‘ನೀವು ಸುಳ್ಳು ಹೇಳುತ್ತಿದ್ದೀರಿ’: ಮತದಾರರ ಪಟ್ಟಿ ವಿವಾದದ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಿದ ನಟ ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್ (Photo: PTI)
ಬೆಂಗಳೂರು : ‘ನನ್ನ ಮತದಾರರ ಗುರುತಿನ ಚೀಟಿಯ ಸ್ಥಿತಿಯನ್ನು ಮೊದಲು ಬದಲಾಯಿಸಲಾಗಿದೆ ಎಂದು ತೋರಿಸಿ, ಬಳಿಕ ನಾನು ವಿಳಾಸ ಬದಲಿಸಿಕೊಂಡಿದ್ದೇನೆ ಎಂದು ಹೇಳುತ್ತಿದ್ದೀರಿ’ ಎಂದು ಆರೋಪಿಸಿರುವ ನಟ ಪ್ರಕಾಶ್ ರಾಜ್, ಕರ್ನಾಟಕ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ತಮ್ಮ ಹೆಸರು ಬೆಂಗಳೂರು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಪ್ರಕಾಶ್ ರಾಜ್ ಈ ಹಿಂದೆ ಆರೋಪಿಸಿದ್ದರು. ಇದಕ್ಕೆ ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಿದ ಬಳಿಕ ಅವರು ಗುರುವಾರ ಎಕ್ಸ್ ನಲ್ಲಿ ಮತ್ತೊಂದು ವೀಡಿಯೊ ಹಂಚಿಕೊಂಡಿದ್ದಾರೆ.
‘ನನ್ನ ಮತದಾರರ ಗುರುತಿನ ಚೀಟಿಯ ಸ್ಥಿತಿಯನ್ನು ನಿಮ್ಮ ವೆಬ್ಸೈಟ್ ನಲ್ಲಿ ‘ಶಾಶ್ವತವಾಗಿ ಬದಲಾಯಿಸಲಾಗಿದೆ’ ಎಂದು ತೋರಿಸಿದ್ದೀರಿ. ಇದು ನನ್ನ ಹೆಸರನ್ನು ಅಳಿಸಲಾಗಿದೆ ಎಂದರ್ಥ. ಹೀಗಾಗಿ ನಾನು ಫಾರ್ಮ್–6 ಭರ್ತಿ ಮಾಡಿ ಹೊಸ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಬೇಕು’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ತಾನು ಈ ವಿಚಾರವನ್ನು ಪ್ರಶ್ನಿಸಿದ ಬಳಿಕ ಚುನಾವಣಾ ಆಯೋಗದ ಅಧಿಕಾರಿಗಳು ಕರೆ ಮಾಡಿ ತಪ್ಪಾಗಿದೆ ಎಂದು ಹೇಳಿದ್ದರು. ಅದನ್ನು ಸರಿಪಡಿಸುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವಂತೆ ತನ್ನನ್ನು ಕೇಳಿದ್ದರು ಎಂದೂ ಅವರು ಹೇಳಿದ್ದಾರೆ.
‘ಆದರೆ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಬೇರೆ ರೀತಿಯ ಹೇಳಿಕೆ ನೀಡಿದ್ದೀರಿ. ವೆಬ್ಸೈಟ್ ನಲ್ಲಿನ ಮಾಹಿತಿಯನ್ನು ಬದಲಿಸಿ, ನಾನು ಸ್ಥಳಾಂತರಗೊಂಡಿದ್ದೇನೆ ಎಂದು ಹೇಳಿದ್ದೀರಿ. ನನ್ನ ಹೆಸರು ಅಳಿಸಲಾಗಿದೆ ಎಂದು ಸುಳ್ಳು ಎಂದು ಹೇಳಿದ್ದೀರಿ. ನೀವು ಸುಳ್ಳು ಹೇಳುತ್ತಿದ್ದೀರಿ’ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಹಳೆಯ ವಿಳಾಸಕ್ಕೆ ರಾತ್ರಿ 8.30ರ ವೇಳೆಗೆ ಬೂತ್ ಮಟ್ಟದ ಅಧಿಕಾರಿಯನ್ನು ಕಳುಹಿಸಿ ಪರಿಶೀಲನೆ ನಡೆಸಿರುವುದನ್ನೂ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
‘ಅಧಿಕಾರಿ ಮನೆಯ ಮುಂದೆ ಕ್ಯಾಮೆರಾದೊಂದಿಗೆ ನಿಂತು, ನೆರೆಹೊರೆಯವರನ್ನು ಕರೆದು ವಿಚಾರಿಸಿ, ಬಳಿಕ ಮಹಜರು ನಡೆಸಲಾಗಿದೆ ಎಂದು ತೋರಿಸಲಾಗಿದೆ. ಸಮಸ್ಯೆ ಕೈಮೀರಿದ ಬಳಿಕ ಈ ಪ್ರಕ್ರಿಯೆ ನಡೆಸಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ನಾನು ಸೆಲೆಬ್ರಿಟಿ. ಆದರೆ ಈ ದೇಶದ ಇತರ ನಾಗರಿಕರಂತೆಯೇ ನನಗೂ ಹಕ್ಕುಗಳಿವೆ. ನನ್ನ ಕೆಲಸದಿಂದಾಗಿ ನಾನು ಸೆಲೆಬ್ರಿಟಿಯಾಗಿದ್ದೇನೆ. ಆದರೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನನಾಗಿದ್ದೇನೆ. ಈ ಹೋರಾಟ ನಾಗರಿಕನ ಘನತೆಯ ಕುರಿತದ್ದು’ ಎಂದು ಅವರು ಹೇಳಿದ್ದಾರೆ.
