ಆರೆಸ್ಸೆಸ್ ಕುರಿತ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ನಟ ಚೇತನ್ ವಿರೋಧ

ಧಾರವಾಡ: ಆರೆಸ್ಸೆಸ್ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆ ಮತ್ತು ಸಂಘಟನೆಗಳ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ನಟ ಚೇತನ್, ಯಾವುದೇ ಸಂಘಟನೆಯನ್ನು ಆಯ್ದು ಗುರಿಯಾಗಿಸಿ ನಿಷೇಧಿಸುವ ಕ್ರಮವನ್ನು ಒಪ್ಪುವುದಿಲ್ಲ ಎಂದು ಅವರು ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಉಲ್ಲಂಘಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ರಾಜಕೀಯ ಪ್ರತಿಸ್ಪರ್ಧಿಗಳ ಬಾಯಿ ಮುಚ್ಚಿಸಲು ಅಥವಾ ಚುನಾವಣಾ ಲಾಭಕ್ಕಾಗಿ ಸಂಘಟನೆಗಳನ್ನು ಗುರಿಯಾಗಿಸುವುದು ಸರ್ವಾಧಿಕಾರಿ ಧೋರಣೆಯಾಗುತ್ತದೆ ಎಂದರು.
"ಯಾವುದೇ ವಿಚಾರವನ್ನು ನಿಷೇದ ಮಾಡುವ ಬದಲು, ವಿಚಾರಗಳ ಮೂಲಕವೇ ಎದುರಿಸಬೇಕು. ತನ್ನ ಸಿದ್ಧಾಂತದ ಮೇಲೆ ವಿಶ್ವಾಸ ಇಲ್ಲದಿದ್ದಾಗ ಮಾತ್ರ ನಿಷೇಧದಂತಹ ಕ್ರಮಕ್ಕೆ ಮುಂದಾಗುತ್ತಾರೆ" ಎಂದು ಅಭಿಪ್ರಾಯಪಟ್ಟರು.
ಆರೆಸ್ಸೆಸ್ ಸೇರಿದಂತೆ ಯಾವುದೇ ಸಂಘಟನೆ ನೋಂದಣಿ ಮಾಡಿಸದೇ ಕಾರ್ಯನಿರ್ವಹಿಸುತ್ತಿದ್ದರೆ, ಅವುಗಳನ್ನು ಕಾನೂನುಬದ್ಧವಾಗಿ ನೋಂದಣಿ ಮಾಡಿಸಿ ಪಾರದರ್ಶಕವಾಗಿ ಕೆಲಸ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ ಕೇವಲ ಆರೆಸ್ಸೆಸ್ ಅನ್ನೇ ಗುರಿಯಾಗಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
"ನಾವು ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪುವುದಿಲ್ಲ. ಆದರೆ ಅವರು ತಮ್ಮ ವಿಚಾರಗಳನ್ನು ಮಂಡಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಆ ಹಕ್ಕನ್ನು ನಾವು ಗೌರವಿಸುತ್ತೇವೆ" ಎಂದು ಚೇತನ್ ಹೇಳಿದರು.
ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ:
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮಾತನಾಡಿದ ಚೇತನ್, ಸುಮಾರು 9,600 ಎಕರೆ ಫಲವತ್ತಾದ ರೈತರ ಭೂಮಿಯನ್ನು ಕೈಗಾರಿಕೆ ಮತ್ತು ಶ್ರೀಮಂತರ ಅಭಿವೃದ್ಧಿಗಾಗಿ ಬಳಸುವ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸಿದರು.
ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಿಲುವು ಬಡವರ ಪರವಾಗಿಲ್ಲ, ಬದಲಾಗಿ ಶ್ರೀಮಂತರ ಪರವಾಗಿದೆ ಎಂಬ ಭಾವನೆ ಮೂಡುತ್ತಿದೆ ಎಂದು ಟೀಕಿಸಿದರು. ರೈತರ ಹಿತಾಸಕ್ತಿಯನ್ನು ಕಾಪಾಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೇ ಈಗ ರೈತರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದು ಆರೋಪಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ಜನವಿರೋಧಿಯಾಗಿದ್ದು, ಅದನ್ನು ಕೈಬಿಡಬೇಕು ಎಂದು ಆಗ್ರಹಿಸಿದ ಅವರು, ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಪರ ನೀತಿಗಳಿಂದ ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟರು.






