ಪಂಗಡದ 35,006 ಹಾಲು ಉತ್ಪಾದಕರಿಗೆ 4 ತಿಂಗಳುಗಳಿಗೆ ಪಾವತಿ ಬಾಕಿ ಇರುತ್ತದೆ. ರಾಜ್ಯದ ರೈತರಿಗೆ ಪ್ರೋತ್ಸಾಹಧನ ಪಾವತಿಸುವಲ್ಲಿ ವಿಳಂಬವಾಗಿರುವುದರಿಂದ ರೈತರು ಸಂಕಷ್ಟದಲ್ಲಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ಕೆ.ವೆಂಕಟೇಶ್ ತಿಳಿಸಿದರು.
ಪ್ರಸ್ತುತ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು ಮಾಹೆಯಾನ ಸರಾಸರಿ 72 ಸಾವಿರ ಮೆ.ಟನ್ ಪಶು ಆಹಾರವನ್ನು ಉತ್ಪಾದಿಸಿ ರಾಜ್ಯದ ಹೈನುಗಾರರಿಗೆ ಒಕ್ಕೂಟಗಳ ಮೂಲಕ ಸರಬರಾಜು ಮಾಡುತ್ತಿದ್ದು, ಪಶು ಆಹಾರ ಘಟಕಗಳು ಹಾಗೂ ಪಿಪಿಪಿ ಮಾದರಿಯ ಪಶು ಆಹಾರ ಘಟಕಗಳಿಂದ ಒಟ್ಟಾರೆ ವಾರ್ಷಿಕವಾಗಿ ಅಂದಾಜು 8.65 ಲಕ್ಷ ಮೆ.ಟನ್ ಪಶು ಆಹಾರವನ್ನು ರಾಜ್ಯದ ಹೈನುಗಾರರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಕೆ.ವೆಂಕಟೇಶ್ ಹೇಳಿದರು.
ಅಲ್ಲದೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ ಪಶು ಆಹಾರ ಘಟಕಗಳಿಗೆ ಮಾತ್ರ ವಾರ್ಷಿಕವಾಗಿ ಅಂದಾಜು 1.6 ಲಕ್ಷ ಮೆ.ಟನ್‍ಗಳಷ್ಟು ಮೆಕ್ಕೆಜೋಳದ ಅವಶ್ಯವಿರುತ್ತದೆ ಎಂದು ಕೆ.ವೆಂಕಟೇಶ್ ವಿವರಿಸಿದರು.
2019-2020ರ ಸಾಲಿನಿಂದಲೂ ಪಶು ಆಹಾರ ಉತ್ಪಾದನೆಗೆ ಅವಶ್ಯವಿರುವ ಮೆಕ್ಕೆಜೋಳವನ್ನು ರೈತರ ಮುಖಾಂತರ 4ಜಿ ವಿನಾಯಿತಿ ಪಡೆದು ನೇರವಾಗಿ ಖರೀದಿಸಲಾಗುತ್ತಿದೆ. ರೈತರ ಮುಖಾಂತರ ನೇರವಾಗಿ ಮೆಕ್ಕೆಜೋಳ ಖರೀದಿ ಸಂಬಂಧ 2023-24ನೇ ಸಾಲಿನ ಅಂತ್ಯಕ್ಕೆ 1.08 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಖರೀದಿಸಲಾಗಿದ್ದು, ಇದರ ಮೊತ್ತ ಅಂದಾಜು 183 ಕೋಟಿ ರೂ.ಗಳನ್ನು ಸಂಬಂಧಪಟ್ಟ ರೈತರಿಗೆ ಡಿಬಿಟಿ ಮುಖಾಂತರ ಪಾವತಿಸಲಾಗಿದೆ ಎಂದು ಕೆ.ವೆಂಕಟೇಶ್ ತಿಳಿಸಿದರು.
ಪ್ರಸಕ್ತ ಸಾಲಿಗೆ ಮೆಕ್ಕೆಜೋಳವನ್ನು ಎಂಎಸ್‍ಪಿ ದರದಂತೆ 2,225 ರೂ. ಹಾಗೂ 175 ರೂ.ಗಳ ಪ್ರೋತ್ಸಾಹ ಧನದೊಂದಿಗೆ ಒಟ್ಟು 2,400 ರೂ. ಪ್ರತಿ ಕ್ವಿಂಟಾಲ್‍ಗೆ ರೈತರಿಂದ ನೇರವಾಗಿ ಖರೀದಿಸಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಯಥೇಚ್ಛವಾಗಿ ಮೆಕ್ಕೆಜೋಳ ಬೆಳೆಯುವ ರಾಜ್ಯದ ವಿವಿಧ ಭಾಗಗಳಲ್ಲಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೇಂದ್ರಗಳನ್ನು ತೆರೆದು ರೈತರಿಂದ ನೇರವಾಗಿ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೆ.ವೆಂಕಟೇಶ್ ಹೇಳಿದರು.
655.49 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ: ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನಕ್ಕೆ ಸಂಬಂಧಿಸಿದಂತೆ ಸಾಮಾನ್ಯ ವರ್ಗದ 613 ಕೋಟಿ ರೂ, ಪರಿಶಿಷ್ಟ ಜಾತಿ 18.29 ಕೋಟಿ ರೂ., ಪರಿಶಿಷ್ಟ ಪಂಗಡದ 24.20 ಕೋಟಿ ರೂ.ನಂತೆ ತಿಂಗಳುವಾರು 9,04,547 ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಪಾವತಿಸಲು ಬಾಕಿ ಇರುತ್ತದೆ. ಪ್ರೋತ್ಸಾಹಧನ ನೀಡಲು ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೆ.ವೆಂಕಟೇಶ್ ತಿಳಿಸಿದರು.