‘ಇನ್ನಷ್ಟು ವೀಡಿಯೊಗಳು, ಇನ್ನಷ್ಟು ಸ್ಪಷ್ಟೀಕರಣಗಳು ಮತ್ತು ಮುಂದಿನ ಪತ್ರಿಕಾಗೋಷ್ಠಿ. ಆಟ ಮುಂದುವರಿಯುತ್ತದೆ’ ಎಂದೂ ಅವರು ಹೇಳಿದ್ದಾರೆ.
ಏನಿದು ವಿವಾದ?
ಮಂಗಳವಾರ ಪ್ರಕಾಶ್ ರಾಜ್ ಅವರು ಹಂಚಿಕೊಂಡಿದ್ದ ವೀಡಿಯೊದಲ್ಲಿ, SIR ಸಂದರ್ಭದಲ್ಲಿ ಬೆಂಗಳೂರು ಮತದಾರರ ಪಟ್ಟಿಯಿಂದ ತಮ್ಮ ಹೆಸರು ಅಳಿಸಲಾಗಿದೆ ಎಂದು ಆರೋಪಿಸಿದ್ದರು. ತಾನು ಇದೇ ಕ್ಷೇತ್ರದಲ್ಲಿ ಹುಟ್ಟಿ ಬೆಳೆದಿದ್ದು, ಶಾಲೆ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾಗಿ ಹಾಗೂ ಅಲ್ಲಿನ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾಗಿ ಅವರು ಹೇಳಿದ್ದರು. ಬೆಂಗಳೂರು ಕ್ಷೇತ್ರದಲ್ಲಿ 65 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದೂ ಅವರು ಆರೋಪಿಸಿದ್ದರು. ಪ್ರಕಾಶ್ ರಾಜ್ 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಅಧಿಕಾರಿಗಳ ಸ್ಪಷ್ಟನೆ
ಬೆಂಗಳೂರು ಕೇಂದ್ರ ವಲಯದ ಅಧಿಕಾರಿಗಳ ಪ್ರಕಾರ, ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗಿಲ್ಲ. ಆದರೆ ಅವರು ನೋಂದಾಯಿತ ಹಳೆಯ ವಿಳಾಸದಿಂದ ಸ್ಥಳಾಂತರಗೊಂಡಿರುವುದು ಪರಿಶೀಲನೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಅವರ ಮತದಾರರ ದಾಖಲೆಯಲ್ಲಿ ‘ಸ್ಥಳಾಂತರಿಸಲಾಗಿದೆ’ ಎಂದು ನಮೂದಿಸಲಾಗಿದೆ.
ಬೂತ್ ಮಟ್ಟದ ಅಧಿಕಾರಿಯ ಪರಿಶೀಲನೆಯ ವೇಳೆ ಪ್ರಕಾಶ್ ರಾಜ್ ಅವರು ಮತದಾರರಾಗಿ ನೋಂದಾಯಿಸಿಕೊಂಡಿದ್ದ ವಿಳಾಸದಿಂದ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕಾಶ್ ರಾಜ್ ಕಳೆದ ನಾಲ್ಕು ವರ್ಷಗಳಿಂದ ಆ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದು ನೆರೆಹೊರೆಯವರು, ಅಪಾರ್ಟ್ಮೆಂಟ್ನ ನಿರ್ವಹಣಾಧಿಕಾರಿ ಮತ್ತು ಫ್ಲ್ಯಾಟ್ ಮಾಲಕರು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪರಿಶೀಲನೆಯ ಬಳಿಕ ಅವರ ಮತದಾರರ ಸ್ಥಿತಿಯನ್ನು ‘ಸ್ಥಳಾಂತರಿಸಲಾಗಿದೆ’ ಎಂದು ಗುರುತಿಸಲಾಗಿದೆ. ಕ್ಷೇತ್ರದೊಳಗಿನ ಬೇರೆ ಸ್ಥಳದಲ್ಲಿ ತಾವು ವಾಸಿಸುತ್ತಿರುವುದನ್ನು ಪ್ರಕಾಶ್ ರಾಜ್ ದೂರವಾಣಿ ಮೂಲಕ ದೃಢಪಡಿಸಿದ್ದರು. ಆದರೆ ನೋಂದಾಯಿತ ಹಳೆಯ ವಿಳಾಸದಲ್ಲಿ ತಾವು ಇನ್ನು ಮುಂದೆ ವಾಸಿಸುತ್ತಿಲ್ಲ ಎಂಬುದನ್ನೂ ಅವರು ಒಪ್ಪಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SIR ನಿಯಮಿತ ಪ್ರಕ್ರಿಯೆಯಾಗಿದ್ದು, ನಿಖರವಾದ ಮತ್ತು ಸ್ವಚ್ಛವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಇದರ ಉದ್ದೇಶ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ.
ಪ್ರಕಾಶ್ ರಾಜ್ ತಮ್ಮ ಪ್ರಸ್ತುತ ನಿವಾಸದ ವಿಳಾಸದಲ್ಲಿ ಫಾರ್ಮ್–6 ಮೂಲಕ ಮತದಾರರಾಗಿ ಮರು ನೋಂದಣಿ ಮಾಡಿಕೊಳ್ಳಬಹುದು ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿ (ಕೇಂದ್ರ) ಜಗದೀಶ್ ಜಿ ತಿಳಿಸಿದ್ದಾರೆ.






